ಈ ಫುಟ್ಬಾಲ್ ತಾರೆ ಅತಿಹೆಚ್ಚು ಗಳಿಕೆಯ ಅಥ್ಲೀಟ್!

Update: 2019-06-12 06:33 GMT

ನ್ಯೂಯಾರ್ಕ್, ಜೂ.12: ಫೋರ್ಬ್ಸ್ ನಿಯತ ಕಾಲಿಕ ವಾರ್ಷಿಕ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಖ್ಯಾತ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಅತ್ಯಧಿಕ ವೇತನ ಪಡೆಯುವ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ.

ಬಾರ್ಸಿಲೋನಾ ಮತ್ತು ಅರ್ಜೆಂಟೀನಾದ ಈ ತಾರೆ ಬಾಕ್ಸರ್ ಫ್ಲೋಯ್ಡ ಮೆವೆದರ್ ಅವರನ್ನು ಹಿಂದಿಕ್ಕಿ ಅತಿಹೆಚ್ಚು ಗಳಿಕೆಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ವೇತನ ಹಾಗೂ ಇತರ ಒಪ್ಪಂದಗಳಿಂದ ಬಂದ ಗಳಿಕೆ ಸೇರಿ ಇವರ ಆದಾಯ 127 ದಶಲಕ್ಷ ಡಾಲರ್!

ಈ ಮೂಲಕ ಮೆಸ್ಸಿ ತಮ್ಮ ದೀರ್ಘಾವಧಿ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗಿಂತ ಮುನ್ನಡೆ ಸಾಧಿಸಿದಂತಾಗಿದೆ. ಪೋರ್ಚ್‌ಗಲ್ ಆಟಗಾರ ರೊನಾಲ್ಡೊ 109 ದಶಲಕ್ಷ ಡಾಲರ್‌ನೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಝಿಲ್ ಆಟಗಾರ ನೇಮರ್ 105 ದಶಲಕ್ಷ ಡಾಲರ್ ಆದಾಯ ಹೊಂದಿದ್ದಾರೆ.

94 ದಶಲಕ್ಷ ಡಾಲರ್ ಆದಾಯ ಹೊಂದಿರುವ ಮೆಕ್ಸಿಕೋದ ಮಿಡ್ಲ್‌ವೈಟ್ ಬಾಕ್ಸಿಂಗ್ ಸ್ಟಾರ್ ಸಾಲ್ ಕೆನೆಲೊ ಅಲ್ವರೆರ್ ನಾಲ್ಕನೇ ಸ್ಥಾನಲ್ಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಗೋಲೊಕಿನ್ ಅವರನ್ನು ಸೋಲಿಸಿದ ಅಲ್ವರೆರ್ ಏಕೀಕೃತ ಮಿಡ್ಲ್‌ವೈಟ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ಬಳಿಕ ಬಾಕ್ಸಿಂಗ್ ಇತಿಹಾಸದಲ್ಲೇ ಗರಿಷ್ಠ ಮೊತ್ತದ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದರು. ಡಿಎಝೆಡ್‌ಎನ್ ನೆಟ್‌ವರ್ಕ್ ಜತೆಗೆ ಐದು ವರ್ಷಕ್ಕೆ 365 ದಶಲಕ್ಷ ಡಾಲರ್ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದರು.

ಟೆನಿಸ್ ತಾರೆ ರೋಜರ್ ಫೆಡರರ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಅವರ ಗಳಿಕೆ 93.4 ದಶಲಕ್ಷ ಡಾಲರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News