×
Ad

ವಾಯು ಪಡೆ ವಿಮಾನ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ

Update: 2019-06-04 14:04 IST

ಹೊಸದಿಲ್ಲಿ, ಜೂ.4: ಅಸ್ಸಾಂನ ಜೋಹಾರ್ಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಹಾರಾಟ ಆರಂಭಿಸಿದ್ದ ಭಾರತೀಯ ವಾಯು ಪಡೆಯ ಅಂಟೊನೊವ್ ಎಎನ್-32 ಸಾರಿಗೆ ವಿಮಾನ ಸೋಮವಾರ ಮಧ್ಯಾಹ್ನ ನಾಪತ್ತೆಯಾಗಿದ್ದು, ಅದು ಇನ್ನೂ ಪತ್ತೆಯಾಗಿಲ್ಲ. ವಿಮಾನದ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಎಂಟು ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರಿದ್ದ ವಿಮಾನ ಮಧ್ಯಾಹ್ನ ಸುಮಾರು 1 ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡಿತ್ತು. ಅದು 1:30ರ ಸುಮಾರಿಗೆ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಬರಬೇಕಾಗಿತ್ತು.

‘‘ಹವಾಮಾನ ತಿಳಿಯಾದ ಬಳಿಕ ನಾಪತ್ತೆಯಾಗಿರುವ ವಿಮಾನದ ಶೋಧ ಕಾರ್ಯ ಮತ್ತೆ ಆರಂಭಿಸಲಾಗಿದೆ. ಸೇನೆ ಹಾಗೂ ಐಟಿಬಿಪಿಯೊಂದಿಗೆ ಎರಡು ಎಂಐ 17 ಹಾಗೂ ಎಎಲ್‌ಎಚ್‌ಯನ್ನು ನಿಯೋಜಿಸಲಾಗಿದೆ’’ ಎಂದು ಐಎಎಫ್ ವಕ್ತಾರ ಮಂಗಳವಾರ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಐಎಎಫ್ ವಿಮಾನದಲ್ಲಿದ್ದ ಎಲ್ಲ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾರೈಸಿದ್ದಾರೆ.

ದುರ್ಘಟನೆ ನಡೆದಿದೆ ಎನ್ನಲಾದ ಸ್ಥಳದ ಕೆಲವು ವರದಿಯನ್ನು ನಾವು ಸ್ವೀಕರಿಸಿದ್ದೇವೆ. ಈ ತನಕ ವಿಮಾನದ ಅವಶೇಷ ಪತ್ತೆಯಾಗಿಲ್ಲ. ಭಾರತೀಯ ಸೇನೆ ಹಾಗೂ ಸರಕಾರದ ಸಹಯೋಗದೊಂದಿಗೆ ಐಎಎಫ್ ವಿಮಾನ ಪತ್ತೆ ಕಾರ್ಯದಲ್ಲಿ ತೊಡಗಿದೆ ಎಂದು ಐಎಎಫ್ ವಿಂಗ್ ಕಮಾಂಡರ್ ರತ್ನಾಕರ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News