ಪಾಕಿಸ್ತಾನಕ್ಕೆ 14 ರನ್‌ಗಳ ಜಯ

Update: 2019-06-04 04:24 GMT

   ನಾಟಿಂಗ್‌ಹ್ಯಾಮ್, ಜೂ.4: ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 14 ರನ್‌ಗಳ ರೋಚಕ ಜಯ ಗಳಿಸಿದೆ. ಗೆಲುವಿಗೆ 349 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 334 ರನ್ ಗಳಿಸಿತು.

ಜೋ ರೂಟ್ ಮತ್ತು ಜೋಸ್ ಬಟ್ಲರ್ ಶತಕಗಳ ನೆರವಿನಲ್ಲಿ ಗೆಲುವಿಗೆ ಹೋರಾಟ ನಡೆಸಿದರೂ ಇಂಗ್ಲೆಂಡ್ ಗೆಲುವಿನ ದಡ ಸೇರಲಿಲ್ಲ. ರೂಟ್ ಅವರು 134ನೇ ಏಕದಿನ ಪಂದ್ಯದಲ್ಲಿ 15ನೇ ಶತಕ ದಾಖಲಿಸಿದರು. 97 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅವರು ಶತಕ ಪೂರ್ಣಗೊಳಿಸಿದರು. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ಶತಕವಾಗಿದೆ.

   ರೂಟ್ ಮತ್ತು ಜೋಶ್ ಬಟ್ಲರ್ ಜೊತೆಯಾಗಿ ಐದನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನೀಡಿದರು. ಇವರು ಜೊತೆಯಾದಾಗ ಇಂಗ್ಲೆಂಡ್ 21.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 118 ರನ್ ಗಳಿಸಿತ್ತು. ಜೇಸನ್ ರಾಯ್ (8), ಬೈರ್‌ಸ್ಟೋವ್ (32), ನಾಯಕ ಇಯಾನ್ ಮೊರ್ಗನ್(9) ಮತ್ತು ಬೆನ್ ಸ್ಟೋಕ್ಸ್ (13) ಔಟಾಗಿದ್ದರು.

ಬಳಿಕ ರೂಟ್ ಮತ್ತು ಬಟ್ಲರ್ ಜೊತೆಯಾಗಿ ಸ್ಕೋರ್‌ನ್ನು 38.5 ಓವರ್‌ಗಳಲ್ಲಿ 248ಕ್ಕೆ ತಲುಪಿಸಿದರು. 107 ರನ್ (104ಎ, 10ಬೌ, 1ಸಿ) ಗಳಿಸಿದ ರೂಟ್ ಅವರು ಶಾದಾಬ್ ಖಾನ್ ಎಸೆತದಲ್ಲಿ ಹಫೀಝ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

<    ಬಟ್ಲರ್ ಶತಕ : ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನ ಪಂದ್ಯದಲ್ಲಿ ಶತಕ ದಾಖಲಿಸಿದರು. ಬಟ್ಲರ್ 75 ಎಸೆತಗಳಲ್ಲಿ 9ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು. ಇದು ಅವರ 133ನೇ ಏಕದಿನ ಪಂದ್ಯದಲ್ಲಿ 9ನೇ ಶತಕವಾಗಿದೆ.

 ಬಟ್ಲರ್ ಶತಕ ದಾಖಲಿಸಿದ ಬೆನ್ನಲ್ಲೇ ಅವರು ಮುಹಮ್ಮದ್ ಆಮಿರ್ ಎಸೆತದಲ್ಲಿ ವಹಾಬ್ ರಿಯಾಝ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಔಟಾಗುವ ಮುನ್ನ ಅವರು 103 ರನ್(76ಎ, 9ಬೌ, 2ಸಿ) ಗಳಿಸಿದರು. ಬಟ್ಲರ್ ಅವರದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು ಅವರ ತಂಡದ ಸಹ ಆಟಗಾರ ಜೋ ರೂಟ್ ಶತಕ ದಾಖಲಿಸಿದ್ದರು. ಬಟ್ಲರ್ ಮತ್ತು ರೂಟ್ ನಿರ್ಗಮನದ ಬಳಿಕ ಮೊಯಿನ್ ಅಲಿ (19), ವೋಕ್ಸ್(21) ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

      ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಪಾಕಿಸ್ತಾನ ಈ ಪಂದ್ಯದಲ್ಲಿ ಚೇತರಿಸಿಕೊಂಡು ಚೆನ್ನಾಗಿ ಆಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಾಕಿಸ್ತಾನ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು 8 ವಿಕೆಟ್‌ಗೆ 348ರನ್ ಗಳಿಸಿತು. ಮುಹಮ್ಮದ್ ಹಫೀಝ್, ಸರ್ಫರಾಝ್ ಅಹ್ಮದ್ ಮತ್ತು ಬಾಬರ್ ಅಝಮ್ ಅರ್ಧಶತಕದ ಕೊಡುಗೆ ನೀಡಿದರು. ಅಗ್ರ ಸರದಿಯ ಆಟಗಾರರ ಉತ್ತಮ ಬ್ಯಾಟಿಂಗ್ ನೆರವಿನಲ್ಲಿ ಪಾಕಿಸ್ತಾನದ ಸ್ಕೋರ್ 345ರ ಗಡಿ ದಾಟಿತು. ಇನಿಂಗ್ಸ್ ಆರಂಭಿಸಿದ ಇಮಾಮ್ ಉಲ್ ಹಕ್ ಮತ್ತು ಫಾಕರ್ ಝಮಾನ್ ಮೊದಲ ವಿಕೆಟ್‌ಗೆ 82 ರನ್ ಸೇರಿಸಿದರು. 15ನೇ ಓವರ್‌ನ ಮೊದಲ ಎಸೆತದಲ್ಲಿ ಫಾಕರ್ ಅವರನ್ನು ವಿಕೆಟ್ ಕೀಪರ್ ಜೋಸ್ ಬಟ್ಲರ್ ನೆರವಿನಲ್ಲಿ ಮೊಯಿನ್ ಅಲಿ ಪೆವಿಲಿಯನ್‌ಗೆ ಅಟ್ಟಿದರು. ಫಾಕರ್ ಝಮಾನ್ 36 ರನ್ ಗಳಿಸಿ ನಿರ್ಗಮಿಸಿದರು. ಎರಡನೇ ವಿಕೆಟ್‌ಗೆ ಇಮಾಮ್ ಉಲ್ ಹಕ್‌ಗೆ ಅಝಮ್ ಸಾಥ್ ನೀಡಿದರು. ಇಮಾಮ್ ವುಲ್ ಹಕ್ ಕೇವಲ 6 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಅವರು 44 ರನ್(58ಎ, 3ಬೌ,1ಸಿ) ಗಳಿಸಿದರು. ಬಾಬರ್ ಅಝಮ್ ಮತ್ತು ಮುಹಮ್ಮದ್ ಹಫೀಝ್ ಬ್ಯಾಟಿಂಗ್ ಮುನ್ನಡೆಸಿ 3ನೇ ವಿಕೆಟ್‌ಗೆ 88 ರನ್ ಸೇರಿಸಿದರು. ಆಝಮ್ 63 ರನ್ ಗಳಿಸಿ ಮೊಯಿನ್‌ಗೆ ವಿಕೆಟ್ ಒಪ್ಪಿಸಿದರು. ಹಫೀಝ್ 84 ರನ್(62ಎ, 8ಬೌ, 2ಸಿ) ಗಳಿಸಿ ನಿರ್ಗಮಿಸಿದರು. ನಾಯಕ ಸರ್ಫರಾಝ್ 55 ರನ್ ಕೊಡುಗೆ ನೀಡಿದರು. ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 71ಕ್ಕೆ 3 , ಮೊಯಿನ್ ಅಲಿ 50ಕ್ಕೆ 3 ಮತ್ತು ಆದಿಲ್ ರಶೀದ್ 43ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News