ಪ್ರಜಾಪ್ರಭುತ್ವದ ಉಳಿವಿಗೆ ಬ್ಯಾಲೆಟ್ ಪೇಪರ್ ಮತದಾನ ಅಗತ್ಯವೇ?

Update: 2019-06-08 18:31 GMT

ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಲಪಡಿಸಲು ಜನರು ಚುನಾವಣಾ ಫಲಿತಾಂಶಕ್ಕಾಗಿ ಮೂರು ದಿನಗಳ ಮತ ಎಣಿಕೆಗೆ ಕಾಯಲೂ ಸಿದ್ಧರಿದ್ದಾರೆ. ಬ್ಯಾಲೆಟ್‌ಪೇಪರ್ ಮತದಾನದಿಂದಾಗಿ, ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ಸಂದೇಹಪಡಲಾರರು ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ನಮಗೆ ಸಂಪೂರ್ಣ ಗೌರವ ಮೂಡಲಿದೆ.

ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿರುವ ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಸೆನೆಟರ್ ಕಮಲಾ ಹ್ಯಾರಿಸ್ ಅವರು ಅಮೆರಿಕವು ತಕ್ಷಣವೇ ಕಾಗದದ ಮತಪತ್ರಗಳತ್ತ ಮರಳಬೇಕೆಂದು ಆಗ್ರಹಿಸಿದ್ದಾರೆ. ಹಾಗೆ ಮಾಡಿದಲ್ಲಿ ದೇಶದ ಶತ್ರುಗಳಿಗೆ ಜನರ ತೀರ್ಪನ್ನು ಕದಿಯಲು ಸಾಧ್ಯವಾಗದು. ಈ ಅಂಶವು ಭಾರತ ಹಾಗೂ ಅಮೆರಿಕ ದೇಶಗಳೆರಡಕ್ಕೂ ಅತ್ಯಂತ ಮುಖ್ಯವಾದುದಾಗಿದೆ. ಯಾಕೆಂದರೆ ಈ ಎರಡೂ ದೇಶಗಳಲ್ಲಿ ಈಗ ಪ್ರಜಾಪ್ರಭುತ್ವವು ಅಪಾಯಕ್ಕೆ ಸಿಲುಕಿದೆ.
ಚುನಾವಣೆಯಲ್ಲಿ ಮತಪತ್ರಗಳ ಬಳಕೆಯ ಅಗತ್ಯದ ಕುರಿತು ಕಮಲಾ ಹ್ಯಾರಿಸ್ ಹೀಗೆ ಟ್ವೀಟ್ ಮಾಡಿದ್ದರು. ‘‘ನಿಜಕ್ಕೂ ಮತಪತ್ರಗಳು ನಮ್ಮ ಚುನಾವಣೆಗಳನ್ನು ಸುಭದ್ರವಾಗಿರಿಸಲು ನೆರವಾಗುವ ಸರಳ ಸಾಧನವಾಗಿವೆ. ನಮ್ಮ ‘ವಿದೇಶಿ ಶತ್ರು’ಗಳಿಗೆ ಕಾಗದ ತುಂಡುಗಳನ್ನು ಕದಿಯಲು ಎಂದಿಗೂ ಸಾಧ್ಯವಿಲ್ಲ. ಎಲ್ಲಾ ಫೆಡರಲ್ ಚುನಾವಣೆಗಳಲ್ಲಿ ಕೈಗುರುತಿನ ಮತಪತ್ರಗಳನ್ನು ಬಳಸುವ ಕುರಿತಾದ ವಿಧೇಯಕವೊಂದು ಸೆನೆಟ್ ಮುಂದಿದೆ. ನಾವು ಅದನ್ನು ತಕ್ಷಣವೇ ಅಂಗೀಕರಿಸಬೇಕಾಗಿದೆ. ಇದಕ್ಕಾಗಿ ಇನ್ನು ಕಾಯಲು ಸಾಧ್ಯವಿಲ್ಲ’’.
ಕಮಲಾ ಹ್ಯಾರಿಸ್, ಮಿಲಿಟರಿ ಮಾತ್ರವಲ್ಲ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿರುವ ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರದ ಸೆನೆಟರ್ ಆಗಿದ್ದಾರೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಹಾಗೂ ಶಕ್ತಿಶಾಲಿ ದೇಶವಾದ ಅಮೆರಿಕಕ್ಕೂ ಕೂಡಾ ಇವಿಎಂಗಳನ್ನು ತಿರುಚಲು ಸಾಧ್ಯವಿದೆ ಎಂಬ ಆತಂಕವಿರುವುದಾದರೆ ಭಾರತದ ಕಥೆಯೇನು?. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುವುದಕ್ಕಾಗಿ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದ್ದು, ಅದರಲ್ಲಿ ರಶ್ಯಾದ ಕೈವಾಡವಿತ್ತೆಂದು ಹಲವಾರು ಮಂದಿ ಆಪಾದಿಸಿದ್ದಾರೆ. ಆದರೆ ಈ ಬಗ್ಗೆ ಅಮೆರಿಕದ ಆಡಳಿತಕ್ಕೆ ತಿಳಿದಿರಬಹುದಾದ ವಾಸ್ತವ ಸಂಗತಿಯ ಬಗ್ಗೆ ನಮಗೆ ತಿಳಿದಿಲ್ಲ. ಆದರೆ ಚುನಾವಣಾ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಹಾಗೂ ಅದರ ವಿಶ್ವಸನೀಯತೆಯ ಬಗ್ಗೆ ಅಮೆರಿಕನರೆಲ್ಲರೂ ಆತಂಕವನ್ನು ಹೊಂದಿದ್ದಾರೆ. ಜನತೆ ನಂಬಿಕೆ ಹಾಗೂ ವಿಶ್ವಾಸವು ಒಂದು ದೇಶದ ಆಡಳಿತ ವ್ಯವಸ್ಥೆಯ ಅತಿ ದೊಡ್ಡ ಶಕ್ತಿಯಾಗಬೇಕಿದೆ. ಒಂದು ವೇಳೆ ಜನತೆ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಲ್ಲಿ, ಯಾವುದೇ ರೀತಿಯ ವಿವರಣೆಯಿಂದಲೂ ಅವರ ಮನಗೆಲ್ಲಲು ಸಾಧ್ಯವಾಗದು.
  ಭಾರತದಲ್ಲಿ ಲೋಕಸಭಾ ಚುನಾವಣೆ ಈಗಷ್ಟೇ ಪೂರ್ಣಗೊಂಡಿದೆ. ಇವಿಎಂಗಳ ವಿರುದ್ಧ ಪ್ರಬಲವಾದ ಅಸಮಾಧಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ ಅವೆಲ್ಲವೂ ಹ್ಯಾಕಿಂಗ್‌ನ ಸುತ್ತಲೂ ತಿರುಗುತ್ತಿವೆಯೇ ಹೊರತು, ಇವಿಎಂ ತಿರುಚುವಿಕೆಯ ಬಗ್ಗೆ ಅಲ್ಲ. ಇತ್ತೀಚೆಗೆ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ, ದೇಶದ ಹಲವೆಡೆ, ಇವಿಎಂಗಳಲ್ಲಿ ಎಣಿಕೆಯಾದ ಮತಗಳು ಚಲಾವಣೆಯಾದ ನೈಜ ಮತಗಳಿಗಿಂತ ಅಧಿಕವಾಗಿದ್ದವು. ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ ಈ ಹೆಚ್ಚುವರಿ ಅಥವಾ ಅಧಿಕ ಮತಗಳು ಯಾರ ‘ಖಾತೆಗೆ’ ಹೋಗಿವೆಯೆಂಬುದಾಗಿದೆ. ಚುನಾವಣೆಗಳಿಗೆ ಸಂಬಂಧಿಸಿ ಸ್ಪಷ್ಟವಾದ ಅಂಕಿಸಂಖ್ಯೆಗಳನ್ನು ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಯಾಕೆ ಈವರೆಗೆ ಸಾಧ್ಯವಾಗಿಲ್ಲ?. ಚುನಾವಣೆ ಫಲಿತಾಂಶ ಪ್ರಕಟವಾಗಿ ಹೆಚ್ಚುಕಮ್ಮಿ ಮೂರು ವಾರ ಕಳೆದರೂ ಈ ವಿವರಗಳು ಲಭ್ಯವಾಗದಿರುವುದು ನಿಜಕ್ಕೂ ಆಘಾತಕಾರಿ. ದೇಶದ ಜನತೆಗೆ ಇನ್ನೂ ಈ ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ. ಹಲವಾರು ಮಂದಿ ಈ ವಿಷಯವಾಗಿ ನ್ಯಾಯಾಲಯದ ಮೆಟ್ಟಲೇರಲೂ ಬಹುದು. ಆದರೆ ಈ ಬಗ್ಗೆ ನ್ಯಾಯಾಲಯವು ಯಾವುದೇ ಕ್ರಾಂತಿಕಾರಿ ಆದೇಶ ಹೊರಡಿಸಬಹುದೆಂದು ನಾನು ಭಾವಿಸಲಾರೆ.
  ಸಂಸ್ಥೆಗಳು ಮತದಾರರನ್ನು ರಕ್ಷಿಸಲು ವಿಫಲವಾದಾಗ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಇವಿಎಂಗಳ ವಿರುದ್ಧ ಅಭಿಯಾನವನ್ನು ನಡೆಸುವುದು ಬಹಳ ಮುಖ್ಯವಾದುದಾಗಿದೆ. ಚುನಾವಣೆಗಳಿಗೆ ಸರಕಾರಿ ನಿಧಿ ಒದಗಿಸುವಿಕೆ, ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಮಾನ ಸಮಯಾವಕಾಶ, ಚುನಾವಣೋತ್ತರ ಸಮೀಕ್ಷೆಗಳಿಗೆ ನಿಷೇಧ, ಜನಾಭಿಪ್ರಾಯ ಸಮೀಕ್ಷೆಗಳಿಗೆ ನಿಷೇಧ, ಒಂದು ವಾರದ ಅವಧಿಯೊಳಗೆ ಸಂಪೂರ್ಣ ಚುನಾವಣೆ, ಮಾರನೆಯ ದಿನ ಮತಎಣಿಕೆ ಆರಂಭಿಸುವುದು ಸೇರಿದಂತೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಚುನಾವಣಾ ಸುಧಾರಣೆಯಾಗಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವು ‘ಮತಪತ್ರದ ಮೂಲಕ ಮತದಾನ’ ವ್ಯವಸ್ಥೆಗೆ ಮರಳಬೇಕಾದ ಅಗತ್ಯವಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನತೆಯ ವಿಶ್ವಾಸವು ಮರುಸ್ಥಾಪನೆಯಾಗಲಿದೆ. ಮತಪತ್ರದ ಮೂಲಕ ಮತದಾನ ವ್ಯವಸ್ಥೆಯಲ್ಲೂ ಮತಗಟ್ಟೆ ವಶಪಡಿಸಿಕೊಳ್ಳುವ ವಿದ್ಯಮಾನಗಳು ನಡೆಯಬಹುದಾಗಿದೆ. ಆದರೆ ಚುನಾವಣಾ ಆಯೋಗವು ಈಗ ತನ್ನದೇ ಆದ ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತದೆ. ಇದಕ್ಕಾಗಿ ಟಿ.ಎನ್.ಶೇಷನ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಅವರ ಅಧಿಕಾರಾವಧಿಯಲ್ಲಿ ಚುನಾವಣಾ ಆಯೋಗವು ಸ್ವತಂತ್ರ ಹಾಗೂ ದೃಢವಾದ ನಿರ್ಧಾರಗಳನ್ನು ಕೈಗೊಂಡಿತ್ತು.
 ಶೇಷನ್‌ರ ಆನಂತರ ಬಂದ ಚುನಾವಣಾ ಆಯುಕ್ತರು ಕೂಡಾ ಸಂಸ್ಥೆಗಳ ಸ್ವಾತಂತ್ರ ಹಾಗೂ ದೃಢತೆಯನ್ನು ಕಾಪಾಡಿದರು. ಆದಾಗ್ಯೂ, ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷದ ಮುಖಂಡರಿಂದ ನಡೆದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸ್ಪಷ್ಟವಾದ ನಿಲುವನ್ನು ಕೈಗೊಳ್ಳಲು ಸಾಧ್ಯವಾಗದೆ ಹೋದುದು ನಿಜಕ್ಕೂ ಖೇದನೀಯ.
 ವಿವಿಪ್ಯಾಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮತ ಎಣಿಕೆಗೆ ಬಳಸಿ ಕೊಳ್ಳದಿದ್ದರೂ ಸರಕಾರವು ಅವುಗಳಿಗಾಗಿ 14,000 ಕೋಟಿ ರೂ. ಖರ್ಚು ಏಕೆ ಮಾಡುತ್ತಿದೆಯೆಂಬುದೇ ತಿಳಿಯುತ್ತಿಲ್ಲ. ಒಂದೋ ವಿವಿಪ್ಯಾಟ್ ಮತಗಳನ್ನು ಸಂಪೂರ್ಣವಾಗಿ ಎಣಿಕೆ ಮಾಡಬೇಕು ಹಾಗೂ ಅದನ್ನು ಆಧರಿಸಿ ಅಭ್ಯರ್ಥಿಯ ಗೆಲುವನ್ನು ಘೋಷಿಸಬೇಕು. ಮತಪತ್ರಗಳ ಬಳಕೆಯಿಂದ ಮತಏಣಿಕೆ ವಿಳಂಬಗೊಳ್ಳುವುದೆಂಬ ಆಕ್ಷೇಪವು, ಇವಿಎಂ ಬಳಕೆಯನ್ನು ಸಮರ್ಥಿಸುವ ವಾದವೆನಿಸದು. ನಮಗೆ ಸಂಪೂರ್ಣ ಸುರಕ್ಷತೆ ಹಾಗೂ ಭದ್ರತೆಯ ಅಗತ್ಯವಿದೆ. ಈ ಸಂದರ್ಭದಲ್ಲಿ ನಮಗೆ ಮತದಾನ ವ್ಯವಸ್ಥೆಯ ಬಗ್ಗೆ ಕಳೆದುಹೋಗಿರುವ ಜನತೆಯ ನಂಬಿಕೆಯನ್ನು ಮರಳಿ ಪಡೆಯಬೇಕಾದ ಅಗತ್ಯವಿದೆ.
 ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಲಪಡಿಸಲು ಜನರು ಚುನಾವಣಾ ಫಲಿತಾಂಶಕ್ಕಾಗಿ ಮೂರು ದಿನಗಳ ಮತ ಎಣಿಕೆಗೆ ಕಾಯಲೂ ಸಿದ್ಧರಿದ್ದಾರೆ. ಬ್ಯಾಲೆಟ್‌ಪೇಪರ್ ಮತದಾನದಿಂದಾಗಿ, ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ಸಂದೇಹಪಡಲಾರರು ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ನಮಗೆ ಸಂಪೂರ್ಣ ಗೌರವ ಮೂಡಲಿದೆ. ಎರಡು ಮೂರು ದಿನಗಳ ಮತ ಎಣಿಕೆಯ ಬ್ಯಾಲೆಟ್‌ಪೇಪರ್ ಯುಗದ ಆ ದಿನಗಳನ್ನು ಕಂಡವರು ಮತ ಎಣಿಕೆಯ ಕೌತುಕ, ರಹಸ್ಯವನ್ನು ಅನುಭವಿಸಿದ್ದಾರೆ. ವ್ಯವಸ್ಥೆಯ ಬಗ್ಗೆ ಜನತೆಯ ನಂಬಿಕೆಯು ಅಬಾಧಿತವಾಗಿ ಉಳಿಯಲು ಹಾಗೂ ಪ್ರಜಾಪ್ರಭುತ್ವವು ರಕ್ಷಣೆಯಾಗಲು ಸರಕಾರ, ಪ್ರತಿಪಕ್ಷಗಳು ಹಾಗೂ ಭಾರತೀಯ ಚುನಾವಣಾ ಆಯೋಗವು ಒಂದು ಹಂತದಲ್ಲಿ ಸಹಮತವನ್ನು ತಳೆಯಲಿವೆ ಎಂಬುದಾಗಿ ಆಶಿಸೋಣ.
ಕೃಪೆ: countercurrents

Writer - ವಿದ್ಯಾಭೂಷಣ್ ರಾವತ್

contributor

Editor - ವಿದ್ಯಾಭೂಷಣ್ ರಾವತ್

contributor

Similar News

ಜಗದಗಲ
ಜಗ ದಗಲ