ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಆರೋಪಿಗಳಿಗೆ ಮರಣದಂಡನೆ ವಿಧಿಸಲು ಎನ್‌ಸಿಡಬ್ಲ್ಯು ಆಗ್ರಹ

Update: 2019-06-11 15:35 GMT

ಹೊಸದಿಲ್ಲಿ, ಜೂ. 11: ಕಥುವಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರು ಮಂದಿ ದೋಷಿಗಳಿಗೆ ಮರಣ ದಂಡನೆ ವಿಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸೋಮವಾರ ಆಗ್ರಹಿಸಿದ್ದಾರೆ.

ಈ ಕುರಿತಂತೆ ಜಮ್ಮು ಹಾಗೂ ಕಾಶ್ಮೀರ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ಕಥುವಾದಲ್ಲಿ ಅಲೆಮಾರಿ ಕುಟುಂಬದ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ ಮೂವರು ಆರೋಪಿಗಳಿಗೆ ಪಠಾಣ್‌ಕೋಟ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾಕ್ಷ್ಯ ನಾಶಪಡಿಸಿದ ಇತರ ಮೂವರಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ತೀರ್ಪನ್ನು ಸ್ವಾಗತಿಸಿರುವ ಶರ್ಮಾ, “ದೋಷಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ನಾನು ಬಯಸುತ್ತೇನೆ. ಜಮ್ಮು ಹಾಗೂ ಕಾಶ್ಮೀರ ಸರಕಾರ ಮೇಲ್ಮನವಿ ಸಲ್ಲಿಸಬೇಕು” ಎಂದಿದ್ದಾರೆ. ಕಳೆದ ವರ್ಷ ಜನವರಿ 10ರಂದು ಬಾಲಕಿಯನ್ನು ಅಪಹರಿಸಲಾಗಿತ್ತು. ಅನಂತರ ಬಾಲಕಿಯನ್ನು ಕಥುವಾದ ದೇವಾಲಯವೊಂದರಲ್ಲಿ ಒತ್ತೆಸೆರೆ ಇರಿಸಲಾಗಿತ್ತು. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿತ್ತು. ಈ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ವಿಚಾರಣೆ ಪಠಾಣ್‌ಕೋಟ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ದಿನನಿತ್ಯ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News