ಕೇರಳದ ಐಪಿಎಸ್ ಅಧಿಕಾರಿಯ ಪುತ್ರನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಕಾರಣವೇನು ಗೊತ್ತಾ?

Update: 2019-06-06 07:53 GMT

ತಿರುವನಂತಪುರಂ, ಜೂ.6: ತನ್ನ ಪುತ್ರನಿಗೆ ಕಲಿಕೆಯಲ್ಲಿ ಯಾವುದೇ ಆಸಕ್ತಿಯಿಲ್ಲದೇ ಇರುವುದರಿಂದ ಆತ ಯಾವತ್ತೂ ಕಾಲೇಜಿಗೆ ಹೋಗಿಲ್ಲ ಎಂದು ಕೇರಳದ ಅಬಕಾರಿ ಆಯುಕ್ತ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ರಿಷಿರಾಜ್ ಸಿಂಗ್ ಅವರು ಹೇಳುತ್ತಿರುವ  ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆತ್ತವರು ತಮ್ಮ ಮಕ್ಕಳಿಗೆ ಕಲಿಕೆಯಲ್ಲಿ ಮುಂದೆ ಬರಲು ಒತ್ತಾಯ ಹೇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರಾಜ್ಯದ ಮಾಜಿ ಡಿಜಿಪಿ ಕೂಡ ಆಗಿರುವ ಅವರು ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರಲ್ಲದೆ, ಕುಟುಂಬಗಳಿಂದ ಅನಗತ್ಯ ಒತ್ತಡವೇ  ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಒಂದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

ರಿಷಿರಾಜ್ ಸಿಂಗ್ ಅವರು ಮಲಯಾಳಂ ಟಿವಿ ವಾಹಿನಿಗೆ ನೀಡಿದ ಸಂದರ್ಶನದ ಕೆಲ ಭಾಗಗಳೇ ವೈರಲ್ ಆಗಿರುವ ವೀಡಿಯೋ ಆಗಿದೆ. ಮಕ್ಕಳಿಗೆ ಅವರಿಗಿಷ್ಟವಾದ ಆಯ್ಕೆಯನ್ನು ಮಾಡಲು ಅನುಮತಿಸಿದರೆ ಅವರು ಜೀವನದಲ್ಲಿ ಉನ್ನತಿಗೇರುತ್ತಾರೆಂಬುದನ್ನು ವಿವರಿಸಲು ಅವರು ತಮ್ಮದೇ ಪುತ್ರನ ಕಥೆಯನ್ನು ಹಂಚಿಕೊಂಡಿದ್ದಾರೆ.

“ನನ್ನ ಪುತ್ರನಿಗೆ ಕಲಿಕೆಯಲ್ಲಿ ತೀರಾ ಕಡಿಮೆ ಆಸಕ್ತಿಯಿತ್ತು. ಆತ ಗಳಿಸುತ್ತಿದ್ದ ಅಂಕಗಳು ಯಾವತ್ತೂ 58%ರಿಂದ 60% ತನಕ ಇತ್ತು. ಅದಕ್ಕಿಂತ ಹೆಚ್ಚು ಅಂಕಗಳನ್ನು ಆತ ಯಾವತ್ತೂ ಗಳಿಸಿರಲಿಲ್ಲ. ಒಂದು ದಿನ ನಾನು ಆತನ ಬಳಿ ಆತ ಕಲಿಕೆಯಲ್ಲಿ ಹಿಂದುಳಿದಿರುವುದಕ್ಕೆ ಕಾರಣ ಕೇಳಿದೆ. ಅದಕ್ಕೆ ಆತ ತನಗೆ ಇಷ್ಟು ಮಾತ್ರ ಮಾಡಲು ಸಾಧ್ಯ ಎಂದು ಬಿಟ್ಟ. ನಂತರ ನಾನು ಆತನನ್ನು ಪ್ರಶ್ನಿಸಿಲ್ಲ'' ಎಂದು ಸಿಂಗ್ ಸಂದರ್ಶನದಲ್ಲಿ ಹೇಳಿದ್ದಾರೆ.

``ಆತ 12ನೇ ತರಗತಿಯಲ್ಲಿ ಕೇವಲ 62% ಅಂಕ ಗಳಿಸಿದ್ದ. ಮುಂದೇನು ಎಂದು ನಾನು ಕೇಳಿದೆ. ಆಗ ಆತ ತಾನು ಯಾವತ್ತೂ ಅನಿಮೇಶನ್ ನಲ್ಲಿ ಡಿಪ್ಲೋಮಾ ಮಾಡಲು ಬಯಸಿದ್ದಾಗಿ ಹೇಳಿದ. ಆತನ ಇಷ್ಟದಂತೆಯೇ ಮುಂದುವರಿಯುವಂತೆ ನಾನು ಹೇಳಿದೆ ಹಾಗೂ ಆತ ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ'' ಎಂದು ಸಿಂಗ್ ನೆನಪಿಸಿಕೊಂಡರು.

“ಶಿಕ್ಷಣದ ನಂತರ ಆತ ಮುಂಬೈ ನಗರದ ಒಂದು ಸಣ್ಣ ಸ್ಟುಡಿಯೋ ಸೇರಿದ. ನಂತರ ಒಂದು ದೊಡ್ಡ ಸಂಸ್ಥೆ ಆತನ ಸೇವೆ ಪಡೆದುಕೊಂಡಿತು.  ಮುಂದೆ ಬೆಂಗಳೂರಿಗೆ ತೆರಳಿ ಸ್ಟೀವನ್ ಸ್ಪೀಲ್ಬರ್ಗ್  ಸ್ಟುಡಿಯೋಗೆ ಪ್ರವೇಶ ಪರೀಕ್ಷೆ ಬರೆದ. ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆತನ್ನು ಅಕಾಡೆಮಿ ಲಂಡನ್ ಗೆ ಕಳುಹಿಸಿತಲ್ಲದೆ ಅಲ್ಲಿ ಎಲ್ಲರೂ ಆತನ ಪ್ರತಿಭೆಯನ್ನು ಕೊಂಡಾಡಿದರು'' ಎಂದು ರಿಷಿರಾಜ್ ನೆನಪಿಸಿಕೊಂಡಿದ್ದಾರೆ.

“ಲಂಡನ್ ನಲ್ಲಿ ಆತ ತನ್ನಿಚ್ಛೆಯಂತೆಯೇ ತನಗಿಷ್ಟವಾದ ಶಿಕ್ಷಣ ಪಡೆದು ಚೀನೀ ಸಂಸ್ಥೆ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ. ಈಗ ಅಲ್ಲಿನ ದೊಡ್ಡ ಅನಿಮೇಶನ್ ಸ್ಟುಡಿಯೋದಲ್ಲಿ ಆರ್ಟಿಸ್ಟ್ ಆಗಿದ್ದಾನೆ'' ಎಂದು ಅವರು ವಿವರಿಸಿದ್ದಾರೆ.

ತಾನು ಆತನೂ ಐಪಿಎಸ್ ಅಧಿಕಾರಿಯಾಗಬೇಕೆಂದು ಒತ್ತಾಯಿಸಿದ್ದರೆ ಆತ ಮನೆ ಬಿಟ್ಟು ಓಡಿ ಹೋಗುತ್ತಿದ್ದ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸಿದ್ದರೂ ತಾವೂ ಅವರಂತೆಯೇ ಆಗಬೇಕೆಂಬ ಒತ್ತಡವನ್ನು ಅವರು ಯಾವತ್ತೂ ಹೇರಿರಲಿಲ್ಲ ಎಂದು ರಿಷಿರಾಜ್ ಹೇಳಿದರು.

“ಅವರು (ಮಕ್ಕಳು) ತಮ್ಮ ಅಭಿರುಚಿ ಹಾಗೂ ಕೌಶಲ್ಯಗಳಿಗೆ ತಕ್ಕಂತೆ ಏನಾದರೂ ಆಗುತ್ತಾರೆ. ನೀವು ಅವರ ಮೇಲೆ ಒತ್ತಡ ಹೇರದೇ ಇದ್ದಲ್ಲಿ ಕನಿಷ್ಠ ಪಕ್ಷ ನಿಮ್ಮ ಮಕ್ಕಳು ನಿಮ್ಮ ಜತೆ ಯಾವತ್ತೂ ಇರುತ್ತಾರೆ'' ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News