ಇಂದು ಹಾಲಿ-ಮಾಜಿ ಚಾಂಪಿಯನ್ನರ ಹಣಾಹಣಿ

Update: 2019-06-08 18:53 GMT

  ಲಂಡನ್, ಜೂ.8: ಚಾಂಪಿಯನ್ ಆಸ್ಟ್ರೇಲಿಯ ಮತ್ತು ಮಾಜಿ ಚಾಂಪಿಯನ್ ಭಾರತ ರವಿವಾರ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ 14ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ವಿರಾಟ್ ಕೊಹ್ಲಿ ಮೊದಲ ಬಾರಿ ನಾಯಕರಾಗಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಕ್ಕೆ ಆಘಾತ ನೀಡಲು ಕೊಹ್ಲಿ ಪಡೆ ಕಾಯುತ್ತಿದೆ.

ಎರಡು ವಿಶ್ವಕಪ್ ಗೆದ್ದಿರುವ ಭಾರತ ಕಳೆದ ಬಾರಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 95 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಆಸ್ಟ್ರೇಲಿಯ ಫೈನಲ್ ಪ್ರವೇಶಿಸಿ ಮೊದಲ ಬಾರಿ ಕಪ್ ಗೆಲ್ಲುವ ಹಾದಿಯಲ್ಲಿದ್ದ ನ್ಯೂಝಿಲ್ಯಾಂಡ್‌ಗೆ ಆಘಾತ ನೀಡಿ ಐದನೇ ಬಾರಿ ವಿಶ್ವಕಪ್‌ನ್ನು ತನ್ನದಾಗಿಸಿಕೊಂಡಿತ್ತು.

ವಿಶ್ವಕಪ್‌ನಲ್ಲಿ ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 3 ಬಾರಿ ಮಾತ್ರ ಭಾರತಕ್ಕೆ ಗೆಲುವು ಸಾಧ್ಯವಾಗಿದೆ. ಕಳೆದ ಐದು ಆವೃತ್ತಿಗಳ ಪೈಕಿ 2011ರಲ್ಲಿ ತವರಿನಲ್ಲಿ ಭಾರತವು ಆಸ್ಟ್ರೇಲಿಯಕ್ಕೆ ಚಾಂಪಿಯನ್‌ಪಟ್ಟ ನಿರಾಕರಿಸಿತ್ತು.

 12ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಯಶಸ್ಸು: ಹನ್ನೆರಡನೇ ಆವೃತ್ತಿಯ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ 6 ವಿಕೆಟ್‌ಗಳ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ರೋಹಿತ್ ಶರ್ಮಾ ಅಜೇಯ ಶತಕ, ಯಜುವೇಂದ್ರ ಚಹಾಲ್ ಮತ್ತು ಜಸ್‌ಪ್ರೀತ್ ಬುಮ್ರಾ ಶಿಸ್ತುಬದ್ಧ ಬೌಲಿಂಗ್ ದಾಳಿ ಭಾರತದ ಗೆಲುವಿಗೆ ನೆರವಾಗಿತ್ತು.

ಆಸ್ಟ್ರೇಲಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಜಯ ಮತ್ತು 2ನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 15 ರನ್‌ಗಳ ಗೆಲುವು ದಾಖಲಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಗೆಲುವು ಸುಲಭವಲ್ಲ. ಆಸ್ಟ್ರೇಲಿಯಕ್ಕೆ ವಿಶ್ವದ ನಂ. 1 ದಾಂಡಿಗ ವಿರಾಟ್ ಕೊಹ್ಲಿ ಸವಾಲಾಗಲಿದ್ದಾರೆ. ಆಸ್ಟ್ರೇಲಿಯದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಭಾರತದ ದಾಂಡಿಗರನ್ನು ಕಾಡಲಿದ್ದಾರೆ. ಕೊಹ್ಲಿ ದಕ್ಷಿಣ ಆಫ್ರಿಕ ವಿರುದ್ಧ ಕಳೆದ ಪಂದ್ಯದಲ್ಲಿ ಕೇವಲ 18 ರನ್ ಸಿಡಿಸಿದ್ದರು. ಆದರೆ ಸ್ಟಾರ್ಕ್ ವೆಸ್ಟ್‌ಇಂಡೀಸ್ ವಿರುದ್ಧ 5 ವಿಕೆಟ್ ಉಡಾಯಿಸಿ ಆಸ್ಟ್ರೇಲಿಯದ ಗೆಲುವಿಗೆ ನೆರವಾಗಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿರುವ ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯ ದಾಂಡಿಗರಿಗೆ ತಲೆನೋವುಂಟು ಮಾಡಿದ್ದಾರೆ. ಬುಮ್ರಾ 50 ಏಕದಿನ ಪಂದ್ಯಗಳಲ್ಲಿ 87 ವಿಕೆಟ್ ಎಗರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ದ.ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಮೊದಲೆರಡು ವಿಕೆಟ್‌ಗಳನ್ನು ಬೇಗನೇ ಉಡಾಯಿಸಿ ಆಘಾತ ನೀಡಿದ್ದರು. ಐಪಿಎಲ್‌ನಲ್ಲಿ ಗರಿಷ್ಠ ರನ್ ದಾಖಲಿಸಿರುವ ಡೇವಿಡ್ ವಾರ್ನರ್ ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಜೇಯ 89 ರನ್ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News