ಹಿಮಪಾತ: ನಾಲ್ವರು ಪರ್ವತಾರೋಹಿಗಳ ರಕ್ಷಣೆ

Update: 2019-06-02 17:15 GMT

ಹೊಸದಿಲ್ಲಿ, ಮೇ 2: ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಹಿಮಪಾತದಿಂದ ನಾಲ್ವರು ಬ್ರಿಟಿಶ್ ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ನಿನ್ನೆ ಕಾಣೆಯಾಗಿರುವ 8 ಮಂದಿ ಪರ್ವತಾರೋಹಿಗಳ ಹುಡುಕಾಟ ಇಂದು ಕೂಡ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಎರಡನೇ ಅತಿ ಎತ್ತರದ ಪರ್ವತ ನಂದಾ ದೇವಿಯ ತಳಭಾಗದಲ್ಲಿ ಈ ನಾಲ್ವರು ಬ್ರಿಟೀಷ್ ಪರ್ವತಾರೋಹಿಗಳನ್ನು ಗುರುತಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಲಾಯಿತು.

ಪರ್ವತ ಶಿಖರಗಳಲ್ಲಿ ಎರಡು ಹೆಲಿಕಾಫ್ಟರ್ ಮೂಲಕ ರಕ್ಷಣಾ ಕಾರ್ಯಕರ್ತರು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಎರಡನೇ ದಿನಕ್ಕೆ ಮುಂದುವರಿದಿದೆ. ಆದರೆ, ಪ್ರತಿಕೂಲ ಹವಾಮಾನ ಶೋಧ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುತ್ತಿದೆ.

ಕಳೆದ ವಾರ ಪರ್ವತಾರೋಹಣಕ್ಕೆ ತೆರಳಿದ ನಾಲ್ವರು ಬ್ರಿಟೀಷರು, ಇಬ್ಬರು ಅಮೆರಿಕದವರು, ಓರ್ವ ಆಸ್ಟ್ರೇಲಿಯಾದ ಮಹಿಳೆ ಹಾಗೂ ಓರ್ವ ಭಾರತದ ವ್ಯಕ್ತಿ ನಾಪತ್ತೆಯಾಗಿದ್ದರು.

ಈಗ ರಕ್ಷಿಸಲಾದ ನಾಲ್ವರು ಬ್ರಿಟೀಶರು ಈ ಮೊದಲು ನಾಪತ್ತೆಯಾದ 8 ಮಂದಿಯ ಗುಂಪಿಗೆ ಸೇರಿದವರಲ್ಲ. ಇವರೊಂದಿಗೆ ಪರ್ವತದಲ್ಲಿ ಹಿಮಪಾತ ಸಂಭವಿಸಿದ ಎರಡು ದಿನಗಳಿಗಿಂತ ಮುನ್ನ ನಾವು ಸಂಪರ್ಕದಲ್ಲಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ನಾಲ್ವರು ಬ್ರಿಟೀಶ್ ಪರ್ವತಾರೋಹಿಗಳು ಪ್ರತ್ಯೇಕವಾಗಿ ಪರ್ವತಾರೋಹಣ ಮಾಡುತ್ತಿದ್ದರು. ಭಾರೀ ಹಿಮಪಾತ ಹಾಗೂ ಪ್ರತಿಕೂಲ ಹವಾಮಾನದಿಂದ ಅವರು ಪರ್ವತದ ತಳದಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದು ಪಿತೌರಾಗಢ ಜಿಲ್ಲೆಯ ಪೊಲೀಸ್ ವರಿಷ್ಠ ಆರ್.ಸಿ. ರಾಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News