ಇನ್ನೂ ಬರೆಯಬಲ್ಲೆ ಎಂಬುದೇ ನನ್ನನ್ನು ಬದುಕುವಂತೆ ಮಾಡಿದೆ-ಗಿರೀಶ್ ಕಾರ್ನಾಡ್

Update: 2019-06-10 18:31 GMT

ಹಿರಿಯ ಲೇಖಕ ವಿವೇಕ್ ಶಾನ್‌ಬಾಗ್ 2014ರಲ್ಲಿ ಮಾಡಿದ ಗಿರೀಶ್ ಕಾರ್ನಾಡ್‌ರ ಸಂದರ್ಶನದ ಆಯ್ದ ಭಾಗ

ನಮ್ಮ ಮನಸ್ಸು ಐಡಿಯಾಗಳಿಗೆ ತೆರೆದಿರಬೇಕು. ಎಲ್ಲವೂ ಸ್ಫುಟಗೊಳ್ಳುವುದಿಲ್ಲ. ಕೆಲವೊಮ್ಮೆ ವರ್ಷಗಳೇ ಹಿಡಿಯುತ್ತವೆ. ‘ಅಗ್ನಿ ಮತ್ತು ಮಳೆ’ಗೆ ಸುಮಾರು 30 ವರ್ಷಗಳೇ ಬೇಕಾದವು. ಅದೇ ವೇಳೆ ‘ನಾಗಮಂಡಲ’, ‘ಹಯವದನ’ ಹಠಾತ್ತಾಗಿ ರಚನೆಯಾದವು. ಇನ್ನೂ ಬರೆಯಬಲ್ಲೆ ಎಂಬುದೇ ನನ್ನನ್ನು ಬದುಕುವಂತೆ ಮಾಡಿದೆ. ಇನ್ನು ಸಾಧ್ಯವಿಲ್ಲವೆಂದಾಗ ಬದುಕಿನಲ್ಲಿ ಆಸಕ್ತಿ ಹೊರಟುಹೋಗಲಿದೆ ಅನಿಸುತ್ತದೆ.

♦ವಿ.ಶಾ: ನಿಮ್ಮದೇ ನಾಟಕಗಳನ್ನು ನೋಡಿದಾಗ ನಿಮಗಾದ ಅನುಭವಗಳೇನು?
ಗಿ.ಕಾ:
ಆರಂಭದಲ್ಲಿ ನನ್ನ ನಾಟಕಗಳನ್ನು ನೋಡಿ ತಪ್ಪುಗಳನ್ನು ಪಟ್ಟಿ ಮಾಡುತ್ತಿದ್ದೆ. ಆನಂತರ ನಾಟಕದಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದೆ. ಉದಾಹರಣೆಗೆ ‘ತುಘಲಕ್’ನ ಮೊದಲನೇ ಆವೃತ್ತಿಗಿಂತ ಎರಡನೆಯದು ಭಿನ್ನವಾಗಿದೆ. ಮೂರನೆಯದರಲ್ಲಿ ಇನ್ನಷ್ಟು ಬದಲಾವಣೆಗಳಾಗಿವೆ. ನನ್ನ ಪಠ್ಯ ಅವ್ಯತ್ಯಸನೀಯವಲ್ಲ. ಐಡಿಯಾಗಳು ಬದಲಾಗುತ್ತಲೇ ಇರುತ್ತವೆ. ನನ್ನ ನಾಟಕಗಳನ್ನು ಪರಿಷ್ಕರಿಸುತ್ತಲೇ ಇರುತ್ತೇನೆ. ಅಂತಿಮವಾಗಿ ಅತ್ಯುತ್ತಮವಾದುದನ್ನೇ ನೀಡುವ ಉದ್ದೇಶ ನನ್ನದು.
♦ವಿ.ಶಾ: ಈಗ ಹಿಂದಿರುಗಿ ನೋಡಿದಾಗ ಯಾವ ಸಂತಸದ ದಿನಗಳು ನೆನಪಾಗುತ್ತಿವೆ?
ಗಿ.ಕಾ:
ಟಿವಿ ಬರುವುದಕ್ಕಿಂತಲೂ ಮುಂಚಿನ 60, 70 ಮತ್ತು 80ರ ಈ ಮೂರು ದಶಕಗಳು ಭಾರತೀಯ ನಾಟಕಕ್ಷೇತ್ರದ ಮಟ್ಟಿಗೆ ಅತ್ಯಂತ ಪ್ರಯೋಜನಕಾರಿ. ಆಗ ಒಂದು ಅಖಿಲ ಭಾರತ ಭಾವಸೂಕ್ಷ್ಮತೆ ತಲೆಯೆತ್ತುತ್ತಿತ್ತು. ನಾನು, ಮೋಹನ್ ರಾಕೇಶ್, ತೆಂಡೂಲ್ಕರ್, ಕಾರಂತ್ ಮತ್ತಿತರರೆಲ್ಲ ಒಬ್ಬರಿಗೊಬ್ಬರು ನೆರವಾಗುತ್ತಾ, ನಾಟಕಗಳನ್ನು ಅನುವಾದಿಸುತ್ತಾ ಆ ಒಂದು ಮೂಡ್‌ಅನ್ನು, ಸಂಸ್ಕೃತಿಯನ್ನು ಹರಡಲು ಬಯಸಿದೆವು. ಅವು ನನ್ನ ಪಾಲಿಗೆ ಸಂತಸದ ದಿನಗಳು.
♦ವಿ.ಶಾ: ನಿಮ್ಮ ಸಮಕಾಲೀನ ಬರಹಗಾರರ ಜೊತೆ ಯಾವ ಬಗೆಯ ಭಾವನಾತ್ಮಕ ಸಂಬಂಧ ಇದೆ?
ಗಿ.ಕಾ:
ನನಗೆ 60, 70ರ ದಶಕದ ಲೇಖಕರ ಜೊತೆ ಅತ್ಯಧಿಕ ಭಾವನೆ ಹಾಗೂ ತಾಧ್ಯಾತ್ಮ ಅನುಭವ ಇತ್ತು. ಈಗ ವಯಸ್ಸಾದ ಬಳಿಕ ನನಗೆ ನನ್ನದೇ ಆದ ಆಸಕ್ತಿಗಳಿವೆ.
♦ವಿ.ಶಾ: ನಿಮ್ಮ ಇತ್ತೀಚಿನ ಬರವಣಿಗೆಯು ಅದರ ವಸ್ತು ಹಾಗೂ ಧಾಟಿಯಲ್ಲಿ ಭಿನ್ನವಾಗಿದೆ. ನೀವು ತುಸು ರಿಲ್ಯಾಕ್ಸ್‌ಡ್ ಆಗಿರುವ ಸೂಚನೆಗಳಿವೆ. ನಿಮಗೆ ಹೀಗನ್ನಿಸಿದೆಯೇ?
ಗಿ.ಕಾ:
‘ನನ್ನ ಬೆಂದಕಾಳು ಆನ್ ಟೋಸ್ಟ್’ ಒಂದು ವಾಸ್ತವಿಕ ನಾಟಕ. ನಾನು ಕಂಡಿರುವ ಹಾಗೆ ಭಾರತದ ನಾಟಕರಂಗದಲ್ಲಿ ವಾಸ್ತವಿಕತೆಯನ್ನು ಅದರೆಲ್ಲಾ ಸೂಕ್ಷ್ಮತೆಗಳೊಂದಿಗೆ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ.
ಲಂಡನ್‌ನಿಂದ ಹಿಂದಿರುಗಿ ಬಂದ ನಂತರ ಇಲ್ಲಿ ನಾವು ವಾಸ್ತವಿಕತೆಯನ್ನು ನಿರ್ಲಕ್ಷಿಸುತ್ತಿರುವುದನ್ನು ಗಮನಿಸಿದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಎತ್ತ ನೋಡಿದರೂ ಬಿಂಬಗಳನ್ನು ಕಾಣಬಹುದು. ಆದರೆ ಅದು ಐಟಿ ನಗರ ಎಂಬ ಬಿಂಬ ನಾಟಕಕ್ಷೇತ್ರದಲ್ಲಿ ಪ್ರತಿಫಲಿತವಾಗಿಲ್ಲ. ಅದಕ್ಕೋಸ್ಕರ ‘ಒಡಕಲು ಬಿಂಬ’ ಬರೆದೆ. ನನ್ನ ಕುಟುಂಬದೊಳಗೆ ನಡೆಯುತ್ತಿರುವ ಸಂಗತಿಗಳನ್ನು ನೋಡುತ್ತಾ ‘ವೆಡಿಂಗ್ ಆಲ್ಬಮ್’ ಮತ್ತು ‘ಬೆಂದಕಾಳು ಆನ್ ಟೋಸ್ಟ್’ ಮೂಡಿಬಂದವು.
ಇಪ್ಪತ್ತು ವರ್ಷಗಳ ಹಿಂದೆ ನಾಟಕ ರಚನೆಯ ಬಗ್ಗೆ ಆತ್ಮವಿಶ್ವಾಸ ಇರಲಿಲ್ಲ. ಆದರೆ ಇಂದು ಹಾಗಲ್ಲ. ಬರೆಯಬಲ್ಲೆನೇ, ಜನ ನೋಡುವರೇ ಎಂದು ಯೋಚಿಸದೆ ಬರೆಯಬಲ್ಲೆ. ಸ್ವಲ್ಪನಿರಾತಂಕವಾಗಿ ಯಾವುದನ್ನಾದರೂ ತೆಗೆದುಕೊಂಡು ಪ್ರಯೋಗ ಮಾಡಬಲ್ಲೆ. ನಿಸ್ಸಂದೇಹವಾಗಿಯೂ ಆತ್ಮವಿಶ್ವಾಸ ಇದೆ. ಅದು ಸೃಜನಶೀಲನಾಗಲು ಸ್ವಾತಂತ್ರ್ಯವನ್ನು ನೀಡಿದೆ.
♦ವಿ.ಶಾ: ಯಾವ ಹೊಸ ನಾಟಕದಲ್ಲಿ ನೀವೀಗ ತೊಡಗಿಸಿಕೊಂಡಿದ್ದೀರಿ?
ಗಿ.ಕಾ:
ಸಣ್ಣ ಸ್ವರೂಪದ ನಾಟಕ ರಚನೆಯಲ್ಲಿ ನಾನು ನಿಪುಣನಲ್ಲ. ಏಕಾಂಕ ನಾಟಕ, ಸಣ್ಣ ಕತೆಗಳ ಬರವಣಿಗೆಯಲ್ಲಿ ಗಟ್ಟಿಗನಲ್ಲ. ನನಗೆ ವಿಶಾಲ ಕ್ಯಾನ್ವಾಸ್ ಬೇಕು. ಜನರಿಗೆ ಇವತ್ತು ಎರಡು ಅಥವಾ ಮೂರು ಪಾತ್ರಗಳಿರುವ ನಾಟಕಗಳು ಬೇಕಾಗಿವೆ. ನಾನೀಗ ಬರೆಯುವುದಾದರೆ ಅಂತಹ ನಾಟಕ ಬರೆಯಬೇಕು. ನಾಟಕ ಆಡುವುದು ಪುಸ್ತಕ ಬರೆದಂತಲ್ಲ. ಜನ ಒಟ್ಟಾಗಬೇಕು, ರಿಹರ್ಸಲ್ ಮಾಡಬೇಕು, ಕೊನೆಗೆ ಜನ ಅದನ್ನು ನೋಡಬೇಕು. ಈ ತಾಳಿಕೋಟೆ ಕದನ ಬಹಳ ಕುತೂಹಲಕಾರಿಯಾಗಿದೆ. ಬಿಜಾಪುರದ ಕಲ್ಲುಳಿ ಕುಲಕರ್ಣಿಯವರ ಪ್ರಕಾರ ಅದು ನಡೆದೇ ಇಲ್ಲ. ಒಂದು ವೇಳೆ ನಡೆದಿದ್ದರೂ ಹೇಗೆ ನಡೆದಿರಬಹುದು, ಎಷ್ಟು ಹೊತ್ತು ನಡೆದಿರಬಹುದು. ಇದೆಲ್ಲ ಹೊಸ ಆಯಾಮಗಳು. ಇದನ್ನೆಲ್ಲ ಇಟ್ಟುಕೊಂಡು ನಾಟಕ ಬರೆಯಬೇಕು. ಯಾವಾಗ ಬರೆಯುವೆನೋ ಗೊತ್ತಿಲ್ಲ.


♦ವಿ.ಶಾ: ನೀವು ಬೇರೆ ಬೇರೆ ನಗರಗಳಲ್ಲಿ ವಾಸವಾಗಿದ್ದವರು. ಆದರೆ ಬೆಂಗಳೂರಿನ ಮೇಲೆ ಬರೆಯಲು ನಿರ್ಧರಿಸಿದಿರಿ.
ಗಿ.ಕಾ:
ಬೆಂಗಳೂರು ನಗರದ ಅನುಭವಗಳನ್ನು ಹೇಳುವ ಒಂದೇ ಒಂದು ಪುಸ್ತಕವಾಗಲಿ ನಾಟಕವಾಗಲಿ ಇಲ್ಲ. ಬೆಂದಕಾಳು ಆನ್ ಟೋಸ್ಟ್‌ನಲ್ಲಿ ವಿವಿಧ ಜನವರ್ಗಗಳು, ಅವರ ಪರಸ್ಪರ ಸಂವಹನಗಳು, ಅದರಿಂದಾದ ಗೊಂದಲ ಇತ್ಯಾದಿಗಳನ್ನು ತೋರಿಸಲು ಯತ್ನಿಸಿದೆ. ಬೆಂಗಳೂರು ಇಂದು ಕಾರು, ಡ್ರೈವರ್‌ಗಳಿಗೋಸ್ಕರ ಯೋಜಿಸಿದ ನಗರವಾಗಿದೆ. ಅದೀಗ ಮನೆಗಳು ಮತ್ತು ಅಲ್ಲಿ ಬದುಕುವ ಜನಗಳಿಗೋಸ್ಕರ ಇಲ್ಲ. ಅವರಿಗೆ ಮುಕ್ತ, ಅಗಲ ರಸ್ತೆಗಳಿಗೋಸ್ಕರ ಮನೆಗಳನ್ನು ಕೆಡವಲು ಖುಷಿ.
♦ವಿ.ಶಾ: ನಿಮ್ಮ ಸೃಜನಶೀಲತೆಯ ಪ್ರಕ್ರಿಯೆ ಹೇಗಿರುತ್ತದೆ? ನಾಟಕದ ವಸ್ತು ನಿಮಗೆ ಹೊಳೆಯುತ್ತಿದೆಯೇ? ಅಥವಾ ಸತತ ಯೋಚನೆಯಿಂದ ರೂಪಗೊಳ್ಳುತ್ತದೆಯೇ?
ಗಿ.ಕಾ: ಯಾವುದಾದರೊಂದು ವಿಷಯದ ಕುರಿತು ಯೋಚಿಸದೆ ಇದ್ದರೆ ನಾನು ಖಿನ್ನನಾಗುತ್ತೇನೆ. ಮದ್ರಾಸಿನಲ್ಲಿದ್ದ ವೇಳೆ ಐದಾರು ವರ್ಷ ಬರೆಯದಿದ್ದಾಗ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು. ನನಗೆ ಗರ್ಲ್ ಫ್ರೆಂಡ್‌ಗಳು ಇರಲಿಲ್ಲ. ಹಾಗಾಗಿ ಲೈಂಗಿಕ ಅತೃಪ್ತಿಯೂ ಆಗಿರಬಹುದು. ಆದರೆ ನನಗೆ ಯಾರೂ ಬೇಕಾಗಿರಲಿಲ್ಲ ಎನ್ನುವುದು ಬೇರೆ ವಿಷಯ. ನಮ್ಮ ಮನಸ್ಸು ಐಡಿಯಾಗಳಿಗೆ ತೆರೆದಿರಬೇಕು. ಎಲ್ಲವೂ ಸ್ಫುಟಗೊಳ್ಳುವುದಿಲ್ಲ. ಕೆಲವೊಮ್ಮೆ ವರ್ಷಗಳೇ ಹಿಡಿಯುತ್ತವೆ. ‘ಅಗ್ನಿ ಮತ್ತು ಮಳೆ’ಗೆ ಸುಮಾರು 30 ವರ್ಷಗಳೇ ಬೇಕಾದವು. ಅದೇ ವೇಳೆ ‘ನಾಗಮಂಡಲ’, ‘ಹಯವದನ’ ಹಠಾತ್ತಾಗಿ ರಚನೆಯಾದವು. ಇನ್ನೂ ಬರೆಯಬಲ್ಲೆ ಎಂಬುದೇ ನನ್ನನ್ನು ಬದುಕುವಂತೆ ಮಾಡಿದೆ. ಇನ್ನು ಸಾಧ್ಯವಿಲ್ಲವೆಂದಾಗ ಬದುಕಿನಲ್ಲಿ ಆಸಕ್ತಿ ಹೊರಟುಹೋಗಲಿದೆ ಅನಿಸುತ್ತದೆ.
♦ವಿ.ಶಾ: ನಿಮ್ಮ ಸಿನೆಮಾಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಗಿ.ಕಾ:
ನನ್ನ ಸಿನೆಮಾಗಳ ಕುರಿತು ನನಗೆ ವಿಶೇಷ ಹೆಮ್ಮೆ ಯಿಲ್ಲ. ನಾಟಕಗಳಲ್ಲಿ ಇರುವಷ್ಟು ಹೆಮ್ಮೆಯಾಗಲಿ ಅಥವಾ ಪಾಲ್ಗೊಳ್ಳು ವಿಕೆಯಾಗಲಿ ಸಿನೆಮಾಗಳಲ್ಲಿ ಇಲ್ಲ.
♦ವಿ.ಶಾ: ಸಾಹಿತ್ಯಕ್ಕಿಂತ ಸಿನೆಮಾ ನಮ್ಮಲ್ಲಿ ದೇಶಾದ್ಯಂತ ಬೇಗ ತಲುಪುತ್ತದೆ.?
ಗಿ.ಕಾ:
ಬಹುಭಾಷೆಗಳ ನಾಡಾದ ಭಾರತದಲ್ಲಿ ಸಾಹಿತ್ಯ ಒಂದು ಭಾಷೆಯಿಂದ ಇನ್ನೊಂದಕ್ಕೆ ಹರಿಯುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆ. ನಮಗೆ ಅನುವಾದಕರು ಬೇಕು. ನಮ್ಮಲ್ಲಿ ಅನುವಾದದ ಉದ್ದಿಮೆಯೇ ಇಲ್ಲ.
♦ವಿ.ಶಾ: ‘ಸಂಸ್ಕಾರ’ದಿಂದ ನಿಮ್ಮ ಸಿನೆಮಾದ ನಂಟು ಶುರುವಾಯಿತಲ್ಲವೇ?
ಗಿ.ಕಾ:
‘ಸಂಸ್ಕಾರ’ವನ್ನು ನಾನು ಓದಿದ್ದು 1965ರಲ್ಲಿ ಕಾರವಾರದಲ್ಲಿ. ಓದಿ ಪೂರ್ತಿ ದಿಗ್ಭ್ರಮೆಗೊಳಗಾದೆ. ಅದ್ಭುತ ಪುಸ್ತಕ. ನನಗೆ ಹುಚ್ಚು ಹಿಡಿದಂತಾಯಿತು. ಎರಡು ಬಾರಿ ಓದಿದೆನೊ ಅಥವಾ ಒಂದೇ ರಾತ್ರಿ ಎರಡು ಸಲ ಓದಿದೆನೋ ಗೊತ್ತಿಲ್ಲ. ನಾನು ಇದನ್ನು ಬರೆಯಬೇಕಿತ್ತು ಅನಿಸಿ ಅಸೂಯೆಯಾಯಿತು. ಅನಂತರ ಬೆಂಗಳೂರಿನಲ್ಲಿ ‘ಮದ್ರಾಸ್ ಪ್ಲೇಯರ್ಸ್’ ತಂಡದೊಂದಿಗೆ ಚರ್ಚಿಸಿದೆ. ಆಗ ಅದರ ಸದಸ್ಯರಾಗಿದ್ದ ಪಟ್ಟಾಭಿರಾಮ ರೆಡ್ಡಿಯವರು ಸಿನೆಮಾ ಮಾಡಲೊಪ್ಪಿದರು. ಗೋಪಾಲ ಗೌಡರೂ ಅವರಿಗೆ ಹೇಳಿದರೆನಿಸುತ್ತದೆ. ನಾನು ಸಂಭಾಷಣೆ ಬರೆದೆ. ಹೀಗೆ ‘ಸಂಸ್ಕಾರ’ ಚಲನಚಿತ್ರ ಆಗಿಬಿಟ್ಟಿತು.
ಸಂಸ್ಕಾರ ಚಿತ್ರದ ನಂತರ ‘ವಂಶವೃಕ್ಷ’ ಮಾಡಿದೆವು. ಅಷ್ಟರಲ್ಲಿ ಜಿ.ವಿ. ಅಯ್ಯರ್‌ರಿಗೆ ‘ಕಾಡು’ ಸಿನೆಮಾ ಮಾಡುವ ಬಯಕೆ ಹುಟ್ಟಿತು. ನನಗಂತೂ ಈ ವಾಸ್ತವಿಕ, ನವ-ವಾಸ್ತವಿಕ ಸಿನೆಮಾ ಮಾಡಿ ಸಾಕಾಗಿಹೋಗಿತ್ತು. ನನಗೆ ಸ್ಟಂಟ್ ಸಿನೆಮಾಗಳೆಂದರೆ ಅಚ್ಚುಮೆಚ್ಚು. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ ರಾಜೀನಾಮೆ ಕೊಟ್ಟಾಗ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್‌ನಿಂದ ಆಹ್ವಾನ ಬಂತು. ನ್ಯೂಯಾರ್ಕಿನಲ್ಲಿದ್ದಾಗ ಕುರೊಸಾವನ ಸಿನೆಮಾಗಳನ್ನು ನೋಡಿ ತುಂಬಾ ಖುಷಿಪಟ್ಟೆ. ನಾನೂ ಅಂತಹ ಆ್ಯಕ್ಷನ್ ಸಿನೆಮಾ ಮಾಡಬೇಕೆಂದೆನಿಸಿತು. ಒಂದಾನೊಂದು ಕಾಲದಲ್ಲಿ ಮೂಡಿಬಂದದ್ದು ಹೀಗೆ. ಅದು ಕುರೊಸಾವನಿಗೆ ನನ್ನ ಕಾಣಿಕೆ. ಆದರೆ ಯಥಾರ್ಥಕ್ಕೂ ನಾನೊಬ್ಬ ನಾಟಕಕಾರ, ಸಿನೆಮಾ ತಯಾರಕನಲ್ಲ. ‘ಯಯಾತಿ’ಯನ್ನು ನೋಡುವಾಗ ಕೂಡ ಇದು ನನ್ನದೇ ಕಲ್ಪನೆಯೇ, ನನಗಾಗ ಬರೀ 22, ಓ ಎಷ್ಟೊಂದು ಅದ್ಭುತ ಅನಿಸುತ್ತದೆ. ಅಂತಹ ಥ್ರಿಲ್, ಆ ಪುಳಕ ನನ್ನ ಸಿನೆಮಾಗಳಿಂದ ಸಿಗುವುದಿಲ್ಲ.
♦ವಿ.ಶಾ: ನಾಟಕದಿಂದ ದೊರೆಯುವ ಸೃಜನಾತ್ಮಕ ತೃಪ್ತಿ ಬೇರೆ ಬಗೆಯದು. ಅಲ್ಲವೇ?
ಗಿ.ಕಾ:
ನಾಟಕವಾದರೆ ಮತ್ತೆ ಮತ್ತೆ ಜೀವಂತವಾಗಬಲ್ಲುದು, ಅದನ್ನು ಮತ್ತೆ ಮತ್ತೆ ಆಡಬಹುದು. ಹಾಗಾಗಿಯೆ ಕಿಂಗ್ ಲಿಯರ್ ನಾಟಕವನ್ನು ಚೆನ್ನಾಗಿ ಆಡಿದಾಗ ಈಗಲೂ ಅದೊಂದು ಜೀವಂತ ಅನುಭವ ಕೊಡುತ್ತದೆ. ಆದರೆ ಸಿನೆಮಾ ಸುಮಾರು ಹತ್ತು ವರ್ಷಗಳಾಗುವಷ್ಟರಲ್ಲಿ ಗತಕಾಲದ್ದೆಂದು ಅನಿಸುತ್ತದೆ. 40 ವರ್ಷಗಳ ಬಳಿಕ ಒಂದಾನೊಂದು ಕಾಲದಲ್ಲಿ ನೋಡುವಾಗ ಅಯ್ಯೋ ಎಷ್ಟು ನಿಧಾನ, ಎಷ್ಟೊಂದು ದೀರ್ಘವಾದ ಶಾಟ್‌ಗಳು ಅನಿಸುತ್ತದೆ. ಇದಕ್ಕೆ ಕಾರಣ ಟಿವಿ ಮತ್ತು ವಿಡಿಯೊ. ಕತೆ ಹೇಳುವ ಬಗೆಗಿನ ನಮ್ಮ ಕಲ್ಪನೆಗಳು ಬದಲಾಗಿವೆ. ಈಗ ಕಟ್‌ಗಳು ಹಿಂದಿಗಿಂತ ಹೆಚ್ಚು ವೇಗದಲ್ಲಾಗುತ್ತವೆ.


♦ವಿ.ಶಾ: ಹಿಂದಿಯಲ್ಲಿ ತಯಾರಾದ ಮಂಥನ್ ಚಿತ್ರ ನಿಮಗೆ ಕೊಟ್ಟ ಅಪೂರ್ವ ಅನುಭವದ ಬಗ್ಗೆ ಹಿಂದೊಮ್ಮೆ ಹೇಳಿದ್ದೀರಿ.
ಗಿ.ಕಾ: ಓ! ಮಂಥನ್ ಅಸಾಧಾರಣವಾಗಿತ್ತು. 1975, 76ನೇ ಇಸವಿಯಲ್ಲಿ ಮಾಡಿದ್ದು. ಟಿವಿ ನಮ್ಮ ಪ್ರಧಾನ ಮಾಧ್ಯಮ ಆಗುವುದಕ್ಕಿಂತಲೂ ಹಿಂದಿನ ಕಾಲ ಅದು. ಇವತ್ತಿನ ಹಾಗೆ ನಟ ನಟಿಯರು ಸಿನೆಮಾದಿಂದ ಟಿವಿಗೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ಕಾಲ ಅದಾಗಿರಲಿಲ್ಲ. ನಾನು, ಮೋಹನ್ ಅಗಾಶೆ, ಅನಂತ ನಾಗ್, ನಾಸಿರುದ್ದೀನ್ ಶಾ ಎಲ್ಲರೂ ಎರಡು, ಮೂರು ತಿಂಗಳು ಮಂಥನ್‌ನಲ್ಲೇ ಇದ್ದೆವು. ಮೊದಲು ಸಿದ್ಧವಾದ ಚಿತ್ರಕತೆ ಆಗದೆಂದು ಶ್ಯಾಂ ಹೇಳಿದಾಗ ಹೆಚ್ಚುಕಮ್ಮಿ ಇಡೀ ಸಿನೆಮಾವನ್ನು ಸ್ಥಳದಲ್ಲೇ ಸಾಮೂಹಿಕವಾಗಿ ಚಿತ್ರೀಕರಿಸಿದೆವು. ಕೆಲವೊಂದು ಸೀನ್‌ಗಳನ್ನು ಮಾತ್ರ ತೆಂಡೂಲ್ಕರ್‌ನಿಂದ ಅಥವಾ ಕೈಫಿ ಆಜ್ಮಿಯಿಂದ ಉಪಯೋಗಿಸಿದೆವು. ಡಾ.ಕುರಿಯನ್ ಅವರ ಒಂದು ಅಸಾಧಾರಣ ಪ್ರಯೋಗವಾಗಿದ್ದ ಆ ಸಿನೆಮಾಕ್ಕೆ ಬೇಕಾದ ಹಣವನ್ನು ಕ್ಷೀರ ಸಹಕಾರಿ ಸಂಸ್ಥೆಯ ಸದಸ್ಯರಿಂದಲೆ ಸಂಗ್ರಹಿಸಲಾಗಿತ್ತು. ಸಿನೆಮಾ ಅಪಾರ ಯಶಸ್ಸು ಗಳಿಸಿತು. ಆ ಯಶಸ್ಸಿನ ಹಿಂದೆ ಡಾ.ಕುರಿಯನ್ ಅವರ ಪ್ರಯತ್ನವಿತ್ತು. ಅತ್ಯುತ್ತಮ ಚಿತ್ರಕತೆಯ ಪ್ರಶಸ್ತಿ ತೆಂಡೂಲ್ಕರ್‌ಗೆ ಸಿಕ್ಕಿದರೆ ಕೈಫಿ ಆಜ್ಮಿಗೆ ಅತ್ಯುತ್ತಮ ಸಂಭಾಷಣೆಯ ಪ್ರಶಸ್ತಿ ಬಂತು. ನನಗಾಗಲಿ ಶಮಾ ಝೈದಿಗಾಗಲಿ ಸಿಗಲಿಲ್ಲ. ಆದರೂ ಪರವಾಗಿಲ್ಲ, ಅಂದಿನ ವಾತಾವರಣವೆ ಹಾಗಿತ್ತು. ಅಲ್ಲಿ ಅಕ್ಷರಶಃ ಸಹಕಾರದ ವಾತಾವರಣವಿತ್ತು. ನನಗಂತೂ ಅಪಾರ ತೃಪ್ತಿ ತಂದುಕೊಟ್ಟಿತು. ಸ್ಮಿತಾ, ನಾಸಿರ್ ಮೊದಲಾದವರು ಶ್ಯಾಂ ಕಣ್ಣಿಗೆ ಬಿದ್ದ ಅವಧಿಯದು. ಅದು ತುಂಬಾ ಮೋಜಿನ ಕಾಲವಾಗಿತ್ತು.
♦ವಿ.ಶಾ: ಶಂಕರ್ ನಾಗ್ ನಿಮ್ಮ ‘ಒಂದಾನೊಂದು ಕಾಲದಲ್ಲಿ’ ಪಾತ್ರ ಪಡೆದದ್ದು ಹೇಗೆ?
ಗಿ.ಕಾ:
ನಾನು ಚಿಕ್ಕಂದಿನಿಂದಲೂ ಸ್ಟಂಟ್ ಸಿನೆಮಾಗಳಿಂದ ಆಕರ್ಷಿತನಾಗಿದ್ದೆ. ನ್ಯೂಯಾರ್ಕ್‌ನಲ್ಲಿದ್ದಾಗ ಕುರೊಸಾವ ಸಿನೆಮಾಗಳನ್ನು ನೋಡಿದೆ. ಭಾರತಕ್ಕೆ ಮರಳಿದಾಗ ನಮ್ಮ ಕರ್ನಾಟಕದಲ್ಲಿ ಖಡ್ಗಯುದ್ಧದ ದೊಡ್ಡದೊಂದು ಪರಂಪರೆ ಇರುವುದನ್ನು ಗಮನಿಸಿದೆ. ಕಳರಿಪಯಟ್ಟು ಈಗ ಕೇರಳದಲ್ಲಿದೆಯಾದರೂ ಮೂಲತಃ ಅದು ದಕ್ಷಿಣ ಕನ್ನಡದ, ತುಳುನಾಡಿನ ಕಲೆ. ಡಾ.ಚಿದಾನಂದ ಮೂರ್ತಿ ಮಧ್ಯಯುಗೀನ ಕನ್ನಡ ಶಾಸನಗಳ ಕುರಿತು ಬರೆದ ಗ್ರಂಥವನ್ನು ಆಧರಿಸಿ ಚಿತ್ರಕತೆಯೊಂದನ್ನು ರಚಿಸಿದೆ. ಹೀರೊಗಾಗಿ ಹುಡುಕಾಡಿದೆ. ವಿಷ್ಣುವರ್ಧನ ಅತಿ ಮಿದು ಅನಿಸಿತು, ಅನಂತ ನಾಗ್ ಅತಿ ಚೆಲುವ ಅನಿಸಿತು. ನನಗೆ ಸುಂದರ ನಟ ಬೇಕಿರಲಿಲ್ಲ, ತುಸು ವಕ್ರ ವ್ಯಕ್ತಿ ಬೇಕಿತ್ತು. ಮೊದಲು ನಾಸಿರ್‌ನನ್ನು ಆಯ್ಕೆ ಮಾಡಿದ್ದೆವು. ಆದರೆ ಆತನಿಗೆ ಶ್ಯಾಂ ಬೆನೆಗಲ್ ಸಿನೆಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದುದರಿಂದ ಬೇರೊಬ್ಬ ನಟನನ್ನು ಹುಡುಕಬೇಕಾಯಿತು. ಆಗ ನನ್ನ ಕಲಾ ನಿರ್ದೇಶಕರಾದ ಚೀನು ಮತ್ತು ಜಯು ಪಟವರ್ಧನ್ ಮತ್ತು ಸತ್ಯದೇವ ದುಬೆಯ ಸಲಹೆಯಂತೆ ಮುಂಬೈಗೆ ಹೋಗಿ ಶಂಕರನಾಗ್‌ನನ್ನು ಮಾತನಾಡಿಸಿದೆ. ನಟನೆ ಬೇಡ, ಉಪನಿರ್ದೇಶಕ ಆಗಬೇಕೆಂದ. ನಾನು ಬರಿಗೈಯಲ್ಲಿ ಮರಳಿದೆ. ಅನಂತರ ಅನಂತ್ ಹೋಗಿ ಶಂಕರ್ ಜೊತೆ ಮಾತನಾಡಿ ಆತನ ಮನವೊಲಿಸಿದ. ಶಂಕರ್ ಚೂಟಿಯಾಗಿದ್ದ, ಗಟ್ಟಿಮುಟ್ಟಾಗಿದ್ದ, ತುಂಬಾ ಸಹಕಾರಿಯಾಗಿದ್ದ. ಅವನ ಅಭಿನಯ ಅದ್ಭುತವಾಗಿತ್ತು.
♦ವಿ.ಶಾ: ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿ ನಿಮಗೆ ಸಿನೆಮಾ ರಂಗದ ಪ್ರತಿಭೆಗಳನ್ನು ರೂಪಿಸುವ ಅವಕಾಶ ದೊರಕಿತ್ತು. ಆ ಅನುಭವಗಳು ಹೇಗಿದ್ದವು?
ಗಿ.ಕಾ:
ಸಂಸ್ಕಾರ, ಕಾಡು, ವಂಶವೃಕ್ಷಗಳ ಚಿತ್ರೀಕರಣ ಮುಗಿದಾಗ ಪುಣೆಯ ಫಿಲ್ಮ್ ಮತ್ತು ಟಿವಿ ವಿದ್ಯಾಸಂಸ್ಥೆಯ ನಿರ್ದೇಶಕ ಆಗಲಿಚ್ಛಿಸುವಿರಾ ಎಂದು ಕೇಳಿದರು. ನನಗೆ ಅದರಲ್ಲಿ ವಿಶೇಷ ಆಸಕ್ತಿ ಇರಲಿಲ್ಲವಾದರೂ ಅಮ್ಮನಿಗೋಸ್ಕರ ಆಯಿತೆಂದೆ. ಪುಣೆಯಲ್ಲಿ ಬೆಳೆದ ಅವಳಿಗೆ ಆ ಶಹರದ ಮೇಲೆ ತುಂಬಾ ಪ್ರೀತಿ. ಅಲ್ಲಿ ನಾನು ಎರಡು ವರ್ಷಗಳ ಕಾಲ ಕೆಲಸ ಮಾಡಿದೆ. ಆ ಅವಧಿಯಲ್ಲಿ ಅಲ್ಲಿಂದ ಗಿರೀಶ್ ಕಾಸರವಳ್ಳಿ, ಸಯೀದ್ ಮಿರ್ಝಾ, ಕೇತನ್ ಮೆಹತಾ, ಮಹಾಜನ್‌ರಂಥ ಅನೇಕ ಪ್ರಥಮ ದರ್ಜೆಯ ನಿರ್ದೇಶಕರು ತೇರ್ಗಡೆಯಾದರು. ಅಲ್ಲಿನ ಉತ್ತೇಜನಕಾರಿ ಪರಿಸರದಲ್ಲಿ ನಾನೂ ಸಿನೆಮಾ ಚಿತ್ರೀಕರಣ ಕಲಿತೆ.
 ಸಿನೆಮಾ ಉದ್ಯಮದವರಿಗೆ ಪುಣೆಯ ವಿದ್ಯಾಸಂಸ್ಥೆಯಿಂದ ಹೊರಬರುವ ನಟರಲ್ಲಿ ಆಸಕ್ತಿ ಇರಲಿಲ್ಲ. ಅವರಿಗೆ ಅವರ ಮಕ್ಕಳು, ಸಂಬಂಧಿಗಳು, ಸ್ನೇಹಿತರನ್ನೇ ನಟರನ್ನಾಗಿಸಬೇಕಾಗಿತ್ತು. 70 ಮತ್ತು 80ರ ದಶಕಗಳಲ್ಲಿ ತಾಂತ್ರಿಕತೆಯಲ್ಲಿ ಆದ ಬದಲಾವಣೆಗಳಿಗೆ ತೆರೆದುಕೊಂಡ ಕಾರಣ ಪುಣೆ ಸಂಸ್ಥೆಯಿಂದ ಪಾಸಾದ ತಂತ್ರಜ್ಞರು ಮಹಾಜನ್, ಬೀರ್‌ರಂತಹ ಛಾಯಾಚಿತ್ರಕಾರರು, ಎಡಿಟರ್‌ಗಳು ಇತ್ಯಾದಿ - ನಿಜಕ್ಕೂ ಸಿನೆಮಾರಂಗಕ್ಕೆ ಒಳ್ಳೆಯ ಕೊಡುಗೆ ನೀಡಿದರು. ನೈಜ ಪರಿವರ್ತನೆ ತಂದರು. ನನ್ನ ಎರಡನೇ ವರ್ಷದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಯಿತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಗುಜ್ರಾಲ್ ಜಾಗಕ್ಕೆ ನಾನು ಕಂಡ ಮಹಾ ದುಷ್ಟರಲ್ಲೊಬ್ಬರಾದ ವಿ.ಸಿ. ಶುಕ್ಲಾ ಬಂದರು. ಆಗ ಪುಣೆ ಸಂಸ್ಥೆಯಲ್ಲಿ ನಾನಿನ್ನು ನೌಕರಿ ಮಾಡುವುದಿಲ್ಲವೆಂದು ನಿರ್ಧರಿಸಿ ವರ್ಷಾಂತ್ಯದಲ್ಲಿ ರಾಜೀನಾಮೆ ಕೊಟ್ಟು ಹೊರಬಂದೆ.
♦ವಿ.ಶಾ: ನಿಮ್ಮ ಮುಂದಿನ ಬರವಣಿಗೆಯೇನು?
ಗಿ.ಕಾ:
ಯಥಾರ್ಥಕ್ಕೂ ನನಗೆ ಗೊತ್ತಿಲ್ಲ. ಕೆಲವೊಮ್ಮೆ ಕಾದಂಬರಿ ಬರೆಯೋಣ ಅನಿಸುತ್ತದೆ. ಉತ್ಸವ್ ಸಿನೆಮಾ ಚಿತ್ರೀಕರಣದ ಮೇಲೆ ಬರೆಯಬೇಕು. ಅದು ನನ್ನಿಂದ ಸಾಧ್ಯವಾದರೆ ತಮಾಷೆಯಾಗಿರುತ್ತದೆ ಅನಿಸುತ್ತದೆ.

‘ಸಂಸ್ಕಾರ’ವನ್ನು ನಾನು ಓದಿದ್ದು 1965ರಲ್ಲಿ ಕಾರವಾರದಲ್ಲಿ. ಓದಿ ಪೂರ್ತಿ ದಿಗ್ಭ್ರಮೆಗೊಳಗಾದೆ. ಅದ್ಭುತ ಪುಸ್ತಕ. ನನಗೆ ಹುಚ್ಚು ಹಿಡಿದಂತಾಯಿತು. ಎರಡು ಬಾರಿ ಓದಿದೆನೊ ಅಥವಾ ಒಂದೇ ರಾತ್ರಿ ಎರಡು ಸಲ ಓದಿದೆನೋ ಗೊತ್ತಿಲ್ಲ. ನಾನು ಇದನ್ನು ಬರೆಯಬೇಕಿತ್ತು ಅನಿಸಿ ಅಸೂಯೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ