ರಾಹುಲ್ ಜನಿಸಿದಾಗ ಕೇರಳದ ನರ್ಸ್ ರಾಜಮ್ಮರಿಗೆ ಕೇವಲ 13 ವರ್ಷ ವಯಸ್ಸಾಗಿತ್ತೇ?

Update: 2019-06-11 12:32 GMT

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮನ್ನು ಆರಿಸಿದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ತಾನು  ರಾಜಧಾನಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದಾಗ ಅಲ್ಲಿದ್ದ ಹಾಗೂ ಈಗ ನಿವೃತ್ತರಾಗಿರುವ ನರ್ಸ್  ರಾಜಮ್ಮ  ಎಂಬವರನ್ನು ಜೂನ್ 9ರಂದು ರಾಹುಲ್ ಭೇಟಿಯಾದರು.  

ಆದರೆ ‘@muralikrishnaE1 ಎಂಬ ಟ್ವಿಟರ್ ಖಾತೆಯೊಂದು ಟ್ವೀಟ್ ಮಾಡಿ, “ನರ್ಸ್ ರಾಜಮ್ಮ ಎಂ.ಕೆ. ಅಲಿಯಾಸ್ ರಾಜಮ್ಮ ವವತ್ತಿಲ್ ಅವರ ಈಗಿನ ವಯಸ್ಸು 62  ಹಾಗೂ ರಾಹುಲ್ ಗಾಂಧಿ ಹುಟ್ಟಿದ ಸಮಯ ಅವರಿಗೆ ಕೇವಲ 13 ವರ್ಷ” ಎಂದು ಬರೆದಿದ್ದರಲ್ಲದೆ, ರಾಹುಲ್ ಹಾಗೂ ರಾಜಮ್ಮ ಅವರ ಭೇಟಿ ಒಂದು ‘ನಾಟಕ' ಎಂದೂ ಬಣ್ಣಿಸಿದ್ದರು. ರಾಹುಲ್ ಹುಟ್ಟಿದಾಗ ತಾನಿದ್ದೇನೆಂದು ಈ ನರ್ಸ್ ಹೇಳುತ್ತಿರುವುದು ಸುಳ್ಳು ಹಾಗೂ  ಇದೊಂದು ಪ್ರಚಾರದ ಭಾಗ ಎಂದು ಟ್ವೀಟ್ ನಲ್ಲಿ ಬಿಂಬಿಸಲಾಗಿತ್ತು. ಈ ಟ್ವೀಟ್ ಅನ್ನು 6,500ಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಲಾಗಿದೆಯಲ್ಲದೆ, 12,000ಕ್ಕೂ ಅಧಿಕ ಟ್ವಿಟ್ಟರಿಗರು ಲೈಕ್ ಮಾಡಿದ್ದಾರೆ. ಫೇಸ್ಬುಕ್ ಹಾಗೂ ವಾಟ್ಸ್ಯಾಪ್ ನಲ್ಲೂ ಈ ಟ್ವೀಟ್ ನ ಸ್ಕ್ರೀನ್ ಶಾಟ್ ಶೇರ್ ಆಗುತ್ತಿದೆ.

ವಾಸ್ತವವೇನು?

ಈ ಬಗ್ಗೆ ವಾಸ್ತವಾಂಶ ಪರಿಶೀಲಿಸಿರುವ timesofindia.indiatimes.com ರಾಹುಲ್ ಜನಿಸಿದಾಗ ರಾಜಮ್ಮರ ವಯಸ್ಸು 13 ಎಂಬ ಆರೋಪ ಸುಳ್ಳು ಎಂದು ಸಾಬೀತುಪಡಿಸಿದೆ. ನರ್ಸ್ ರಾಜಮ್ಮಗೆ ಈಗ 72 ವರ್ಷ ವಯಸ್ಸು, 62 ಅಲ್ಲ ಎಂದು ಕಂಡುಕೊಂಡಿದೆ.

ರಾಜಮ್ಮ ಅವರನ್ನೇ ಈ ಬಗ್ಗೆ ಪ್ರಶ್ನಿಸಿದಾಗ ಅವರು ತಮ್ಮ ಜನನ ದಿನಾಂಕ ಜೂನ್ 1, 1947 ಎಂದು ಹೇಳಿದ್ದಾರೆ. “1970ರಲ್ಲಿ  ಹೊಸದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ತರಬೇತಿಯಲ್ಲಿದ್ದ ನರ್ಸ್ ಆಗಿದ್ದೆ, ನನಗಾಗ 23 ವರ್ಷ ವಯಸ್ಸು. ರಾಹುಲ್ ನನ್ನ ಕಣ್ಣೆದುರೇ ಹುಟ್ಟಿದ್ದರು. ಇದನ್ನು ಯಾರಿಗೂ  ಸಾಬೀತುಪಡಿಸುವ ಅಗತ್ಯವಿಲ್ಲ, ನಾನೇನು ಕಾಂಗ್ರೆಸ್ ಬೆಂಬಲಿಗಳಲ್ಲ.  ನನ್ನ ಮುಂದೆ ಹುಟ್ಟಿದ  ಶಿಶುವನ್ನು ನನಗೀಗ ನೋಡಬೇಕಿತ್ತು. ಹಾಗೆಯೇ  ಮಾಡಿದೆ'' ಎಂದು ಅವರು ಹೇಳಿದರು.

ನಂತರ ಸತ್ಯಶೋಧನಾ ತಂಡ ರಾಜಮ್ಮ ಅವರ ಪುತ್ರನ ಜತೆ ಮಾತನಾಡಿದಾಗ ರಾಜಮ್ಮ ರಾಜಧಾನಿಯ ಆಸ್ಪತ್ರೆಯಲ್ಲಿ ಆ ಸಮಯ ನರ್ಸ್ ಆಗಿದ್ದರೆಂಬುದಕ್ಕೆ ದಾಖಲೆಗಳನ್ನು ಹಾಜರುಪಡಿಸಿದರು. ಪಂಜಾಬ್ ನರ್ಸಸ್ ರಿಜಿಸ್ಟ್ರೇಶನ್ ಕೌನ್ಸಿಲ್ ಹಾಗೂ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಪ್ರಮಾಣಪತ್ರ ಹಾಗೂ ರಾಜಮ್ಮ ಅವರು ದೆಹಲಿಯ ಅಸ್ಪತ್ರೆಯಲ್ಲಿದ್ದಾಗ 1970ರಲ್ಲಿ ತೆಗೆಯಲಾದ ಗ್ರೂಪ್ ಫೋಟೋ ಕೂಡ ಮುಂದಿಟ್ಟರು.

ರಾಜಮ್ಮ ಅವರ ಡ್ರೈವಿಂಗ್ ಲೈಸನ್ಸ್ ನಲ್ಲಿ ಅವರ ಜನನ ದಿನಾಂಕ 01-06-1947 ಎಂದು ನಮೂದಿತವಾಗಿದ್ದು, ಅದರಂತೆ ಅವರಿಗೀಗ  72 ವರ್ಷ ವಯಸ್ಸು.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News