ಡಿಜಿಟಲ್ ವ್ಯವಹಾರ ನಡೆಸುವವರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ

Update: 2019-06-06 17:29 GMT

ಹೊಸದಿಲ್ಲಿ, ಜೂ. 6: ಡಿಜಿಟಲ್ ವರ್ಗಾವಣೆ ಉತ್ತೇಜಿಸಲು ಆರ್‌ಟಿಜಿಎಸ್ ಹಾಗೂ ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ಮೇಲಿನ ಶುಲ್ಕ ರದ್ದುಗೊಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೇಳಿದೆ ಹಾಗೂ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಎನ್‌ಇಎಫ್‌ಟಿ ಮೂಲಕ ವರ್ಗಾವಣೆಗೆ ರೂ. 1ರಿಂದ ರೂ. 5ರ ನಡುವೆ ಶುಲ್ಕ ವಿಧಿಸುತ್ತದೆ ಹಾಗೂ ಆರ್‌ಟಿಜಿಎಸ್‌ಗೆ ರೂ. 5ರಿಂದ 50ರ ನಡುವೆ ಶುಲ್ಕ ವಿಧಿಸುತ್ತದೆ.

ಹಣಕಾಸು ನೀತಿಯ ಸಭೆಯ ನಂತರ ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಯ ಬಗ್ಗೆ ಆರ್‌ಬಿಐ ನೀಡಿದ ಹೇಳಿಕೆಯಲ್ಲಿ ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ವ್ಯವಹಾರಕ್ಕೆ ಬ್ಯಾಂಕ್‌ಗಳಿಗೆ ಕನಿಷ್ಠ ಶುಲ್ಕ ವಿಧಿಸಲಾಗುವುದು. ಇದಕ್ಕೆ ಬದಲಾಗಿ ಬ್ಯಾಂಕ್‌ಗಳು ಗ್ರಾಹಕರಿಂದ ಶುಲ್ಕವನ್ನು ವಸೂಲು ಮಾಡಬಹುದಾಗಿದೆ ಎಂದಿದೆ.

ಬ್ಯಾಂಕ್ ಗ್ರಾಹಕರು ಎಟಿಎಂ ಬಳಸುವುದು ಗಣನೀಯವಾಗಿ ಏರಿಕೆಯಾಗಿರುವುದರಿಂದ ಎಟಿಎಂ ಬಳಕೆಯ ಮೇಲಿನ ಶುಲ್ಕವನ್ನು ಪರಿಶೀಲಿಸಲು ಸಮಿತಿ ರಚಿಸಲು ಸಭೆ ನಿರ್ಧರಿಸಿದೆ.

ಸಮಿತಿ ಈ ಬಗ್ಗೆ ಎರಡು ತಿಂಗಳ ಒಳಗಾಗಿ ತನ್ನ ಸಲಹೆಯನ್ನು ನೀಡುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News