ಅತಿಥೇಯ ಇಂಗ್ಲೆಂಡ್‌ಗೆ ಬಾಂಗ್ಲಾದ ಸವಾಲು

Update: 2019-06-07 18:43 GMT

ಕಾರ್ಡಿಫ್, ಜೂ.7: ಪಾಕಿಸ್ತಾನ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ ಆತಿಥೇಯ ಇಂಗ್ಲೆಂಡ್ ತಂಡ ಶನಿವಾರ ನಡೆಯಲಿರುವ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

 ಬಾಂಗ್ಲಾದೇಶ ತಂಡದ ವಿರುದ್ಧ ಇಂಗ್ಲೆಂಡ್ ತನ್ನ ಬೌಲಿಂಗ್‌ನಲ್ಲಿ ಸುಧಾರಣೆ ಕಾಣಲು ಬಯಸಿದೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪಾಕ್ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ 14 ರನ್‌ಗಳ ಸೋಲು ಅನುಭವಿಸಿತ್ತು.

 ಇಂಗ್ಲೆಂಡ್ ಆಡಿರುವ ಎರಡೂ ಪಂದ್ಯಗಳಲ್ಲೂ 300ಕ್ಕಿಂತ ಅಧಿಕ ರನ್ ದಾಖಲಿಸಿದೆ. ಮೊದಲ ಪಂದ್ಯದಲ್ಲಿ 311 ರನ್ ದಾಖಲಿಸಿ ದಕ್ಷಿಣ ಆಫ್ರಿಕ ವಿರುದ್ಧ 104 ರನ್‌ಗಳ ಜಯ ಗಳಿಸಿತ್ತು. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 334 ರನ್ ಗಳಿಸಿತ್ತು.

ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ ತಂಡದ ಬೌಲಿಂಗ್ ಚೆನ್ನಾಗಿತ್ತು. ಆದರೆ ಪಾಕ್ ವಿರುದ್ಧ ಸೊರಗಿತ್ತು.

   ಬಾಂಗ್ಲಾ ಎದುರಿಸಿರುವ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಿದೆ. ಈ ಪೈಕಿ ಓವಲ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 330 ರನ್ ದಾಖಲಿಸಿ 21 ರನ್‌ಗಳ ಜಯ ಸಾಧಿಸಿತ್ತು. ಇನ್ನೊಂದು ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ವೀರೋಚಿತ ಸೋಲು ಅನುಭವಿಸಿತ್ತು. ಬಾಂಗ್ಲಾದೇಶ ತಂಡ ಆತಿಥೇಯ ಇಂಗ್ಲೆಂಡ್‌ಗೆ ಕಠಿಣ ಸವಾಲು ಒಡ್ಡುವುದನ್ನು ನಿರೀಕ್ಷಿಸಲಾಗಿದೆ. 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವಿಶ್ವಕಪ್‌ನ ಅಭಿಯಾನವನ್ನು ಬಾಂಗ್ಲಾದೇಶ ಕೊನೆಗೊಳಿಸಿತ್ತು. ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಇಂಗ್ಲೆಂಡ್ ಇದೀಗ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಬಾಂಗ್ಲಾದ ಬ್ಯಾಟಿಂಗ್ ಸೊರಗಿತ್ತು. 244 ರನ್‌ಗಳಿಗೆ ಆಲೌಟಾಗಿತ್ತು. ಆದರೆ ನ್ಯೂಝಿಲ್ಯಾಂಡ್ ಗೆಲುವು ದಾಖಲಿಸಲು 8 ವಿಕೆಟ್‌ಗಳನ್ನು ಕೈ ಚೆಲ್ಲ್ಲಿತ್ತು.

    ಬಾಂಗ್ಲಾದ ಆಲ್‌ರೌಂಡರ್ ಶಾಕಿಬ್ ಹಸನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಎರಡು ಪಂದ್ಯಗಳಲ್ಲಿ ಸತತ ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರು ನ್ಯೂಝಿಲ್ಯಾಂಡ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. 64 ರನ್ ಮತ್ತು 2 ವಿಕೆಟ್ ಉಡಾಯಿಸಿದ್ದರು. ದಕ್ಷಿಣ ಆಫ್ರಿಕ ವಿರುದ್ಧ 75 ರನ್ ಮತ್ತು 1 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆದರೆ ತಂಡದ ಪ್ರಮುಖ ಬ್ಯಾಟ್ಸ್ ಮನ್ ತಮೀಮ್ ಇಕ್ಬಾಲ್ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದರು. ತಮೀಮ್ ಇಂಗ್ಲೆಂಡ್ ವಿರುದ್ಧ ಹಿಂದಿನ ಮುಖಾಮುಖಿಯಲ್ಲಿ 128 ರನ್ ಗಳಿಸಿದ್ದರು.

 ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ನ ಜೋ ರೂಟ್ (107) ಮತ್ತು ಜೋಶ್ ಬಟ್ಲರ್(104) ಶತಕಗಳನ್ನು ದಾಖಲಿಸಿದ್ದರು. ಆದರೆ ಅವರ ಹೋರಾಟ ಫಲ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News