ಇಂತಹ ವ್ಯಕ್ತಿಗಳಿಗೆ ಧರ್ಮವಿಲ್ಲ: ಸಚಿವ ಗಿರಿರಾಜ್ ವಿರುದ್ಧ ನಿತೀಶ್ ಆಕ್ರೋಶ
ಪಾಟ್ನಾ, ಜೂ.5: ‘‘ಪ್ರಚಾರಕ್ಕಾಗಿ ಅನಗತ್ಯ ಹೇಳಿಕೆ ನೀಡುವ ವ್ಯಕ್ತಿಗಳಿಗೆ ಧರ್ಮವಿಲ್ಲ. ಗಿರಿರಾಜ್ ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸದಾ ಕಾಲ ಮಾಧ್ಯಮಗಳಲ್ಲಿ ಪ್ರಚಾರದಲ್ಲಿರುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಅನಗತ್ಯ ಹೇಳಿಕೆ ನೀಡುವ ಪ್ರವೃತ್ತಿ ಬೆಳೆಸಿಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಧರ್ಮವಿಲ್ಲ. ಪ್ರತಿ ಧರ್ಮವೂ ಪರಸ್ಪರರನ್ನು ಗೌರವಿಸಿ ಹಾಗೂ ಪ್ರೀತಿಸಿ ಎಂದು ಬೋಧಿಸುತ್ತದೆ’’ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆಗೆ ಎದಿರೇಟು ನೀಡಿದ್ದಾರೆ.
ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಸೋಮವಾರ ಪಾಟ್ನಾದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಮಿತ್ರಪಕ್ಷಗಳ ನಾಯಕರಾದ ಮುಖ್ಯಮಂತ್ರಿ ನಿತೀಶ್ ಕುಮಾರ್(ಜೆಡಿಯು) ಹಾಗೂ ರಾಮ್ ವಿಲಾಸ ಪಾಸ್ವಾನ್(ಎಲ್‌ಜೆಪಿ) ಹಾಗೂ ಅವರ ಪುತ್ರ ಚಿರಾಗ್ ಪಾಸ್ವಾನ್ ಜೊತೆಗೆ ತನ್ನದೇ ಪಕ್ಷದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕಾಣಿಸಿಕೊಂಡಿರುವುದನ್ನು ಕೇಂದ್ರ ಸಚಿವ ಗಿರಿರಾಜ್ ಟೀಕಿಸಿದ್ದರು.
ಇಫ್ತಾರ್ ಕೂಟದಲ್ಲಿ ಈ ನಾಯಕರು ಮುಗುಳ್ನಗುತ್ತಿರುವ ಚಿತ್ರವನ್ನು ಲಗತ್ತಿಸಿರುವ ಸಿಂಗ್, ಇಷ್ಟೇ ಆಸಕ್ತಿಯಿಂದ ನವರಾತ್ರಿ ಭೋಜನ ಕೂಟವನ್ನು ಆಯೋಜಿಸಿದ್ದರೆ ಈ ಚಿತ್ರ ಎಷ್ಟು ಸುಂದರವಾಗಿರುತ್ತಿತ್ತು. ನಾವೇಕೆ ನಮ್ಮ ಸ್ವಂತ ಪರಂಪರೆಯಿಂದ ಹಿಂದೆ ಸರಿಯುತ್ತಿದ್ದೇವೆ ಹಾಗೂ ಸೋಗಲಾಡಿತನ ಪ್ರದರ್ಶಿಸುತ್ತಿದ್ದೇವೆ ಎಂದು ಕುಟುಕಿದ್ದರು.
ಗಿರಿರಾಜ್ ಸಿಂಗ್ ಟ್ವೀಟ್‌ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದರು.