ಅವರನ್ನು ನೆನೆದು ‘ಕೋಟಿ’ ಕಂಗಳು ತುಂಬಿ ಬಂದವು

Update: 2019-06-02 18:36 GMT

ಮನುಷ್ಯರಷ್ಟೇ ಪಕ್ಷಿಗಳೂ ಕೂಡ ಅವರೊಟ್ಟಿಗೆ ಬಹುದೊಡ್ಡ ಒಡನಾಟ ಇಟ್ಟುಕೊಂಡಿದ್ದವು ಮತ್ತು ಅವರನ್ನು ಆ ಪಕ್ಷಿಗಳು ಪ್ರೀತಿಸುತ್ತಿದ್ದುದನ್ನು ಕಣ್ಣಾರೆ ಕಂಡೆ ಮತ್ತು ಪಕ್ಷಿಗಳಿಗೆ ಅನ್ನ ನೀಡುವ ಇವರು ಮನುಷ್ಯರನ್ನು ಇನ್ನೆಷ್ಟು ಪ್ರೀತಿ ಮಾಡುತ್ತಿದ್ದರು ಎಂಬುದು ಅವರ ಸಾವಿನ ದಿನ ಖಾತರಿಯಾಯಿತು. ಇದು ಜೀವಪರ ಕಾಳಜಿ.

ಒಬ್ಬ ಪತ್ರಕರ್ತ ಏಕಕಾಲದಲ್ಲಿ ನಿರ್ಜೀವಿ ಹಾಗೂ ಸಜೀವಿಯಾಗಿ ಜೀವಿಸುತ್ತಿರುತ್ತಾನೆ. ಲೋಕದ ನಿಂದನೆಗಳಿಗೆ ಕಿವಿಗೊಡದೆ ನೀರ್ಗಲ್ಲಿನಂತೆ ನಿರ್ಜೀವಿಯಾಗಿ ಬದುಕಿದರೆ ನಿಷ್ಠುರತೆಗಳನ್ನು ತನ್ನ ಹೆಗಲಮೇಲಿಟ್ಟುಕೊಂಡು ಹೆಜ್ಜೆ ಇಟ್ಟಾಗ ಆತ ಸಜೀವಿಯಾಗಿ ಜೀವಿಸುತ್ತಾನೆ. ಆತ ಸಮಾಜದೊಳಗೆ ಗಟ್ಟಿಯಾಗಿ ನಿಲ್ಲಲು ಮೊದಲು ಬೇಕಾದುದು ಗಂಡೆದೆ. ಆನಂತರ ಸಮಾಜವನ್ನು ಕಟ್ಟಲು ಬೇಕಾದುದು ತಾಯ್ತನ. ನಾನೊಬ್ಬ ಯುವಕನಾಗಿ ಕೋಟಿ ಅವರು ತನ್ನ ಕೈಗೆಟುಕಿಸಿದಂತೆ ಅವರು ನಮ್ಮ ಮುಂದೆ ಎಲ್ಲವೂ ಆಗಿದ್ದರು. ಒಂದು ಬಟ್ಟೆಯನ್ನು ಕತ್ತರಿಸಿ ಬೇರ್ಪಡಿಸುವ ಕತ್ತರಿಯಂತೆ ಬದುಕುತ್ತಿರುವ ಇಂದಿನ ಮಾಧ್ಯಮದೊಳಗೆ ಕತ್ತರಿಸಲ್ಪಟ್ಟು ಬೇರ್ಪಟ್ಟ ಬಟ್ಟೆಯನ್ನು ಒಂದುಗೂಡಿಸುವಂತಹ ಸಣ್ಣ ಸೂಜಿಯಾಗಿ ನಮ್ಮ ಮುಂದೆ ಬದುಕಿದರು. ಸಮಾಜವನ್ನು ಅರಿಯುವುದು ಸುಲಭ. ಸಮಾಜದ ಅಂತರಂಗಕ್ಕೆ ಇಳಿಯುವುದು ಬಲುಕಷ್ಟ. ಸಮಾಜದ ಅಂತರಾಳಕ್ಕೆ ಇಳಿದವರು ಮಾತ್ರ ಇಲ್ಲಿ ದೀರ್ಘಕಾಲ ಬದುಕುಳಿಯಲು ಸಾಧ್ಯ. ಹಾಗಾದರೆ ಕೋಟಿ ಅವರು ಸಮಾಜದ ಅಂತರಾಳಕ್ಕೆ ಇಳಿದಿದ್ದಾದರೂ ಹೇಗೆ?
ನನ್ನ ಊರು ಮಲ್ಕುಂಡಿ. ಸುಮಾರು 1994ರ ಕಾಲಕ್ಕೆ ಅದು ಒಂದು ಕುಗ್ರಾಮ. ಮೈಸೂರಿನಿಂದ ಬಲುದೂರ. ನಮ್ಮ ಊರಿನಲ್ಲಿ ಒಬ್ಬ ಚಿಕ್ಕದೇವಮ್ಮ ಎಂಬ ಅಜ್ಜಿ ತುಂಬ ನಿಷ್ಠುರದ ಮಾತಿನವಳು. ಇದ್ದಿದ್ದು ಇದ್ದಂಗೆ ಹೇಳುತ್ತಿದ್ದಳು. ಊರಿನ ಯಾವ ಸಣ್ಣ ವಿಚಾರ ಸಿಕ್ಕಿದರೂ ಅದನ್ನು ಬಹುಬೇಗ ಊರತುಂಬ ಹರಡುಬಿಡುತ್ತಿದ್ದಳು. ಇದು ಕೆಲ ಯುವಕರಿಗೆ ನುಂಗಲಾರದ ತುತ್ತಾಗಿ ಅವಳ ಮೇಲಿನಿ ಸಿಟ್ಟಿಗಾಗಿ ಆಕೆಗೆ ‘ಆಂದೋಲನ’ ಎಂದು ಅಡ್ಡ ಹೆಸರಿಟ್ಟರು. ಅವಳನ್ನು ಕಂಡರೆ ‘ಆಂದೋಲನ’ ಎಂದು ಕೂಗಲಾರಂಭಿಸಿದರು. ಮುಂದೆ ಆಕೆಯ ಹೆಸರು ಆಂದೋಲನ ಎಂದೇ ಊರಿನಲ್ಲಿ ಚಿರಪರಿಚಿತವಾಯಿತು. ಅಂದು ನಾವು ಅನಕ್ಷರಸ್ಥರಾಗಿದ್ದೆವು. ಆದರೆ ನಮ್ಮಂತಹ ಅನಕ್ಷರಸ್ಥರಿಗೆ, ಕುಗ್ರಾಮಗಳಿಗೆ ಆಂದೋಲನ ದಿನಪತ್ರಿಕೆಯ ಕಾವು ನಮಗರಿವಿಲ್ಲದಂತೆ ಹರಡಿತ್ತು. ಆ ಹುಡುಗರು ಯಾಕೆ ಆ ಹೆಸರಿಟ್ಟರು ಅಂತ ಅಂದಿಗಿಂತ ಇಂದು ನನ್ನ ಅರಿವಿಗೆ ಬಂದಿದೆ. ಅಂದಿನ ಕಾಲಕ್ಕೆ ನಮ್ಮಂತಹ ಎಷ್ಟೋ ಅನಕ್ಷರಸ್ಥರಲ್ಲಿ ಕುಗ್ರಾಮದ ಜನರೊಳಗೆ ಅವರಿಗೆ ಅರಿವಿಲ್ಲದಂತೆ ರಾಜಶೇಖರ ಕೋಟಿ ಅವರು ಆ ಊರಿನೊಳಗೆ, ಆ ಜನರೊಳಗೆ ಬದುಕಿದ್ದರು. ಇದು ಕೋಟಿ ಸಮಾಜದ ಅಂತರಂಗವನ್ನು ಒಡ್ಡಿದ ಪರಿ. ಅಂದು ಕೋಟಿ ನಮ್ಮ ಊರಿನೊಳಗೆ ಬದುಕಿದ್ದರು ಎಂಬ ಅರಿವು ನನಗಿರಲಿಲ್ಲ. ಆದರೆ ಇಂದು ಆ ಅರಿವಿದೆ. ನನ್ನಂತೆ ನಿಮಗೂ ಅನಿಸಿರಬಹುದು.
ಮೊನ್ನೆ ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದೊಳಗೆ ಅಡ್ಡಾಡುತ್ತಿದ್ದೆ. ಶೌಚಾಲಯ ಜಾಗ ನೋಡಲು ಮನೆಯೊಂದರೊಳಗೆ ಪ್ರವೇಶಿಸಿದ್ದೆ. ಅದು ಮನೆಯಂತಿರಲಿಲ್ಲ. ಅತ್ಯಂತ ಕಡುಬಡತನ ಕುಟುಂಬವದು. ಆ ಮನೆಯ ತೊಲೆ ಇಡೀ ಮನೆಯ ಭಾರವನ್ನು ಹೊತ್ತು ನಿಂತಿತ್ತು. ಅದು ಶತಮಾನದ ಹಳೆಯದಾಗಿರಬಹುದು. ತೊಲೆಯನ್ನು ತಲೆ ಎತ್ತಿ ನೋಡಿದೆ ಅಲ್ಲಿ ದಿನಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟ ಯಾವುದೋ ಕಾರ್ಯಕ್ರಮದ ಫೋಟೊವನ್ನು ಅಂಟಿಸಿದ್ದರು. ಇನ್ನೂ ಹತ್ತಿರದಿಂದ ನೋಡಿದಾಗ ಅಲ್ಲಿ ಕೆಂಪಗಿಯ ಕೋಟಿ ಕಂಡರು. ಯಾಕೆ ಇಲ್ಲಿ ಹಾಗೇ ಅಂಟಿಸಿದ್ದಿರಿ ಎಂದು ಪ್ರಶ್ನಿಸಿದೆ. ‘ಅಯ್ಯಿ ಮೊನ್ನೆ ತೀರ್ಕೊಂಡ್ರಂತೆಕಪ್ಪ ಪುಣ್ಯಾತ್ಮ. ನನ್ನ ಗಂಡ ಹಾಗೂ ಮಗ ಆಕ್ಸಿಡೆಂಟಾಗಿ ಆಸ್ಪತ್ರೆಯಲ್ಲಿ ಬಿದ್ದಿದ್ದಾಗ ಜೆಎಸ್‌ಎಸ್ ಆಸ್ಪತ್ರೆಗೆ ಬಂದು 6,100 ರೂ. ಬಿಲ್ ಕಟ್ಟಿದ್ರು ಆ ನಮ್ಮಪ್ಪ. ನನ್ನ ಮಗ ಈಗ ಚೆನ್ನಾಗ್ವನೆ. ಮನೆ ಭಾರವೆಲ್ಲ ಅವನ ತಲೆಮೇಲೆ ಅಂದ್ರು’ ಮನೆಯ ಭಾರಹೊತ್ತ ಆ ಮನೆಯ ತೊಲೆ ಸಂಸಾರದ ಭಾರಹೊತ್ತ ಆ ಹುಡುಗನ ಎದೆಯಲ್ಲಿ ಕೋಟಿಯವರ ಭಾವಚಿತ್ರ ಮೂಡಿ ಬಂದಿತ್ತು. ಅವರು ಮನೆಯ ಎತ್ತರದ ತೊಲೆಯಲ್ಲಿ ತಮ್ಮ ತಲೆಯ ಮೇಲೆ ಇರಿಸಿಕೊಂಡಿದ್ದರು.

ಅಂದು ಕೋಟಿ ಅವರ ಅಂತಿಮ ದರ್ಶನ ಪಡೆಯಲು ಹೋದಾಗ ಒಂದು ಮೂಲೆಯಲ್ಲಿ ನನ್ನ ಪರಮ ಆಪ್ತ ಗೆಳೆಯ ಕುಮಾರಸ್ವಾಮಿ ಕಣ್ಣೀರಿಡುತ್ತಿದ್ದ. ಯಾಕಣ್ಣ ಸುಮ್ನಿರು ಅಂದೆ. ಆದರೆ ಕಣ್ಣೀರಿನಲ್ಲಿ ಕೋಟಿಯವರ ಜೀವಂತಿಕೆ ಇತ್ತು. ಈ ಕುಮಾರಸ್ವಾಮಿ 2007ರಲ್ಲಿ ಆಂದೋಲನ ದಿನಪತ್ರಿಕೆಯ ವರದಿಗಾರನಾಗಿದ್ದ. ಕೆಲಸ ಮುಗಿಸಿ ಮನೆಗೆ ಬರುವಾಗ ಅಪಘಾತವಾಗಿ ತಲೆ ನಜ್ಜುಗುಜ್ಜಾಗಿ ಅಪೊಲೋ ಆಸ್ಪತ್ರೆಯಲ್ಲಿ ಸಾವಿನೊಟ್ಟಿಗೆ ಹೋರಾಡುತ್ತಿದ್ದ. ತೀರ ಬಡತನದ ಕುಟುಂಬ. ನಮ್ಮ ಸ್ನೇಹ ಬಳಗವೂ ಕೂಡ ಅಸಹಾಯಕವಾಗಿ ದುಃಖದ ಮಡುವಿನಲ್ಲಿ ನಿಂತಿದ್ದಾಗ ಪ್ರೊ.ಸಿ. ರಾಮಸ್ವಾಮಿ ಅವರು ಕೋಟಿ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ನಾನು ಆಗಿನ್ನೂ ಕೋಟಿ ಅವರನ್ನು ಹತ್ತಿರದಿಂದ ನೋಡಿರಲಿಲ್ಲ. ಕೇವಲ 45 ನಿಮಿಷದಲ್ಲಿ ಕೆಂಪಗಿಯ ನೀಳ ದೇಹವೊಂದು ಆಸ್ಪತ್ರೆಗೆ ಧಾವಿಸಿತ್ತು. ನೇರ ಕೌಂಟರಿಗೆ ಹೋಗಿ ಆದಿನದ ಬಿಲ್ 35 ಸಾವಿರ ರೂಪಾಯಿ ಪಾವತಿಸಿದರು. ಅದೇ ತರಹ ಖುದ್ದಾಗಿ ಅವರೇ ಬಂದು ಮತ್ತೆರಡು ದಿನ ಬಿಲ್ ಪಾವತಿಸಿದರು. ಒಂದು ದಿನದ ವೆಚ್ಚ ಅವತ್ತಿಗೆ 18,500.ಕುಮಾರಸ್ವಾಮಿ ತಂದೆ ತಾಯಿ ಕೋಟಿ ಅವರ ಬಳಿ ಓಡಿ ಅವನಿಗೆ ಜೀವ ಕೊಟ್ಟಿದ್ದು ನಾವಲ್ಲ ನೀವು ಎಂದ್ರು. ಏನು ಆಗಲ್ಲ ಬಿಡಿ ಎಂದು ಉತ್ತರಿಸಿ ಕೋಟಿ ಅವರು ಹೊರಟು ಬಿಟ್ಟರು. ನನಗೆ ಆಗ ಅನಿಸಿದ್ದು, ಕುಮಾರಸ್ವಾಮಿಗೆ ಅವರ ತಂದೆ ತಾಯಿ ಜೀವ ನೀಡಿದರು ಆದರೆ ಮರುಜೀವ ನೀಡಿದ್ದು ರಾಜಶೇಖರ ಕೋಟಿ ಅವರು ಅಂತ. ಕೋಟಿ ಅವರ ಜೀವಂತಿಕೆಯನ್ನು ಕುಮಾರಸ್ವಾಮಿಯಕಣ್ಣೀರಿನಲ್ಲಿ ನಾನು ಕಂಡೆ.
ಸಮಾಜದಲ್ಲಿ ಬಲಿತರೊಟ್ಟಿಗೆ ಬದುಕುವುದು ಬೇರೆ. ಆದರೆ ಬಡತನದೊಟ್ಟಿಗೆ ಬದುಕುವುದೇ ಬೇರೆ. ಬಡವನೊಟ್ಟಿಗೆ ಬದುಕುವುದಿದೆಯಲ್ಲ ಅದು ಪ್ರತಿಯೊಬ್ಬ ಮನುಷ್ಯನಿಗೂ ಮರುಹುಟ್ಟು ನೀಡುತ್ತದೆ. ಅದು ಯಾವ ಮರುಹುಟ್ಟು. ಬದಲಾವಣೆಯ ಮರುಹುಟ್ಟು. ಸಮಾಜಕ್ಕೆ ನೀಡುವ ಹೊಸ ದಿಕ್ಕಿನ ಮರುಹುಟ್ಟು. ಅಬಲರಿಗೆ ಆಸರೆಯನ್ನು ನೀಡುವ ಪ್ರಬಲದ ಮರುಹುಟ್ಟು. ಇಂತಹ ಮರುಹುಟ್ಟುಗಳಿಗೆ ಕಾರಣರಾದ ಕೋಟಿ ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಎಲ್ಲವೂ ಇದ್ದು ಸ್ವಯಂಪ್ರೇರಿತರಾಗಿ ಬಡತನಕ್ಕೆ ಧುಮುಕಿದ್ದು ಅವರ ಬದುಕಿನ ಬಹುದೊಡ್ಡ ಮರುಹುಟ್ಟು.
ಜೇಬಿನಲ್ಲಿ ಹಣವಿಲ್ಲದೇ ಕೋಟಿ ಎನಿಸಿದ್ದು, ಅವರ ಬಂಧುತ್ವ ಗುಣದಿಂದ. ಬಡತನದಿಂದ ದುಡಿದು ಶ್ರೀಮಂತರಾದವರು. ಸಹ್ರಸರು ಇರಬಹುದು. ಆದರೆ ಶ್ರೀಮಂತಿಕೆ ಇದ್ದುಕೊಂಡು ಬಡವನಾಗಿ ಮತ್ತೆ ಜನಿಸಿದ ಆ ಮೂಲಕ ಬಡವನನ್ನು ಬಡಿದೆಬ್ಬಿಸಿದ ಅಪರೂಪದ ವ್ಯಕ್ತಿತ್ವ. ನಾನು ಮೂರು ಬಾರಿ ಮಾತ್ರ ಅವರೊಟ್ಟಿಗೆ ಮಾತನಾಡಿದ್ದೇನೆ. ಒಮ್ಮೆ ಅವರ ಮನೆಯಲ್ಲಿ ಭೇಟಿಯಾದಾಗ ಅವರು ಸಾಕಿದ್ದ ಪಕ್ಷಿಗಳಿಗೆ ಕಾಳುಗಳನ್ನು ಹಾಕುತ್ತಾ ನಮ್ಮಾಟ್ಟಿಗೆ ಮಾತನಾಡುತ್ತಿದ್ದರು. ಮನುಷ್ಯರಷ್ಟೇ ಪಕ್ಷಿಗಳೂ ಕೂಡ ಅವರೊಟ್ಟಿಗೆ ಬಹುದೊಡ್ಡ ಒಡನಾಟ ಇಟ್ಟುಕೊಂಡಿದ್ದವು ಮತ್ತು ಅವರನ್ನು ಆ ಪಕ್ಷಿಗಳು ಪ್ರೀತಿಸುತ್ತಿದ್ದುದನ್ನು ಕಣ್ಣಾರೆ ಕಂಡೆ ಮತ್ತು ಪಕ್ಷಿಗಳಿಗೆ ಅನ್ನ ನೀಡುವ ಇವರು ಮನುಷ್ಯರನ್ನು ಇನ್ನೆಷ್ಟು ಪ್ರೀತಿ ಮಾಡುತ್ತಿದ್ದರು ಎಂಬುದು ಅವರ ಸಾವಿನ ದಿನ ಖಾತರಿಯಾಯಿತು. ಇದು ಜೀವಪರ ಕಾಳಜಿ.
ಸಿ.ಎಂ. ನರಸಿಂಹ ಮೂರ್ತಿ ಅವರು, ಕೋಟಿ ಅವರ ನೆರವಿನೊಂದಿಗೆ ‘ಮುಳ್ಳೂರು ನಾಗರಾಜ ಪ್ರಶಸ್ತಿ’ಪ್ರದಾನ ಮಾಡುವ ಸಂದರ್ಭದಲ್ಲಿ ಹೃದಯ ತುಂಬಿ ಮಾತನಾಡುತ್ತ ಬಡತನ ಎಂದರೆ ನೋಡುವ ವಸ್ತುವಲ್ಲ. ಅದು ಅನುಭವಿಸುವ ವಸ್ತು. ಮುಳ್ಳೂರು ನಾಗರಾಜು ಅವರ ಸಾಮಾಜಿಕ ಹಸಿವು ನನ್ನಲ್ಲಿ ಜೀವಂತಿಕೆಯಾಗಿ ಉಳಿದಿದೆ ಎಂದರು. ಇಂದಿನ ಯುವ ತಲೆಮಾರು ಹಿಂದಿನ ತಲೆಮಾರಿನ ಸಾಮಾಜಿಕ ಹಸಿವಿನ ಹೋರಾಟದ ಹೆಗ್ಗುರುತುಗಳನ್ನು ಮರೆಸುವಲ್ಲಿ ಸೋಲುತ್ತಿದೆ ಎಂಬ ನೋವು ನನ್ನಂತಹವರಿಗೆ ಇದೆ’ ಎಂದ ಅವರ ಮಾತು ನನ್ನನ್ನು ಇಂದಿಗೂ ಕಾಡುತ್ತಿದೆ. ನಾನು ತುಂಬ ಭಯದಿಂದ ಬರೆದ ‘ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು’ಪುಸ್ತಕ ಕೈಗಿಟ್ಟಾಗ ಎಂತಹ ಅರ್ಥಪೂರ್ಣ ತಲೆಬರಹ ಎಂದರು. ಅವರು ಆಗ ಬಳಸಿದ ಕನ್ನಡ ಪದಗಳು ನನ್ನ ತಲೆಯನ್ನು ಗಿರ್ ಅನಿಸಿದವು.
ಇತ್ತೀಚೆಗೆ ಅವರು ಸುದ್ದಿವಾಹಿನಿವೊಂದಕ್ಕೆ ನೀಡಿದ ಕೌಟುಂಬಿಕ ಸಂದರ್ಶನದಲ್ಲಿ ನಿಮ್ಮ ಬದುಕಿನ ಮರೆಯಲಾಗದ ನೆನಪು ಯಾವುದು ಎಂದಾಗ ಒಂದು ಪ್ರಸಂಗವನ್ನು ಹೇಳಿದರು. ‘ದೇವನೂರ ಮಹಾದೇವ ಅವರು ನೂರು ರೂಪಾಯಿಯನ್ನು ನನ್ನ ಕೈಗಿಟ್ಟು ಇವತ್ತು ನೀನು ೊಟ್ಟೆ ತುಂಬ ಊಟ ಮಾಡು ಎಂದಿದ್ದರು’ ಎಂದು ಹೇಳುವಾಗ ಕೋಟಿ ಕಂಗಳು ತುಂಬಿ ಬಂದವು. ಇಂದು ಕೋಟಿ ಅವರ ಅಗಲಿಕೆಯಿಂಂದ ಅವರು ನೀಡಿದ ಸಹಾಯದ ದಿನಗಳನ್ನು ನೆನೆ ನೆನೆದು ಸಹಸ್ರಾರು ಕೋಟಿ ಕಂಗಳು ತುಂಬಿ ಬಂದವು.
ಅಜ್ಜಿ ಚಿಕ್ಕದೇವಮ್ಮನ ನಿಷ್ಠುರದ ಪ್ರಸಾರದಲ್ಲಿ, ಆ ಮನೆಯ ಶತಮಾನದ ತೊಲೆಯಲ್ಲಿ, ಅಂದು ಬದುಕುಳಿದ ಆ ಮನೆಯ ಹುಡುಗನಲ್ಲಿ, ನಮ್ಮ ಕುಮಾರಸ್ವಾಮಿ ಅಂತಹವರಲ್ಲಿ, ಪೇಪರ್ ಹಾಕಲು ಸೈಕಲ್ ತುಳಿಯುವ ಹುಡುಗನ ಬೆವರಿನಲ್ಲಿ, ದಿ ಬೆಸ್ಟ್ ಕಾರು ಡ್ರೈವರ್‌ನಲ್ಲಿ, ಅವರ ಮನೆಯಲ್ಲಿ ಕಲರವಿಸುವ ಹಕ್ಕಿಗಳ ನಾದದಲ್ಲಿ ಕೋಟಿ ಅವರು ಜೀವಂತ. ದೇವನೂರರ ಸಾಹಿತ್ಯದೊಳಗೆ ಒಂಟಿ ಕಾಲಿನ ತಪಸ್ವಿಯಾಗಿ ಜೀವಂತ. ಆಂದೋಲನ ಪತ್ರಿಕೆಯ ಕೆಂಪಕ್ಷರದ ಆಂದೋಲನ ಎಂಬ ಟೈಟಲ್‌ನಲ್ಲಿ ಬದುಕುಳಿದಿದ್ದಾರೆ. ಬಟ್ಟೆ ಅಂಗಡಿಯವ ನೇತು ಹಾಕಿದ ಕೆಂಪು ಟೀ ಶರ್ಟ್‌ನ ಒಳಗೆ ನಗುತ್ತಿದ್ದಾರೆ. ಬಡವನೊಬ್ಬ ಹಣವಿಲ್ಲದೇ ಆಸ್ಪತ್ರೆಯಲ್ಲಿ ಕನವರಿಸುವಾಗ ಸಹಾಯ ಮಾಡುವವನ ರೂಪದಲ್ಲಿ ಬರುತ್ತಾರೆ. ಅವರ ಸ್ವಂತ ಬದುಕು ನೆನೆದು ಕೋಟಿ ತಮ್ಮ ಕಂಗಳನ್ನು ತುಂಬಿಕೊಂಡರೆ ನೂರಾರು ಜನರು ಕೋಟಿ ಅವರನ್ನು ನೆನೆದು ತಮ್ಮ ಕಂಗಳನ್ನು ತುಂಬಿಕೊಳ್ಳುತ್ತಿದ್ದಾರೆ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ