ಕೆಟ್ಟ ಸಾಲಗಳ ಬಗ್ಗೆ ನಿರ್ಣಯದ ಪರಿಷ್ಕೃತ ಅಧಿಸೂಚನೆಯನ್ನು 3-4 ದಿನಗಳಲ್ಲಿ ಹೊರಡಿಸಲಾಗುವುದು: ಶಕ್ತಿಕಾಂತ ದಾಸ್

Update: 2019-06-06 14:15 GMT

ಹೊಸದಿಲ್ಲಿ, ಜೂ.6: ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ ಜಾರಿ ಮಾಡಿದ ಕೆಟ್ಟ ಸಾಲಗಳ ಬಗ್ಗೆ ನಿರ್ಣಯದ ಪರಿಷ್ಕೃತ ಅಧಿಸೂಚನೆಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ತಿಳಿಸಿದ್ದಾರೆ.

ಸಾಲ ಪಾವತಿಯಲ್ಲಿ ಒಂದು ದಿನ ವಿಳಂಬವಾದರೂ ಅಂತಹ ಸಾಲಗಾರನನ್ನು ಸುಸ್ತಿದಾರ ಎಂದು ಘೋಷಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಆರ್‌ಬಿಐ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ವೋಚ್ಚ ನ್ಯಾಯಾಲಯ ಎಪ್ರಿಲ್ 2ರಂದು ರದ್ದುಗೊಳಿಸಿತ್ತು. ಗುರುವಾರ ನಡೆದ ಆರ್‌ಬಿಐಯ ಸಭೆಯಲ್ಲಿ ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿದರ ಅಥವಾ ರೆಪೊ ದರವನ್ನು 25 ಆಧಾರಾಂಕಗಳು ಕಡಿಮೆಗೊಳಿಸಿದ್ದು ಶೇ.5.75ಕ್ಕೆ ಇಳಿಸಿದೆ. ಇದು ಕಳೆದ ಒಂಬತ್ತು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

2018ರ ಫೆಬ್ರವರಿಯಲ್ಲಿ ಆರ್‌ಬಿಐ ಹೊರಡಿಸಿದ್ದ ಅಧಿಸೂಚನೆಯಲ್ಲಿ, 2,000 ಕೋಟಿ ರೂ.ಗೂ ಅಧಿಕ ಸಾಲ ಹೊಂದಿರುವ ಖಾತೆಗಳು ಸಾಲಮರುಪಾವತಿಸದ 180 ದಿನಗಳೊಳಗಾಗಿ ದಿವಾಳಿತನ ನ್ಯಾಯಾಲಯ ವರದಿ ಮಾಡಬೇಕು ಎಂದು ಬ್ಯಾಂಕ್‌ಗಳಿಗೆ ನಿರ್ದೇಶ ನೀಡಿತ್ತು. ಆರ್‌ಬಿಐಯ ಈ ನಿರ್ಧಾರದಿಂದ ಅನೇಕ ಕಂಪೆನಿಗಳಲ್ಲಿ, ಮುಖ್ಯವಾಗಿ ವಿದ್ಯುತ್ ಕ್ಷೇತ್ರದಲ್ಲಿ ಸಂಚಲನ ಉಂಟಾಗಿತ್ತು. ತನ್ನ ನಿರ್ಧಾರವನ್ನು ಸಡಿಲಗೊಳಿಸುವಂತೆ ಕೈಗಾರಿಕೋದ್ಯಮಿಗಳು ಮತ್ತು ಸರಕಾರ ರಿಸರ್ವ್ ಬ್ಯಾಂಕ್‌ಗೆ ಮನವಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News