ಸಾಲ ಮನ್ನಾಗೆ ಈ ರಾಜ್ಯ ಖರ್ಚು ಮಾಡುವ ಮೊತ್ತ ಎಷ್ಟು ಗೊತ್ತೇ?
ಹೈದರಾಬಾದ್, ಜೂ.5: ಪ್ರಸಕ್ತ ಹಂಗಾಮಿನಲ್ಲಿ ಕೃಷಿ ಸಾಲ ಮನ್ನಾ ಯೋಜನೆಗೆ 32 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ತೆಲಂಗಾಣ ಸರ್ಕಾರ ಸಜ್ಜಾಗಿದೆ. ಇದು ಇಡೀ ದೇಶದಲ್ಲೇ ಯಾವುದೇ ರಾಜ್ಯ, ಕೃಷಿ ಸಾಲ ಮನ್ನಾ ಯೋಜನೆಗಾಗಿ ಮಾಡುತ್ತಿರುವ ಅತ್ಯಧಿಕ ವೆಚ್ಚವಾಗಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಅಂದಾಜು ಅಧಿಕವಿದ್ದರೂ, ವಾಸ್ತವವಾಗಿ ಹಂಚಿಕೆ ಮಾಡಿರುವ ಮೊತ್ತ ಕಡಿಮೆ. ಆದರೆ ತೆಲಂಗಾಣದಲ್ಲಿ ಅಂದಾಜು ಹಾಗೂ ವಾಸ್ತವ ವೆಚ್ಚ ಸಮಾನವಾಗಿದೆ. ರಾಜ್ಯಮಟ್ಟದ ಬ್ಯಾಂಕರ್‍ಗಳ ಸಮಿತಿ ವರದಿ ಅಂದಾಜಿಸಿದಂತೆ 32 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದು 2014-15ರಲ್ಲಿ ಮಾಡಿದ ವೆಚ್ಚವಾದ 17 ಸಾವಿರ ಕೋಟಿಗಿಂತ ಅಧಿಕ.
ರಾಜಕೀಯ ಪಕ್ಷಗಳು 2018ರ ಡಿಸೆಂಬರ್‍ನಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚು ರೈತರು ಸಾಲ ಪಡೆದಿರುವುದರಿಂದ ಈ ಬಾರಿ ಮನ್ನಾ ಮಾಡಬೇಕಾದ ಸಾಲದ ಮೊತ್ತ ಹೆಚ್ಚಿದೆ ಎನ್ನುವುದು ಅಧಿಕಾರಿಗಳ ಅನಿಸಿಕೆ.
2018ರ ಡಿಸೆಂಬರ್ 11ರವರೆಗೆ 50 ಸಾವಿರ ರೂಪಾಯಿವರೆಗೆ ಸಾಲ ಪಡೆದ ಸಣ್ಣ ಹಾಗೂ ಅತಿಸಣ್ಣ ರೈತರ ಸಾಲ ಮನ್ನಾ ಮಾಡಲಾಗುತ್ತದೆ. ಅಧಿಕಾರಿಗಳ ಅಂದಾಜಿನಂತೆ 42 ಲಕ್ಷ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ತೆಲಂಗಾಣ ಹಾಗೂ ನೆರೆಯ ಆಂಧ್ರಪ್ರದೇಶ ಈ ಯೋಜನೆಯನ್ನು 2014-15ರಿಂದಲೂ ಅನುಷ್ಠಾನಗೊಳಿಸುತ್ತಿವೆ. ಆಂಧ್ರಪ್ರದೇಶದ ವಾರ್ಷಿಕ ಹೊರೆ 16975 ಕೋಟಿ ರೂಪಾಯಿ. ಕಳೆದ ನಾಲ್ಕು ವರ್ಷಗಳಲ್ಲಿ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಏಕೈಕ ರಾಜ್ಯ ತೆಲಂಗಾಣ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಮಹಾರಾಷ್ಟ್ರದಲ್ಲಿ 2017-18ರಲ್ಲಿ 34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಉದ್ದೇಶಿಸಿದ್ದರೂ, ಕಳೆದ ವರ್ಷದವರೆಗೆ ಮಾಡಿದ ವೆಚ್ಚ ಕೇವಲ 25 ಸಾವಿರ ಕೋಟಿ. ಉತ್ತರ ಪ್ರದೇಶ 24 ಸಾವಿರ ಕೋಟಿ ವೆಚ್ಚ ಮಾಡಿದೆ. ಕರ್ನಾಟಕ 42 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವ ಭರವಸೆ ನೀಡಿದ್ದರೆ, ಇದುವರೆಗೆ ಆಗಿರುವ ವೆಚ್ಚ ಕೇವಲ 14,508 ಕೋಟಿ ರೂಪಾಯಿ.