ಭಾರತ ನಮ್ಮೆಲ್ಲರದು; ಆತಂಕ ಬೇಡ

Update: 2019-06-09 18:30 GMT

ಈ ಚುನಾವಣೆಯ ಸೋಲು ಶಾಶ್ವತವಲ್ಲ. ಮತ್ತೆ ಕಾಲ ಬದಲಾಗುತ್ತದೆ. ಚುನಾವಣೆಗಳು ಬರುತ್ತವೆ. ಈಗ ಗೆದ್ದವರು ಆಗ ಸೋಲಬಹುದು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು ಮುಂದೆ ಒಂದೇ ತಿಂಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲಲಿಲ್ಲವೇ?


ಇತ್ತೀಚಿನ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಬೌದ್ಧಿಕ ವಲಯಗಳಲ್ಲಿ ಇಂದಿಗೂ ಆತಂಕಭರಿತ ಚರ್ಚೆ ನಡೆಯುತ್ತಲೇ ಇದೆ. ಅದನ್ನು ಬಿಟ್ಟರೆ ತಾವು ಸಾವಿರಾರು ವರ್ಷಗಳಿಂದ ಬದುಕಿದ, ಬದುಕು ಕಟ್ಟಿಕೊಂಡ ಈ ಭಾರತ ಎಂಬ ತಮ್ಮದೇ ದೇಶದಲ್ಲಿ ಈಗ ಒಂದು ವಿಧದ ಆತಂಕ ಮತ್ತು ಭೀತಿಯಿಂದ ಈ ಚುನಾವಣಾ ಫಲಿತಾಂಶಗಳ ನಂತರ ಒಂಟಿಯಾಗಿ ನೋವನ್ನು ಅನುಭವಿಸುತ್ತಿರುವವರು, ಅಲ್ಪಸಂಖ್ಯಾತರು ಅದರಲ್ಲೂ ಮುಸಲ್ಮಾನ ಬಂಧುಗಳು. ಈ ಕಳವಳಕ್ಕೆ ಕಾರಣಗಳಿಲ್ಲದಿಲ್ಲ.
  ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು ಭಾರತ ಹಿಂದೂರಾಷ್ಟ್ರ ಆಗಬೇಕೆಂದು ಪ್ರತಿಪಾದಿಸಿ ಅದಕ್ಕೆ ಅಡ್ಡಿಯಾಗಿರುವ ಮೂವರು ಶತ್ರುಗಳು ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಎಂದು ಗುರುತಿಸಿದ್ದರು. ಈ ಅಡ್ಡಿಗಳಲ್ಲಿ ರಾಜಕೀಯವಾಗಿ ಚುನಾವಣೆಯಲ್ಲಿ ಕಮ್ಯುನಿಸ್ಟರು ಈಗಾಗಲೇ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಮುಸಲ್ಮಾನರು ಈ ದೇಶದಲ್ಲಿ ಬದುಕಬೇಕಾದರೆ ಹಿಂದೂಗಳ ಅಡಿಯಾಳಾಗಿ ಎರಡನೇ ದರ್ಜೆ ನಾಗರಿಕರಾಗಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. ಇದೇ ಆ ಸಮುದಾಯದಲ್ಲಿ ಭೀತಿ ಮೂಡಿಸಿರುವುದು ನಿಜ.

ಇಷ್ಟು ದಿನ ಭದ್ರತೆಯ ಭರವಸೆ ನೀಡುತ್ತ ಬಂದ ಕಾಂಗ್ರೆಸ್‌ನಂಥ ಜಾತ್ಯತೀತ ಪಕ್ಷಗಳೂ ಸೋತು ಸುಣ್ಣವಾಗಿವೆ. ಯಾರು ಇರದಿದ್ದರೂ ಕಮ್ಯುನಿಸ್ಟರಾದರೂ ಇದ್ದಾರಲ್ಲ ಎಂದು ನಿಟ್ಟುಸಿರು ಬಿಡುವ ಕಾಲವೂ ಇದಲ್ಲ. ಅವರೂ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ದೇಶ ವಿಭಜನೆ ಸಂದರ್ಭದಲ್ಲಿ ಕೋಮು ಗಲಭೆ ನಡೆದು ರಕ್ತಪಾತವಾದಾಗ ನೌಕಾಲಿಗೆ ಕೋಲೂರಿಕೊಂಡು ಹೋದ ಮಹಾತ್ಮಾ ಗಾಂಧೀಜಿಯೂ ಈಗಿಲ್ಲ. ಈಗ ರಕ್ಷಾಕವಚವಾಗಿರುವುದು ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾತ್ರ. ಈ ಬಿಜೆಪಿಯವರು ಅದನ್ನೂ ಬದಲಿಸಿದರೆ ತಮ್ಮ ಗತಿಯೇನು ಎಂಬ ಆತಂಕ ಮುಸ್ಲಿಂ ಸಮುದಾಯದಲ್ಲಿದೆ. ಅಂತಲೇ ಉಳಿದವರು ಕೈ ಕೊಟ್ಟರೂ ಈ ಬಾರಿ ಸೆಕ್ಯುಲರ್ ಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್‌ಗೆ ಮತ ಹಾಕಿ ಜಾತ್ಯತೀತಗೆ ತಮ್ಮ ಬದ್ಧತೆಯನ್ನು ಅವರು ತೋರಿಸಿದರು.

ಈ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷವು ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ, ರಾಷ್ಟ್ರೀಯ ಪೌರತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಬೆದರಿಸುತ್ತಲೇ ಇದೆ. ಅಸ್ಸಾಂನಲ್ಲಿ ವಿದೇಶಿಯರ ನ್ಯಾಯಾಧಿಕರಣದಿಂದ ವಿದೇಶಿಯನೆಂದು ಘೋಷಿಸಲ್ಪಟ್ಟ ಮುಹಮ್ಮದ್ ಸನಾವುಲ್ಲಾ ಕತೆ ಎಲ್ಲರಿಗೂ ಗೊತ್ತಿದೆ. ಭಾರತೀಯ ಸೇನೆಯ ಮಾಜಿ ಯೋಧ ಸನಾವುಲ್ಲಾ ಕಾರ್ಗಿಲ್ ಸಮರದ ವೀರ. ಭಾರತೀಯ ಸೇನೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿದ ಸನಾವುಲ್ಲಾರನ್ನು ವಿದೇಶಿಯನೆಂದು ಬಂಧಿಸಿದಾಗ ಆತನ ಮನಸ್ಸಿಗೆ ಎಷ್ಟು ನೋವಾಗಿರಬಹುದು. ಅಂತಲೇ ಸನಾವುಲ್ಲಾ ಕೋರ್ಟ್‌ಗೆ ಹೋದರು. ಗುವಾಹಟಿ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಿತು. ಈ ಬಗ್ಗೆ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಪ್ರತಿವಾದಿಗಳಾದ ಅಸ್ಸಾಂ ಹಾಗೂ ಕೇಂದ್ರದ ಬಿಜೆಪಿ ಸರಕಾರಕ್ಕೆ ಮತ್ತು ಅಸ್ಸಾಂ ಗಡಿ ಪೊಲೀಸ್ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಾಧಿಕಾರಕ್ಕೆ ನೋಟೀಸ್ ಜಾರಿಮಾಡಿದೆ.

ಮುಸಲ್ಮಾನರು ಕಾಂಗ್ರೆಸನ್ನು ನಂಬಿದ್ದರು. ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ಪರಿಣಾಮವಾಗಿ ಕಾಂಗ್ರೆಸ್‌ನ ಮೇಲಿನ ನಂಬಿಕೆಗೂ ಭಗ್ನವುಂಟಾಯಿತು. ಆದರೂ ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ ಎಂಬ ನಂಬಿಕೆಯಿಂದ ಇತ್ತೀಚಿನ ಚುನಾವಣೆಯಲ್ಲೂ ಮುಸಲ್ಮಾನರು ಕಾಂಗ್ರೆಸ್‌ಗೆ ಮತ ಹಾಕಿದರು. ಮುಸಲ್ಮಾನರು ಸರಕಾರದಿಂದ ಭದ್ರತೆಯ ಹೊರತು ಇನ್ನೇನನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಸ್ಥಿತಿ ದಾರುಣವಾಗಿದೆ. ಮುಸ್ಲಿಂ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಸಮಗ್ರವಾದ ಆಧ್ಯಯನ ಮಾಡಿದ ಯಾವ ವರದಿಗಳನ್ನೂ ಹಿಂದಿನ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಸರಕಾರಗಳು ಜಾರಿಗೆ ತಂದಿಲ್ಲ. ಆದರೂ ಮುಸ್ಲಿಂ ಮತಗಳು ಜಾತ್ಯತೀತರ ಪರವಾಗಿ ಬಿದ್ದವು. ಮುಸಲ್ಮಾನರು ಹೇಗಿದ್ದರೂ ತಮಗೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ತಮ್ಮ ಸೆಕ್ಯುಲರ್ ತತ್ವಗಳನ್ನು ಗಾಳಿಗೆ ತೂರಿ ಗುಡಿ ಗುಂಡಾರ ಸುತ್ತಿ ಬಿಜೆಪಿಯೊಂದಿಗೆ ಪೈಪೋಟಿ ನಡೆಸಿದವು. ರಾಹುಲ್ ಗಾಂಧಿಗೆ ಜನಿವಾರ ಹಾಕಿಸಿ ಮೃದು ಹಿಂದುತ್ವ ಧೋರಣೆ ಅನುಸರಿಸಿದವು. ಈ ಆಷಾಢಭೂತಿತನದಿಂದ ತಮ್ಮ ಇಮೇಜ್ ಹಾಳು ಮಾಡಿಕೊಂಡು ಈ ಸ್ಥಿತಿಗೆ ಬಂದಿವೆ.

ಈಗ ಚುನಾವಣೆ ಮುಗಿದಿದೆ. ಇನ್ನು ಐದು ವರ್ಷ ಬಿಜೆಪಿ ಸರಕಾರವೇ ಇರುತ್ತದೆ. ಅಷ್ಟೇ ಅಲ್ಲ ಇನ್ನು 2047ರವರೆಗೆ ನಾವೇ ಅಧಿಕಾರದಲ್ಲಿ ಇರುತ್ತೇವೆ, ಮೋದಿ ಪ್ರಧಾನಿಯಾಗಿರುತ್ತಾರೆ ಎಂದು ಬಿಜೆಪಿ ನಾಯಕ ರಾಮ ಮಾಧವ ಹೇಳಿದ್ದಾರೆ. ಅಮಿತ್ ಶಾ ಗೃಹ ಮಂತ್ರಿ ಆಗಿರುವುದರಿಂದ ಮುಂದೇನು ಎಂಬ ಭೀತಿಯ ವಾತಾವರಣ ಉಂಟಾಗಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. 

 ಯಾರು ಏನೇ ಹೇಳಲಿ ಬಿಜೆಪಿ ಸರಕಾರ ಬಂದಿದೆ ಎಂದು ಅಲ್ಪಸಂಖ್ಯಾತರು ಹೆದರಬೇಕಾಗಿಲ್ಲ. ಈ ಭಾರತ ಬಿಜೆಪಿಯನ್ನು ಗೆಲ್ಲಿಸಿರಬಹುದು. ಆದರೆ ಇಲ್ಲಿ ಬುದ್ಧ, ಮಹಾವೀರ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಇನ್ನೂ ಇದ್ದಾರೆ. ಸಾಮಾಜಿಕ ಜೀವನದಲ್ಲಿ ಸೌಹಾರ್ದದ ಸೆಲೆ ಇನ್ನೂ ಬತ್ತಿಲ್ಲ. ಇತ್ತೀಚೆಗೆ ರಮಝಾನ್ ಹಬ್ಬದಲ್ಲಿ ನಾನು ಇದನ್ನು ಗಮನಿಸಿದೆ. ಬಿಜೆಪಿ ಗೆದ್ದ ನಂತರ ಸರಕಾರದ ಇಫ್ತಾರ್ ಪಾರ್ಟಿಗಳು ಕಡಿಮೆಯಾಗಿವೆ. ಆದರೆ ದೇಶದ ಮೂಲೆಮೂಲೆಗಳಲ್ಲಿ ಹಿಂದೂಗಳು ಸೇರಿದಂತೆ ಎಲ್ಲ ಸಮುದಾಯಗಳ ಸಾಮಾನ್ಯ ಜನರು ಸ್ವಯಂ ಪ್ರೇರಣೆಯಿಂದ ಈ ಹಬ್ಬದಲ್ಲಿ ಪಾಲ್ಗೊಂಡು ಶುಭಾಶಯಗಳ ವಿನಿಮಯ ಮಾಡಿಕೊಂಡರು. ಅಯೋಧ್ಯೆಯ ರಾಮ ಮಂದಿರದ ಅಂಗಳದಲ್ಲೂ ಇಫ್ತಾರ್ ಪಾರ್ಟಿ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರಿಗೆ ಹಿಂದೂ, ಸಿಖ್, ಕ್ರೈಸ್ತ ಸಮುದಾಯದವರು ಶುಭಾಶಯಗಳು ವ್ಯಕ್ತಪಡಿಸಿದರು. ಭಾರತದಲ್ಲಿ ಒಬ್ಬಿಬ್ಬರಲ್ಲ ಹದಿನೆಂಟು ಕೋಟಿ ಮುಸಲ್ಮಾನರಿದ್ದಾರೆ. ಒಂದು ಕೋಟಿ ಕ್ರೈಸ್ತರಿದ್ದಾರೆ. ಇಪ್ಪತ್ತೈದು ಕೋಟಿಗಿಂತ ಹೆಚ್ಚು ದಲಿತರಿದ್ದಾರೆ. ಇವನ್ನೆಲ್ಲ ಮೂಲೆಗುಂಪು ಮಾಡಿ ಹಿಂದೂರಾಷ್ಟ್ರ ನಿರ್ಮಿಸುವುದು ಸುಲಭವಲ್ಲ. ಅದಕ್ಕೆ ಸಂವಿಧಾನ ಬದಲಾವಣೆ ಮಾಡಬೇಕು. ಸಂವಿಧಾನವನ್ನು ಮುಟ್ಟಿದರೆ ದಮನಿತ, ಶೋಷಿತ ಸಮುದಾಯಗಳು ಸಿಡಿದೇಳುತ್ತವೆ. ಇನ್ನು ಹದಿನೆಂಟು ಕೋಟಿ ಮುಸಲ್ಮಾನರು ಈ ದೇಶದ ಸಾಮಾಜಿಕ , ಸಾಂಸ್ಕೃತಿಕ , ರಾಜಕೀಯ, ವೈಜ್ಞಾನಿಕ, ವೈದ್ಯಕೀಯ ಲೋಕದಲ್ಲಿ ಬೇರ್ಪಡಿಸಲಾಗದಂತೆ ಬೆರತು ಹೋಗಿದ್ದಾರೆ. ಅವರನ್ನೆಲ್ಲ ರಾತ್ರೋ ರಾತ್ರಿ ಪಾಕಿಸ್ತಾನಕ್ಕೆ ಕಳಿಸಲು ಆಗುವುದಿಲ್ಲ. ಈ ವಾಸ್ತವ ಸಂಗತಿ ಮೋದಿ, ಅಮಿತ್‌ಶಾ, ಮೋಹನ್ ಭಾಗವತ್ ಇವರೆಲ್ಲರಿಗೆ ಗೊತ್ತಿದೆ.

ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ಅಲ್ಪಸಂಖ್ಯಾತರು ಹೆದರಬೇಕಿಲ್ಲ. ಈ ದೇಶದ 130 ಕೋಟಿ ಜನರಲ್ಲಿ ಅವರೂ ಇದ್ದಾರೆ. ಈ ನೆಲದ ಮೇಲೆ ಅವರಿಗೂ ಹಕ್ಕಿದೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಈ ದೇಶದ ಮಾಲಕರಾಗುವದಿಲ್ಲ.
ಹಾಗೆಂದು ಅಲ್ಪಸಂಖ್ಯಾತರು ಮೈ ಮರೆತು ಇರಬಾರದು. ಫ್ಯಾಶಿಸ್ಟರು ಏನೂ ಮಾಡಲಾಗದಿದ್ದರೂ ಅಲ್ಲಲ್ಲಿ ದನ ಸಾಗಾಟದ ಹೆಸರಿನಲ್ಲಿ, ಲವ್ ಜಿಹಾದ್ ನೆಪದಲ್ಲಿ ಹಲ್ಲೆ, ಕೊಲೆ, ಸುಲಿಗೆ ಮಾಡಬಹುದು. ಅದನ್ನು ಎದುರಿಸಿ ನಿಲ್ಲಬೇಕು,

ಮುಸಲ್ಮಾನರು, ಕ್ರೈಸ್ತರು ಭಾರತದಲ್ಲಿ ಒಂಟಿಯಲ್ಲ. ಸರ್ವಜನಾಂಗದ ಶಾಂತಿಯ ತೋಟದ ಕಾವಲುಗಾರರಾಗಿ ಈ ದೇಶದ ಉದಾರವಾದಿ ಜನರು, ಚಿಂತಕರು, ಪ್ರಗತಿಪರ ವಿಚಾರವಾದಿಗಳು ಇದ್ದಾರೆ. ಈ ಒಂದು ತತ್ವಕ್ಕಾಗಿ, ಸೌಹಾರ್ದ ಭಾರತಕ್ಕಾಗಿ ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸಾರೆ, ಡಾ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ರಂಥವರು ಬಲಿದಾನ ಮಾಡಿದ್ದಾರೆ. ಕತ್ತಲಲ್ಲಿ ಬೆಳಕನ್ನು ನೀಡುವ ಕಿರಣಗಳು ಇನ್ನೂ ಇವೆ. ಎಡಪಂಥೀಯ ಪಕ್ಷಗಳು ಸೋತಿದ್ದರೂ ಮತ್ತೆ ಪುಟಿದೇಳುತ್ತವೆ. ಜಾತ್ಯತೀತ ಪಕ್ಷಗಳು ತಪ್ಪುಗಳನ್ನು ತಿದ್ದಿಕೊಳ್ಳುತ್ತವೆ. ಇಲ್ಲಿ ಏನಾದರೂ ಅನಾಹುತ ಮಾಡಲು ಹೋದರೆ ಇಡೀ ಜಗತ್ತೇ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಆದ್ದರಿಂದ ನಿರಾಸೆ ಬೇಡ.

ಮುಸಲ್ಮಾನರ ಶೋಚನೀಯ ಪರಿಸ್ಥಿತಿಯ ಬಗ್ಗೆ ನ್ಯಾಯಮೂರ್ತಿ ಸಾಚಾರ ಆಯೋಗ ಅಧ್ಯಯನ ಮಾಡಿ ವರದಿ ನೀಡಿದೆ. ಯುಪಿಎ ಸರಕಾರ ಅದನ್ನು ಜಾರಿಗೆ ತರಬೇಕಾಗಿತ್ತು. ತರಲಿಲ್ಲ. ಈಗ ಮೋದಿಯವರು ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸರಕಾರದ ಯೋಜನೆಗಳ ಪ್ರಯೋಜನ ಪಡೆಯಲು ಮುಸಲ್ಮಾನರು ಹಿಂಜರಿಯಬಾರದು. ಈಗಲೂ ನಾನಾ ಸರಕಾರಿ ದವಾಖಾನೆಗಳಿಗೆ ಹೋದಾಗ ನೋಡುತ್ತೇನೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬಂದಿರುತ್ತಾರೆ. ಕಡು ಬಡತನದಲ್ಲಿರುವ ಅವರಿಗೆ ಸರಕಾರಿ ಆಸ್ಪತ್ರೆಗಳೆ ಆಧಾರವಾಗಿವೆ.

 ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ ನಂತರ ಇಡೀ ಜಗತ್ತೇ ನಮ್ಮ ದೇಶದತ್ತ ನೋಡುತ್ತಿದೆ. ವಿದೇಶಿ ಮಾಧ್ಯಮಗಳಲ್ಲಿ ಬಿಜೆಪಿ ಬಗ್ಗೆ ಕಟುಟೀಕೆಯೂ ವ್ಯಕ್ತವಾಗಿದೆ. ಆದ್ದರಿಂದ ಮನ ಬಂದಂತೆ ಮಾಡುವುದೂ ಸುಲಭವಲ್ಲ. ಹಾಗೆಂದು ನಿರ್ಲಕ್ಷ ಮಾಡಲೂ ಆಗುವುದಿಲ್ಲ. ನಿರಂತರ ಎಚ್ಚರಿಕೆ, ಜಾಗ್ರತೆಯಿಂದ ಬಹುಮುಖಿ ಭಾರತವನ್ನು ಉಳಿಸಿಕೊಳ್ಳುವ ಹೊಣೆ ಉಳಿದೆಲ್ಲರಿಗಿಂತ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯಗಳ ಮೇಲಿದೆ. ಯಾಕೆಂದರೆ ಈ ಭಾರತ ಅವರದು. ತಮ್ಮ ದೇಶವನ್ನು ತಾವು ಉಳಿಸಿಕೊಳ್ಳಲು ಹಿಂಜರಿಕೆ ಬೇಡ.

ಈ ಬಾರಿ ಅರ್ಬನ್ ನಕ್ಸಲರ ದಮನದ ಹೆಸರಿನಲ್ಲಿ ಆನಂದ ತೇಲ್ತುಂಬ್ಡೆ ಅವರಂಥ ಚಿಂತಕರು ಮತ್ತು ವಿಚಾರವಾದಿಗಳನ್ನು ಹತ್ತಿಕ್ಕಲು ಪ್ರಭುತ್ವ ಯತ್ನಿಸಬಹುದು. ಮಾವೋವಾದಿಗಳ ದಮನದ ಹೆಸರಿನಲ್ಲಿ ಆದಿವಾಸಿಗಳನ್ನು ಶತಮಾನಗಳಿಂದ ಅವರು ನೆಲೆಸಿರುವ ಕಾಡಿನಿಂದ ಎತ್ತಂಗಡಿ ಮಾಡಲು ದಮನಕಾಂಡ ನಡೆಯಬಹುದು. ಅದನ್ನೆದುರಿಸಿ ಜನ ಹೋರಾಟಗಳ ಅಲೆ ಪ್ರವಾಹದ ರೂಪದಲ್ಲಿ ಬರಬಹುದು.

ಬರಲಿರುವ ದಿನಗಳು ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಬಹುತೇಕ ಜನರಿಗೆ ಕಷ್ಟದ ದಿನಗಳಾಗಿರಬಹುದು. ಆದರೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೂ ಇವು ಸುಲಭದ ದಿನಗಳಲ್ಲ ಎಂಬುದನ್ನು ಮರೆಯಬಾರದು.
ಈ ಚುನಾವಣೆಯ ಸೋಲು ಶಾಶ್ವತವಲ್ಲ. ಮತ್ತೆ ಕಾಲ ಬದಲಾಗುತ್ತದೆ. ಚುನಾವಣೆಗಳು ಬರುತ್ತವೆ. ಈಗ ಗೆದ್ದವರು ಆಗ ಸೋಲಬಹುದು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು ಮುಂದೆ ಒಂದೇ ತಿಂಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲಲಿಲ್ಲವೇ?
ಅಲ್ಪಸಂಖ್ಯಾತರು ಅಸಹಾಯಕರಾಗಬಾರದು. ಈ ಭಾರತ ನಿಮ್ಮದು, ನಮ್ಮದು ಎಲ್ಲರದ್ದು. ಇದನ್ನು ಉಳಿಸಿಕೊಳ್ಳಲು ಪಣ ತೊಡೋಣ. ಇಲ್ಲಿಗೆ ಎಲ್ಲ ಮುಗಿದಿಲ್ಲ. ಮುಂದಿನ ಪೀಳಿಗೆಗೆ ಕುವೆಂಪು ಅವರು ಕನಸಾದ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಈ ದೇಶವನ್ನು ಮಾಡೋಣ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News