ಧೋನಿ ಬೆನ್ನಿಗೆ ನಿಂತ ಕ್ರೀಡಾಪಟುಗಳು

Update: 2019-06-07 18:54 GMT

ಹೊಸದಿಲ್ಲಿ, ಜೂ.7: ದಕ್ಷಿಣ ಆಫ್ರಿಕ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಸೇನೆಯ ಲಾಂಛನವಿರುವ ವಿಕೆಟ್‌ಕೀಪಿಂಗ್ ಗ್ಲೌಸ್ ಧರಿಸಿ ಆಡುವ ಮೂಲಕ ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಎಂಎಸ್ ಧೋನಿಗೆ ಕ್ರೀಡಾ ಸಮುದಾಯ ಬೆಂಬಲ ವ್ಯಕ್ತಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ಹಾಗೂ ಭಾರತ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಮಾಜಿ ವೇಗದ ಬೌಲರ್ ಆರ್.ಪಿ. ಸಿಂಗ್, ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ತ್ ಹಾಗೂ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಧೋನಿಯ ದೇಶಾಭಿಮಾನವನ್ನು ಶ್ಲಾಘಿಸಿದ್ದಾರೆ.

ಗ್ಲೌಸ್‌ನಿಂದ ಸೇನಾ ಲಾಂಛನವನ್ನು ತೆಗೆಯುವಂತೆ ಐಸಿಸಿ ಇಟ್ಟಿರುವ ಬೇಡಿಕೆಯು ಭಾರತೀಯ ಸೇನೆಯ ತ್ಯಾಗಕ್ಕೆ ಮಾತ್ರವಲ್ಲ ಭಾರತೀಯ ಸೇನೆಗೆ ಮಾಡುವ ಅವಮಾನ ಎಂದು 2010 ಹಾಗೂ 2014ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವ ಯೋಗೇಶ್ವರ್ ದತ್ತ ಹೇಳಿದ್ದಾರೆ. ಐಎಎಎಫ್ ವರ್ಲ್ಡ್‌ಟಿ-20 ಚಾಂಪಿಯನ್‌ಶಿಪ್‌ನಲ್ಲಿ ಟ್ರಾಕ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಓಟಗಾರ್ತಿ ಎನಿಸಿರುವ ಹಿಮಾ,‘‘ಭಾರತ ಧೋನಿ ಅಣ್ಣನ ಬೆನ್ನ ಹಿಂದಿದೆ. ನಾನು ಕೂಡ ಅವರನ್ನು ಬೆಂಬಲಿಸುವೆ. ಜೈ ಹಿಂದ್,ಜೈ ಭಾರತ್..’’ ಎಂದು ಟ್ವೀಟ್ ಮಾಡಿದ್ದಾರೆ. ‘‘ನಾವು ಫೀಲ್ಡ್‌ನಲ್ಲಿದ್ದಾಗ ನಮ್ಮ ದೇಶವನ್ನು ಆರಾಧಿಸುತ್ತೇವೆ. ದೇಶಕ್ಕೆ ಹೆಮ್ಮೆ ತರಲು ಎಲ್ಲ ಪ್ರಯತ್ನ ಮಾಡುತ್ತೇವೆ. ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸುತ್ತೇವೆ. ಅದನ್ನೇ ಎಂಎಸ್ ಧೋನಿ ಮಾಡಿದ್ದಾರೆ. ನಮ್ಮ ಹೀರೊಗಳ ತ್ಯಾಗಕ್ಕೆ ನಮಸ್ಕರಿಸಿ, ಗೌರವ ನೀಡಿದ್ದಾರೆ. ಇದನ್ನು ದೇಶಭಕ್ತಿಯಾಗಿ ತೆಗೆದುಕೊಳ್ಳಬೇಕೇ ಹೊರತು ರಾಷ್ಟ್ರೀಯತೆಯಾಗಿ ಅಲ್ಲ’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ. ಧೋನಿಯವರ ವಿಶಿಷ್ಟ ಗ್ಲೌಸ್‌ನಿಂದ ಐಸಿಸಿಗೆ ಏನು ತೊಂದರೆಯಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಅಭಿಮಾನಿಗಳು ಇದರಿಂದ ಸ್ಫೂರ್ತಿ ಪಡೆಯುತ್ತಾರೆ. ಧೋನಿ ಸ್ವತಃ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ’’ ಎಂದು ಆರ್‌ಪಿ ಸಿಂಗ್ ಟ್ವೀಟ್ ಮಾಡಿದ್ದಾರೆ. ‘‘ಓರ್ವ ಆಟಗಾರನಾಗಿ ನೀತಿ-ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಇದು ನಿಯಮಾವಳಿಗೆ ವಿರುದ್ಧವಾಗಿದ್ದರೆ, ಧೋನಿ ತನ್ನ ಗ್ಲೌಸ್‌ನಿಂದ ಸೇನೆಯ ಚಿಹ್ನೆಯನ್ನು ತೆಗೆಯಬೇಕು’’ ಎಂದು ಭಾರತದ ಫುಟ್ಬಾಲ್ ಮಾಜಿ ನಾಯಕ ಬೈಚುಂಗ್ ಭುಟಿಯಾ ಟಿವಿ ಚಾನಲ್‌ವೊಂದಕ್ಕೆ ತನ್ನ ಅಭಿಪ್ರಾಯ ತಿಳಿಸಿದರು. ಐಸಿಸಿ ಕ್ರಿಕೆಟ್ ಕಾರ್ಯಾಚರಣೆ ತಂಡ ವಿಶ್ವಕಪ್ ಇವೆಂಟ್ ಟೆಕ್ನಿಕಲ್ ಸಮಿತಿಯೊಂದಿಗೆ ಚರ್ಚಿಸುತ್ತಿದೆ. ‘ಕಠಾರಿ ಮುದ್ರೆ’ ಸೇನೆಯ ಲಾಂಛನವಲ್ಲ. ಧೋನಿಗೆ ಈ ಚಿಹ್ನೆಯ ಗ್ಲೌಸ್‌ನೊಂದಿಗೆ ಆಡಲು ಅವಕಾಶ ನೀಡಬೇಕೆಂದು ಬಿಸಿಸಿಐ ಐಸಿಸಿಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

ಒಂದು ಕಾರಣಕ್ಕಾಗಿ ನಿಯಮವನ್ನು ರೂಪಿಸಲಾಗಿರುತ್ತದೆ. ನಾವು ಅದನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಧೋನಿ ಸೇನೆಯ ಚಿಹ್ನೆ ಇರುವ ಗ್ಲೌಸ್ ಧರಿಸಲು ಆಡಲು ಅನುವು ನೀಡಿದರೆ ಇತರ ದೇಶಗಳ ಆಟಗಾರರು ಇದರಿಂದ ಉತ್ತೇಜಿತರಾಗಿ ತಮ್ಮಿಷ್ಟ ಬಂದಂತೆ ನಡೆದುಕೊಳ್ಳಬಹುದು. 2014ರಲ್ಲಿ ಮೊಯಿನ್ ಅಲಿ ನಿರ್ದಿಷ್ಟ ವಿಚಾರವನ್ನು ಬೆಂಬಲಿಸಿ ಮಣಿಗಟ್ಟಿಗೆ ಕಪ್ಪುಪಟ್ಟಿ ಧರಿಸಿದಾಗ ಇಸಿಬಿ ಅವರಿಗೆ ದಂಡ ವಿಧಿಸಿತ್ತು. ಧೋನಿ ಪ್ರಬುದ್ಧರಾಗಿದ್ದು, ಯಾವ ರೀತಿ ಗ್ಲೌಸ್ ಧರಿಸಬೇಕೋ, ಬೇಡವೋ ಎಂದು ನಿರ್ಧರಿಸುವುದು ಅವರಿಗೆ ಬಿಟ್ಟ ವಿಚಾರ

ಸುನೀಲ್ ಗವಾಸ್ಕರ್, ಭಾರತದ ಮಾಜಿ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News