ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ‘ಐಪಿಎಸ್ ಅಧಿಕಾರಿ’ಯ ಬಂಧನ!

Update: 2019-06-02 17:35 GMT

ಜೈಪುರ, ಜೂ.2: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದ, ಸ್ಪೂರ್ತಿದಾಯಕ ಭಾಷಣಗಳ ಮೂಲಕ  ಪ್ರಸಿದ್ಧಿ ಗಳಿಸಿದ್ದ ‘ನಕಲಿ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಐಟಿ ಮತ್ತು ಯುಪಿಎಸ್ಸಿ ಪರೀಕ್ಷೆಗಳಲ್ಲಿ ತಾನು ಹೇಗೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾದೆ ಎಂದು ವಿವರಿಸುವ ‘ಸ್ಪೂರ್ತಿದಾಯಕ ಭಾಷಣ’ಗಳನ್ನು ಪಿಯುಸಿಯಲ್ಲಿ ಅನುತ್ತೀರ್ಣನಾಗಿದ್ದ ಈತ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಈ ನಕಲಿ ಐಪಿಎಸ್ ಅಧಿಕಾರಿಯನ್ನು ಅಭಯ್ ಮೀನಾ ಎಂದು ಗುರುತಿಸಲಾಗಿದೆ. ಈತ ಹಲವು ಪೊಲೀಸರಿಗೆ ಮೆಡಲ್ ಮತ್ತು ಸರ್ಟಿಫಿಕೆಟ್ ಗಳನ್ನು ಪ್ರದಾನಿಸಿದ್ದ ಎನ್ನಲಾಗಿದೆ.

ಅಭಯ್ ಮೀನಾ ತನ್ನ ಪೊಲೀಸ್ ಕಾರ್ಡನ್ನು ತೋರಿಸಿದಾಗ ವ್ಯಕ್ತಿಯೊಬ್ಬರಿಗೆ ಈ ಬಗ್ಗೆ ಸಂಶಯ ಹುಟ್ಟಿತ್ತು. ಕಾರಣ ಅದಲ್ಲಿ ಕ್ರೈಮ್ ಬ್ರಾಂಚ್ ಅನ್ನು ‘ಬ್ರಾಂಚೆ’ ಎಂದು ಕ್ಯಾಪಿಟಲ್ ಅನ್ನು ‘ಕ್ಯಾಪಿಟೋಲ್’ ಎಂದು ಬರೆಯಲಾಗಿತ್ತು.

ಆತನ ಅಪಾರ್ಟ್ ಮೆಂಟ್ ಗೆ ನುಗ್ಗಿದ ಪೊಲೀಸರು ಆತನನ್ನು ಬಂಧಿಸಿದಾಗ ಅಭಯ್ ತನ್ನ ಪ್ರಭಾವ ಬಳಸಿ ಬೆದರಿಸಲು ಯತ್ನಿಸಿದ್ದ. ತ್ರೀ ಸ್ಟಾರ್ ಪೊಲೀಸ್ ಪ್ಲೇಟ್ ಇರುವ ಕಾರಿನಲ್ಲೇ ಈತ ನಗರದಲ್ಲೆಲ್ಲಾ ಸುತ್ತಾಡುತ್ತಿದ್ದ. ಈತನನ್ನು ಫ್ಯಾಶನ್ ಶೋ, ಪಾರ್ಟಿಗಳಿಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತಿತ್ತು. ಐಐಟಿ ಪ್ರವೇಶ ಪರೀಕ್ಷೆ ಮತ್ತು ಯುಪಿಎಸ್ಸಿ ಪರೀಕ್ಷೆಗಳಲ್ಲಿ ಹೇಗೆ ಉತ್ತೀರ್ಣರಾಗುವುದು ಎನ್ನುವ ಬಗ್ಗೆ ಈತ ಟಾಕ್ ಶೋಗಳನ್ನು ನಡೆಸುತ್ತಿದ್ದ ಎಂದು ವರದಿಯಾಗಿದೆ.

ಈತ ಕೆಲವು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಅವರನ್ನು ಅಭಿನಂದಿಸಿದ್ದ. ದುರಂತವೆಂದರೆ ಅವರಲ್ಲಿ ಹಲವರು ಆತನಿಗೆ ಸೆಲ್ಯೂಟ್ ಹೊಡೆದಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News