ಇಫ್ತಾರ್ ಕೂಟ: ನಿತೀಶ್ ಕುಮಾರ್, ಪಾಸ್ವಾನ್ ರನ್ನು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2019-06-04 12:13 GMT

ಪಾಟ್ನಾ, ಜೂ.4: ಇಫ್ತಾರ್ ಕೂಟ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್  ಅವರನ್ನು ಇನ್ನೊಬ್ಬ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾವು ನಮ್ಮ ಧರ್ಮದ ಪದ್ಧತಿಗಳನ್ನು ಆಚರಿಸುವಲ್ಲಿ ಹಿಂದೆ ಬಿದ್ದು ಇತರರ ಹಬ್ಬಗಳಲ್ಲಿ ತೋರ್ಪಡಿಸುವುದೇಕೆ'' ಎಂದು ಸಿಂಗ್ ಟ್ವೀಟ್ ಮಾಡಿ, “ಇಬ್ಬರೂ ನವರಾತ್ರಿ ಸಂದರ್ಭ ಫಲಾಹಾರ ಆಯೋಜಿಸಿದ್ದರೆ, ಅವರ ಚಿತ್ರಗಳು ಸುಂದರವಾಗುತ್ತಿತ್ತು'' ಎಂದು ಬರೆದಿದ್ದಾರೆ.

ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್, ಪಾಸ್ವಾನ್ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜತೆಯಾಗಿ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಕಾಣಿಸಿಕೊಂಡಿರುವ ಫೋಟೋವನ್ನೂ ತಮ್ಮ ಟ್ವೀಟ್ ನೊಂದಿಗೆ ಸಿಂಗ್ ಪೋಸ್ಟ್ ಮಾಡಿದ್ದಾರೆ.

ಸಿಂಗ್ ಅವರ ಟ್ವೀಟ್‍ಗೆ ಜೆಡಿಯು ವಕ್ತಾರ ಸಂಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.``ದ್ವೇಷದ ಭಾಷೆಯಲ್ಲಿ ಮಾತನಾಡುವ ಎಲ್ಲಾ ನಾಯಕರನ್ನೂ ನಿಯಂತ್ರಿಸುವುದಾಗಿ ಪ್ರಧಾನಿ ಮೋದಿ ಹೇಳಿರುವುದರಿಂದ ಬಿಜೆಪಿಯು ಗಿರಿರಾಜ್ ಸಿಂಗ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದು  ಜೆಡಿಯು ವಕ್ತಾರ ಹೇಳಿದ್ದಾರೆ.

ನಿತೀಶ್ ಅವರ ಜೆಡಿಯು, ಪಾಸ್ವಾನ್ ಅವರ ಲೋಕ್ ಜನ ಶಕ್ತಿ ಹಾಗೂ ಬಿಜೆಪಿ ಬಿಹಾರದಲ್ಲಿ ಮಿತ್ರ ಪಕ್ಷಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News