123 ಭ್ರಷ್ಟ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಯುತ್ತಿರುವ ಸಿವಿಸಿ

Update: 2019-06-10 15:02 GMT

ಹೊಸದಿಲ್ಲಿ, ಜೂ.10: ಐಎಎಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೂ ಸೇರಿದಂತೆ 123 ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿವಿಧ ಸಂಸ್ಥೆಗಳ ಅನುಮತಿಗಾಗಿ ಕೇಂದ್ರ ವಿಚಕ್ಷಣ ಆಯೋಗ (ಸಿವಿಸಿ) ಕಳೆದ ನಾಲ್ಕು ತಿಂಗಳಿಂದ ಕಾಯುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಒಟ್ಟು ಆರೋಪಿಗಳಲ್ಲಿ 45 ಮಂದಿ ಸರಕಾರಿ ಸ್ವಾಮ್ಯದ ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳಾಗಿದ್ದಾರೆ. ಕಾನೂನು ಪ್ರಕಾರ, ಈ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಮತಿಯನ್ನು ನಾಲ್ಕು ತಿಂಗಳ ಒಳಗಾಗಿ ನೀಡಬೇಕು. 57 ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ವಿವಿಧ ಸರಕಾರಿ ಸಂಸ್ಥೆಗಳ ಅನುಮತಿಗೆ ಬಾಕಿಯಿದೆ. ಈ ಪೈಕಿ ಎಂಟು ಪ್ರಕರಣಗಳು ಭ್ರಷ್ಟಾಚಾರ ವಿರೋಧಿ ವಿಷಯಗಳ ನೋಡಲ್ ಇಲಾಖೆಯಾಗಿರುವ ಸಿಬ್ಬಂದಿ ಸಚಿವಾಲಯದ ಬಳಿ ಬಾಕಿಯುಳಿದಿದ್ದರೆ ತಲಾ ಐದು ಪ್ರಕರಣಗಳು ರೈಲ್ವೇ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರಕಾರದ ಬಳಿ ಬಾಕಿಯುಳಿದಿದೆ. ಸಿಬಿಐಯ ಪೊಲೀಸ್ ವರಿಷ್ಠಾಧಿಕಾರಿ, ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಮತ್ತು ಆದಾಯ ತೆರಿಗೆ ಅಧಿಕಾರಿ ಭಾಗಿಯಾಗಿರುವ ಪ್ರತ್ಯೇಕ ಪ್ರಕರಣಗಳೂ ಕ್ರಮಕ್ಕೆ ಬಾಕಿಯುಳಿದಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಕೊರ್ಪೊರೇಶನ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಓರಿಯಂಟಲ್ ಬ್ಯಾಂಕ್‌ನ ಒಟ್ಟಾರೆ 45 ಸಿಬ್ಬಂದಿ ಭಾಗಿಯಾಗಿರುವ 15 ಪ್ರಕರಣಗಳು ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News