ಶಂಕಿತರ ರಕ್ತದಲ್ಲಿ ನಿಪಾಹ್ ವೈರಸ್ ಇಲ್ಲ: ನಿಟ್ಟುಸಿರುಬಿಟ್ಟ ಕೇರಳ

Update: 2019-06-06 15:28 GMT

ಕೊಚ್ಚಿ, ಜೂ. 6: ನಿಪಾಹ್ ವೈರಸ್ ಸೋಂಕಿತ ಕಾಲೇಜು ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದ್ದ ಮೂವರು ನರ್ಸ್‌ಗಳು ಹಾಗೂ ನರ್ಸಿಂಗ್ ಅಸಿಸ್ಟೆಂಟ್ ಸಹಿತ ಆರು ಮಂದಿಯ ರಕ್ತದ ಮಾದರಿಯಲ್ಲಿ ನಿಪಾಹ್ ವೈರಸ್ ಕಂಡು ಬಂದಿಲ್ಲ. ಇದು ನಿಪಾಹ್ ವೈರಸ್ ಹರಡುತ್ತಿಲ್ಲ ಎಂಬುದನ್ನು ದೃಢಪಡಿಸಿದೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಗುರುವಾರ ಹೇಳಿದ್ದಾರೆ.

ಕಳೆದ ವರ್ಷ 17 ಜನರ ಸಾವಿಗೆ ಕಾರಣವಾದ ನಿಪಾ ವೈರಸ್ ಸೋಂಕು ಹರಡುತ್ತಿರುವುದನ್ನು ತಡೆಯಲು ಯತ್ನಿಸುತ್ತಿರುವ ಕೇರಳದ ಅಧಿಕಾರಿಗಳಿಗೆ ಆರು ಮಂದಿಯ ರಕ್ತ ಮಾದರಿಯಲ್ಲಿ ನಿಪಾಹ್ ವೈರಸ್ ಕಂಡು ಬರದಿರುವುದು ಬಿಡುಗಡೆ ದೊರೆತಂತೆ ಆಗಿದೆ.

ನಿಪಾಹ್ ವೈರಸ್ ಸೋಂಕಿಗೆ ಒಳಗಾದ ಕಾಲೇಜು ವಿದ್ಯಾರ್ಥಿಯ ಸ್ಥಿತಿ ಸ್ಥಿರವಾಗಿದೆ. ಆತನನ್ನು ಸ್ಪರ್ಶಿಸಿದ 314 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಹೊಸದಿಲ್ಲಿಯಲ್ಲಿರುವ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

7ನೇ ವ್ಯಕ್ತಿಯ ರಕ್ತ ಮಾದರಿ ಪರೀಕ್ಷೆಯ ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಆತನಿಗೆ ಕಲಮಶ್ಶೇರಿ ಸರಕಾರ ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ರಕ್ತದ ಮಾದರಿಯನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಒಟ್ಟು 314 ಜನರು ನಿಗಾದಲ್ಲಿ ಇದ್ದಾರೆ ಎಂದು ಸರಕಾರದ ಬುಲೆಟಿನ್ ಹೇಳಿದೆ. 314 ಮಂದಿಯಲ್ಲಿ 7 ಮಂದಿಯನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸ ಲಾಗಿದೆ. ಶಂಕಿತರನ್ನು ಅತಿ ಶೀಘ್ರ ಪತ್ತೆ ಮಾಡಲು ಹಾಗೂ ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಆರು ಸದಸ್ಯರ ತಂಡವೊಂದನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News