ಹಣ ವರ್ಗಾವಣೆ, ಹಣ ಪಾವತಿಗಾಗಿ ಇಂಟರ್ನೆಟ್ ಇಲ್ಲದೆ ಭೀಮ್ ಆ್ಯಪ್ ಬಳಸುವುದು ಹೇಗೆ?

Update: 2019-06-11 13:18 GMT

ನೋಟು ನಿಷೇಧದ ಬಳಿಕ ಮೊಬೈಲ್ ಫೋನ್‌ಗಳ ಮೂಲಕ ತ್ವರಿತ ಮತ್ತು ಸುರಕ್ಷಿತ ಹಣಪಾವತಿಗಾಗಿ ಸರಕಾರವು ಚಾಲ್ತಿಗೆ ತಂದಿದ್ದ ಭೀಮ್ ಆ್ಯಪ್ ಸಾಕಷ್ಟು ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣ ವರ್ಗಾವಣೆ,ಬಿಲ್ ಪಾವತಿ,ಆನ್‌ಲೈನ್ ಶಾಪಿಂಗ್ ವಹಿವಾಟುಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದೆ. ದಿನದ 24 ಗಂಟೆಯೂ ಲಭ್ಯವಿರುವ ಭೀಮ್ ಯುಪಿಐ ಸೇವೆಯನ್ನು ಜಿಎಸ್‌ಎಂ ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು. ಇದಕ್ಕಾಗಿ ಬಳಕೆದಾರನಿಗೆ ಅಗತ್ಯವಿರುವುದು ಬ್ಯಾಂಕ್‌ಖಾತೆ,ನೋಂದಾಯಿತ ಮೊಬೈಲ್ ಸಂಖ್ಯೆಮತ್ತು ಡೆಬಿಟ್ ಕಾರ್ಡ್ ಮಾತ್ರ.

ಬಳಕೆದಾರರು ಭೀಮ್ ಆ್ಯಪ್‌ನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಹಣ ವರ್ಗಾವಣೆ ಅಥವಾ ವಾಣಿಜ್ಯಿಕ ಪಾವತಿಗಳನ್ನು ಮಾಡಲು ಸ್ವೀಕೃತಿದಾರರು ಯುಪಿಐ ವೇದಿಕೆಯಲ್ಲಿರುವುದು ಅಗತ್ಯವಾಗಿದೆ. ಫಲಾನುಭವಿಯ ವಿಪಿಎ ಅಥವಾ ವರ್ಚುವಲ್ ಪೇಮೆಂಟ್ ಅಡ್ರೆಸ್‌ನ್ನು ಬಳಸಿ ಹಣ ಪಾವತಿ ಮಾಡಬಹುದಾಗಿದೆ ಅಥವಾ ಯುಪಿಐ ಕ್ಯೂಆರ್ ಕೋಡ್‌ನ್ನು ಸಹ ಬಳಸಬಹುದಾಗಿದೆ.

ನೀವು ಇಂಟರ್ನೆಟ್ ಸೌಲಭ್ಯವಿಲ್ಲದ ಬೇಸಿಕ್ ಪೋನ್ ಹೊಂದಿದ್ದರೆ ಅಥವಾ ನಿಮ್ಮ ಇಂಟರ್ನೆಟ್ ಕೆಲಕಾಲ ಸ್ಥಗಿತಗೊಂಡಿದ್ದರೆ ಸಹ ನೀವು ಭೀಮ್ ಸೇವೆಯನ್ನು ಪಡೆದುಕೊಳ್ಳಬಹುದು.

ಇದಕ್ಕಾಗಿ ನೀವು *99# ಗೆ ಡಯಲ್ ಮಾಡಬೇಕಾಗುತ್ತದೆ. ಹಾಲಿ ಈ ಸೌಲಭ್ಯವು ಎಲ್ಲ ಜಿಎಸ್‌ಎಂ ಸರ್ವಿಸ್ ಪ್ರೊವೈಡರ್‌ಗಳಿಗೆ ಮತ್ತು ಹ್ಯಾಂಡ್‌ಸೆಟ್‌ಗಳಿಗೆ ಲಭ್ಯವಿದ್ದು,ಸಿಡಿಎಂಎ ಫೋನ್‌ಗಳಿಗೆ ಲಭ್ಯವಿಲ್ಲ. ಈ ಸೇವೆಯು ವಿಪಿಎ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಸ್‌ಎಫ್‌ಸಿ ಕೋಡ್‌ನ ಸಂಯೋಜನೆಯ ಮೂಲಕ ಹಣ ಪಾವತಿ ಅಥವಾ ಹಣ ವರ್ಗಾವಣೆಯನ್ನು ಸಾಧ್ಯವಾಗಿಸುತ್ತದೆ.

ಇದಕ್ಕೆ ಅನುಸರಿಸಬೇಕಾದ ಕ್ರಮಗಳು ಹೀಗಿವೆ.

 ಮೊದಲು ನಿಮ್ಮ ಫೋನ್‌ನಿಂದ *99#ಗೆ ಡಯಲ್ ಮಾಡಿ. ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಸೆಂಡ್ ಮಾಡಿ. ಈಗ ‘ಭೀಮ್ *99#ಗೆ ಸ್ವಾಗತ’ ಎಂಬ ಸಂದೇಶವು ನಿಮ್ಮ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ನೀವು ನಿಮ್ಮ ಬ್ಯಾಂಕಿನ ಹೆಸರು ಅಥವಾ ನಿಮ್ಮ ಬ್ಯಾಂಕ್ ಐಎಫ್‌ಎಸ್‌ಸಿ ಕೋಡ್‌ನ ಮೊದಲ ನಾಲ್ಕು ಅಕ್ಷರಗಳನ್ನು ಒದಗಿಸಬೇಕಾಗುತ್ತದೆ. ಇಷ್ಟಾದ ಬಳಿಕ ತೋರಿಸಲಾಗಿರುವ ಆಯ್ಕೆಗಳ ಪೈಕಿ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ದುಕೊಳ್ಳಿ. ನಂತರ ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕಿಗಳು ಹಾಗೂ ತಿಂಗಳು ಮತ್ತು ಎಕ್ಸ್‌ಪೈರಿ ವರ್ಷವನ್ನು ಒಂದು ಸ್ಪೇಸ್ ಬಿಟ್ಟು ಟೈಪ್ ಮಾಡಿ. ಈಗ ನಿಮ್ಮ ನೂತನ ಆರು ಅಂಕಿಗಳ ಯುಪಿಐ ಪಿನ್ ಅನ್ನು ದಾಖಲಿಸಿ,ನಂತರ ಅದನ್ನು ಮರುದಾಖಲಿಸಿ.

 ಈಗ ನಿಮ್ಮ ಯುಪಿಐ ಸಜ್ಜಾಗಿರುತ್ತದೆ ಮತ್ತು ಇನ್ನೊಮ್ಮೆ ಯುಪಿಐ ಪಿನ್ ಅನ್ನು ದಾಖಲಿಸುವ ಮೂಲಕ ನಿಮ್ಮ ಖಾತೆಯಲ್ಲಿನ ಬ್ಯಾಲನ್ಸ್‌ನ್ನು ನೋಡಬಹುದು. ಇಷ್ಟಾದ ಬಳಿಕ ನಿರ್ದಿಷ್ಟ ಸೂಚನೆಗಳನ್ನು ಅನುಸರಿಸಿ ಹಣ ವರ್ಗಾವಣೆ ಅಥವಾ ಹಣ ಪಾವತಿಯನ್ನು ಮಾಡಬಹುದು.

*99#ಗೆ ಶುಲ್ಕ ವಿಧಿಸಲಾಗುತ್ತದೆ ಎನ್ನುವುದು ಗಮನದಲ್ಲಿರಲಿ. ಇದಕ್ಕಾಗಿ ಟ್ರಾಯ್ ಪ್ರತಿ ವಹಿವಾಟಿಗೆ 50 ಪೈಸೆ ಶುಲ್ಕವನ್ನು ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News