ಮಹಿಳೆಯ ಅತ್ಯಾಚಾರಗೈದು ವೀಡಿಯೊ ಪ್ರಸಾರ: ನಾಲ್ವರ ಬಂಧನ

Update: 2019-06-04 15:27 GMT

ಜೈಪುರ, ಜೂ.4: ಮೂವತ್ತರ ಹರೆಯದ ಮಹಿಳೆಯ ಅತ್ಯಾಚಾರಗೈದ ಐವರು ದುಷ್ಕರ್ಮಿಗಳು ತಮ್ಮ ಕುಕೃತ್ಯದ ವೀಡಿಯೊ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಘಟನೆ ರಾಜಸ್ತಾನದ ಪಾಲಿ ಜಿಲ್ಲೆಯಲ್ಲಿ ಮೇ 26ರಂದು ನಡೆದಿರುವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಸೋಮವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆಯ ಕುರಿತು ರವಿವಾರದಂದು ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತ ಮಹಿಳೆ, ತಾನು ಗೆಳತಿಯ ಜೊತೆ ಮಂದಿರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಹಲ್ಲೆ ಮತ್ತು ಲೈಂಗಿಕ ಕಿರುಕುಳ ಆರೋಪದಡಿ ಭಾರತ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಿತೇಂದ್ರ ಬಾತ್, ಗೋವಿಂದ ಬಾತ್, ದಿನೇಶ್ ಬಾತ್ ಮತ್ತು ಮಹೇಂದ್ರ ಬಾತ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಸಂಜಯ್ ಬಾತ್‌ಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯ ಮುಖ್ಯಸ್ಥ ಕಿಶೋರ್ ಸಿಂಗ್ ಭಟ್ಟಿ ತಿಳಿಸಿದ್ದಾರೆ. ಸಂತ್ರಸ್ತೆಯ ಪತಿ ಕೂಲಿ ಕಾರ್ಮಿಕನಾಗಿದ್ದು ಸದ್ಯ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News