ಪೆರಿಕಾರ್ಡಿಟಿಸ್: ಕಾರಣಗಳು ಮತ್ತು ಲಕ್ಷಣಗಳು

Update: 2019-06-09 13:51 GMT

ಪೆರಿಕಾರ್ಡಿಯಂ ಅಥವಾ ಹೃದಯಾವರಣವು ಹೃದಯವನ್ನು ಆವರಿಸಿರುವ ಚೀಲದಂತಹ ಅಂಗಾಂಶಗಳ ಎರಡು ತೆಳು ಪದರಗಳನ್ನು ಒಳಗೊಂಡಿರುತ್ತದೆ ಮತ್ತು ಹೃದಯವನ್ನು ಸ್ವಸ್ಥಾನದಲ್ಲಿರಿಸಲು ಮತ್ತು ಅದು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿರುವ ದ್ರವವು ಪದರಗಳ ನಡುವೆ ಘರ್ಷಣೆ ಯುಂಟಾಗದಂತೆ ಅವುಗಳನ್ನು ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಹೃದಯಾವರಣದ ಉರಿಯೂತವನ್ನು ಪೆರಿಕಾರ್ಡಿಟಿಸ್ ಎಂದುಕರೆಯಲಾಗುತ್ತದೆ.

ಎದೆನೋವು ಪೆರಿಕಾರ್ಡಿಟಿಸ್‌ನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಹೃದಯಾವರಣದ ಪದರಗಳು ಉರಿಯೂತಕ್ಕೆ ತುತ್ತಾದಾಗ ಮತ್ತು ಹೃದಯಕ್ಕೆ ತಿಕ್ಕತೊಡಗಿದಾಗ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚುಕಡಿಮೆ ಹೃದಯಾಘಾತ ಸಂಭವಿಸಿದಾಗ ಉಂಟಾಗುವ ನೋವಿನಂತೆಯೇ ಇರುತ್ತದೆ. ಪೆರಿಕಾರ್ಡಿಟಿಸ್ ದಿಢೀರ್ ಆಗಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಹೆಚ್ಚು ಸಮಯ ಇರುವುದಿಲ್ಲ. ದೀರ್ಘಕಾಲದಿಂದಲೂ ಈ ಸಮಸ್ಯೆ ಕಾಡುತ್ತಿದ್ದರೆ ಕಾಲಕ್ರಮೇಣ ಅದು ಅಭಿವೃದ್ಧಿಗೊಳ್ಳುತ್ತದೆ ಮತ್ತು ಚಿಕಿತ್ಸೆಗೆ ಸುದೀರ್ಘ ಸಮಯ ಬೇಕಾಗಬಹುದು. ಈ ಕಾಯಿಲೆಯು ಹೃದಯ ಬಡಿತಗಳನ್ನು ಮತ್ತು ಹೃದಯದ ಕಾರ್ಯನಿರ್ವಹಣೆಯನ್ನು ವ್ಯತ್ಯಯಗೊಳಿಸುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಪೆರಿಕಾರ್ಡಿಟಿಸ್ ಸಾವಿಗೂ ಕಾರಣವಾಗುತ್ತದೆ.

ಕಾರಣಗಳು

ವೈರಾಣು ಸೋಂಕುಗಳು ಪೆರಿಕಾರ್ಡಿಟಿಸ್‌ಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆಯಾದರೂ ಅದಕ್ಕೆ ನಿಜವಾದ ಕಾರಣವಿನ್ನೂ ದೃಢಪಡಬೇಕಿದೆ. ಈ ಕಾಯಿಲೆಯು ಹೆಚ್ಚಾಗಿ ಉಸಿರಾಟ ವ್ಯವಸ್ಥೆಯ ಸೋಂಕಿನ ಬಳಿಕ ಕಾಣಿಸಿಕೊಳ್ಳುತ್ತದೆ. ಲುಪಸ್,ಸ್ಲೆರೊಡರ್ಮಾ ಮತ್ತು ರುಮಟಾಯ್ಡೆ ಸಂಧಿವಾತದಂತಹ ಸ್ವರಕ್ಷಿತ ರೋಗಗಳು ಸಾಮಾನ್ಯವಾಗಿ ದೀರ್ಘಕಾಲಿಕ ಪೆರಿಕಾರ್ಡಿಟಿಸ್‌ಗೆ ಕಾರಣವಾಗುತ್ತವೆ.

ಮೂತ್ರಪಿಂಡ ವೈಫಲ್ಯ,ಕ್ಯಾನ್ಸರ್,ಕ್ಷಯರೋಗ ಮತ್ತು ಎಚ್‌ಐವಿ/ಏಡ್ಸ್,ಹೃದಯಾಘಾತ ಮತ್ತು ಹೃದಯ ಶಸ್ತ್ರಚಿಕಿತ್ಸೆ,ಅಪಘಾತಗಳಿಂದುಂಟಾದ ಗಾಯಗಳು,ವಿಕಿರಣ ಚಿಕಿತ್ಸೆ,ವಾರ್ಫರಿನ್,ಹೆಪರಿನ್,ಫಿನೈಟಾಯ್ನೆನಂತಹ ಕೆಲವು ಔಷಧಿಗಳ ಬಳಕೆ ಇವೂ ಪೆರಿಕಾರ್ಡಿಟಿಸ್‌ಗೆ ಇತರ ಸಂಭಾವ್ಯ ಕಾರಣಗಳಾಗಿವೆ.

ಹೃದಯಾಘಾತ ಅಥವಾ ಹೃದಯ ಚಿಕಿತ್ಸೆಯ ವಾರಗಳ ಬಳಿಕ ಪೆರಿಕಾರ್ಡಿಟಿಸ್ ಉಂಟಾದರೆ ಅದನು ಡ್ರೆಸ್ಲರ್ಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಮತ್ತು ಇಂತಹ ಪ್ರಕರಣಗಳಲ್ಲಿ ಇದು ಸ್ವರಕ್ಷಿತ ರೋಗವಾಗಿರುತ್ತದೆ.

ಲಕ್ಷಣಗಳು

ಸೌಮ್ಯ ಜ್ವರ,ಎದೆಯಲ್ಲಿ ತೀವ್ರ ನೋವು,ಹೃದಯ ಬಡಿತದಲ್ಲಿ ಹೆಚ್ಚಳ,ಇಡೀ ಶರೀರದಲ್ಲಿ ನಿಶ್ಶಕ್ತಿ,ಉಸಿರಾಟದ ತೊಂದರೆ,ಕೆಮ್ಮು,ಭುಜದಲ್ಲಿ ನೋವು,ಉದರ ಅಥವಾ ಕಾಲುಗಳಲ್ಲಿ ಊತ ಇವು ಪೆರಿಕಾರ್ಡಿಟಿಸ್‌ನ ಲಕ್ಷಣಗಳಲ್ಲಿ ಸೇರಿವೆ.

ಪೆರಿಕಾರ್ಡಿಟಿಸ್ ಮತ್ತು ಹೃದಯಾಘಾತದ ಲಕ್ಷಣಗಳು ಹೆಚ್ಚುಕಡಿಮೆ ಒಂದೇ ಆಗಿರುವುದರಿಂದ ತೀವ್ರ ಎದೆನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಾಣುವುದು ಮುಖ್ಯವಾಗುತ್ತದೆ.

ಪೆರಿಕಾರ್ಡಿಟಿಸ್‌ನ ತೊಡಕುಗಳು ಕನ್‌ಸ್ಟ್ರಕ್ಟಿವ್ ಪೆರಿಕಾರ್ಡಿಟಿಸ್: ಸಾಮಾನ್ಯವಾಗಿ ದೀರ್ಘಕಾಲದಿಂದಲೂ ಪೆರಿಕಾರ್ಡಿಟಿಸ್ ಸಮಸ್ಯೆಗೆ ತುತ್ತಾಗುತ್ತಿರುವವರಲ್ಲಿ ಹೃದಯಾವರಣವು ಕಾಯಂ ಆಗಿ ದಪ್ಪವಾಗಬಹುದು ಮತ್ತು ಸಂಕುಚಿತಗೊಳ್ಳಬಹುದು. ಇಂತಹ ಸ್ಥಿತಿಯಲ್ಲಿ ಅದು ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತದೆ ಮತ್ತು ಇದು ಉದರ ಹಾಗೂ ಕಾಲುಗಳಲ್ಲಿ ತೀವ್ರ ಊತಕ್ಕೆ ಕಾರಣವಾಗುತ್ತದೆ.

ಕಾರ್ಡಿಯಾಕ್ ಟ್ಯಾಂಪೊನೇಡ್: ಹೃದಯಾವರಣದಲ್ಲಿ ಅತಿಯಾದ ಪ್ರಮಾಣದಲ್ಲಿ ದ್ರವವಿದ್ದಾಗ ಕಾರ್ಡಿಯಾಕ್ ಟ್ಯಾಂಪೊನೇಡ್ ಎಂಬ ಸ್ಥಿತಿಯು ಉಂಟಾಗುತ್ತದೆ. ಹೆಚ್ಚುವರಿ ದ್ರವವು ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಅದರ ಸೂಕ್ತ ಕಾರ್ಯನಿರ್ವಹಣೆಗೆ ತಡೆಯನ್ನೊಡ್ಡುತ್ತದೆ. ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೆ ಕಾರಣವಾಗಬಹುದು.

ರೋಗನಿರ್ಣಯ ಹೇಗೆ?

ಹೃದಯಾವರಣದ ಪದರಗಳು ಪರಸ್ಪರ ಘರ್ಷಿಸುವಾಗ ಅವು ನಿರ್ದಿಷ್ಟ ಶಬ್ದವನ್ನುಂಟು ಮಾಡುತ್ತವೆ. ಹೀಗಾಗಿ ರೋಗನಿರ್ಣಯದ ಸಂದರ್ಭದಲ್ಲಿ ವೈದ್ಯರು ಮೊದಲು ಸ್ಟೆಥಾಸ್ಕೋಪ್ ಮೂಲಕ ಈ ಶಬ್ದವನ್ನು ಆಲಿಸಲು ಪ್ರಯತ್ನಿಸುತ್ತಾರೆ. ಕಾಯಿಲೆಯನ್ನು ದೃಢಪಡಿಸಿಕೊಳ್ಳಲು ಕ್ಷ-ಕಿರಣ,ಸಿಟಿ ಸ್ಕಾನ್,ಹೃದಯದ ಎಂಆರ್‌ಐ, ಎಕೊಕಾರ್ಡಿಯೊಗ್ರಾಂ ಮತ್ತು ಇಸಿಜಿ ಪರೀಕ್ಷೆಗಳನ್ನೂ ನಡೆಸಬಹುದು.

ಪೆರಿಕಾರ್ಡಿಟಿಸ್‌ನ ತೀವ್ರತೆ ಮತ್ತು ಅದಕ್ಕೆ ಕಾರಣವನ್ನು ಅವಲಂಬಿಸಿ ಚಿಕಿತ್ಸಾ ಕ್ರಮವನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಔಷಧಿಗಳನ್ನು ನೀಡುವ ಮೂಲಕ ಈ ರೋಗವನ್ನು ಗುಣಪಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News