×
Ad

ಮೋದಿ ವಿಮಾನ ಪಾಕಿಸ್ತಾನದಿಂದ ಹಾದುಹೋಗಲು ಅನುಮತಿ ನೀಡಲು ಭಾರತದ ಕೋರಿಕೆ

Update: 2019-06-09 22:22 IST

ಹೊಸದಿಲ್ಲಿ,ಜೂ.9: ಕಿರ್ಗ್ಜಿಸ್ತಾನದ ಬಿಷ್ಕೆಕ್‌ಗೆ ತೆರಳಲು ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ತನ್ನ ವಾಯುಪ್ರದೇಶದಿಂದ ಹಾದುಹೋಗಲು ಅನುಮತಿ ನೀಡುವಂತೆ ಭಾರತವು ಪಾಕಿಸ್ತಾನವನ್ನು ಕೋರಿಕೊಂಡಿದೆ. ಮೋದಿ ಅವರು ಜೂ.13-14ರಂದು ಬಿಷ್ಕೆಕ್‌ನಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

 ಗಡಿಯಾಚೆಯ ಬಾಲಕೋಟ್‌ನಲ್ಲಿಯ ಜೈಷೆ ಮುಹಮ್ಮದ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯ ಬಳಿಕ ಫೆ. 26ರಂದು ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿತ್ತು. ಅದರಿಂದೀಚಿಗೆ ಅದು ಒಟ್ಟು 11 ವಾಯುಮಾರ್ಗಗಳ ಪೈಕಿ ದಕ್ಷಿಣ ಪಾಕಿಸ್ತಾನದ ಮೂಲಕ ಹಾದುಹೋಗುವ ಕೇವಲ ಎರಡು ಮಾರ್ಗಗಳನ್ನು ಮಾತ್ರ ವಿಮಾನಗಳ ಹಾರಾಟಕ್ಕೆ ಮುಕ್ತಗೊಳಿಸಿದೆ.

ಪಾಕಿಸ್ತಾನವು ಈವರೆಗೂ ಮುಕ್ತಗೊಳಿಸಿರದ ಒಂದು ಮಾರ್ಗದಿಂದ ಪ್ರಧಾನಿಯ ವಿಮಾನ ಹಾದುಹೋಗಲು ಅನುಮತಿ ಕೋರಿದ್ದೇವೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಮೇ 21ರಂದು ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಬಿಷ್ಕೆಕ್‌ನಲ್ಲಿ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಲು ಅವರ ವಿಮಾನವು ತನ್ನ ವಾಯುಪ್ರದೇಶದಿಂದ ಹಾದುಹೋಗಲು ಪಾಕಿಸ್ತಾನವು ವಿಶೇಷ ಅನುಮತಿಯನ್ನು ನೀಡಿತ್ತು.

ದಕ್ಷಿಣ ಪಾಕಿಸ್ತಾನದಲ್ಲಿಯ ಎರಡು ವಾಯುಮಾರ್ಗಗಳನ್ನು ಹೊರತುಪಡಿಸಿದರೆ ಇತರೆಲ್ಲ ಮಾರ್ಗಗಳು ವಾಣಿಜ್ಯಿಕ ವಿಮಾನಗಳ ಪಾಲಿಗೆ ಮುಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News