ಕೆನಡದ ಮೂಲನಿವಾಸಿ ಮಹಿಳೆಯರದ್ದು ‘ಜನಾಂಗೀಯ ಹತ್ಯೆ’: ತನಿಖಾ ಸಮಿತಿ

Update: 2019-06-04 17:21 GMT

ಒಟ್ಟಾವ (ಕೆನಡ), ಜೂ. 4: ಕೆನಡದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಸಾವಿರಕ್ಕೂ ಅಧಿಕ ಮೂಲನಿವಾಸಿ ಮಹಿಳೆಯರು ಮತ್ತು ಬಾಲಕಿಯರ ಸಾವುಗಳು ರಾಷ್ಟ್ರೀಯ ಜನಾಂಗೀಯ ಹತ್ಯೆಯಾಗಿದೆ ಎಂದು ಸರಕಾರ ನೇಮಿಸಿದ ಸಮಿತಿಯೊಂದು ಹೇಳಿದೆ.

ಹತ್ಯೆಯಾಗಿರುವ ಹಾಗೂ ನಾಪತ್ತೆಯಾಗಿರುವ ಮೂಲನಿವಾಸಿ ಮಹಿಳೆಯರ ಬಗ್ಗೆ ತನಿಖೆಗಾಗಿ ಪ್ರಧಾನಿ ಜಸ್ಟಿನ್ ಟ್ರೂಡೊ ಸರಕಾರ 2016ರಲ್ಲಿ ತನಿಖಾ ಸಮಿತಿಯನ್ನು ನೇಮಿಸಿತ್ತು. ಅದು ಸೋಮವಾರ ತನ್ನ 1,200 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.

ಹಿಂದಿನಿಂದಲೂ ಮೂಲನಿವಾಸಿಗಳ ವಿರುದ್ಧ ನಡೆಸಿಕೊಂಡು ಬರಲಾಗಿರುವ ತಾರತಮ್ಯ ಹಾಗೂ ಅವರನ್ನು ರಕ್ಷಿಸುವಲ್ಲಿನ ಕೆನಡದ ವೈಫಲ್ಯಗಳು ಅವರ ವಿರುದ್ಧದ ಹಿಂಸಾಚಾರಕ್ಕೆ ಕಾರಣವಾಗಿದೆ ಎಂಬುದಾಗಿ ವರದಿಯಲ್ಲಿ ಹೇಳಲಾಗಿದೆ.

ಮೂಲನಿವಾಸಿ ಮಹಿಳೆಯರ ವಿರುದ್ಧ ಭವಿಷ್ಯದಲ್ಲಿ ಹಿಂಸೆ ನಡೆಯದಂತೆ ಖಾತರಿಪಡಿಸಲು ವರದಿಯು ಹಲವಾರು ಮಹತ್ವದ ಶಿಫಾರಸುಗಳನ್ನು ಮಾಡಿದೆ.

1980 ಮತ್ತು 2012ರ ನಡುವಿನ ಅವಧಿಯಲ್ಲಿ 1,017 ಮೂಲನಿವಾಸಿ ಮಹಿಳೆಯರ ಹತ್ಯೆ ನಡೆದಿದೆ ಎಂದು ರಾಯಲ್ ಕೆನಡಿಯನ್ ವೌಂಟಡ್ ಪೊಲೀಸ್ 2014ರಲ್ಲಿ ತಿಳಿಸಿದೆ.

ತನಿಖಾ ಸಮಿತಿಯು ಕೊಲೆಯಾದ ಅಥವಾ ನಾಪತ್ತೆಯಾದ 468 ಮಹಿಳೆಯರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News