ಜಾತಿ ಭೇದ-ಭಾವ ಅಳಿಸಿ ಪರಸ್ಪರ ಸಹೋದರತೆಯಿಂದ ಇರಬೇಕು: ಹಫ್ಸಾ ಬಾನು

Update: 2019-06-12 12:23 GMT

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ 'ಇತರ ಧರ್ಮೀಯರ ಹಬ್ಬಗಳಿಗೆ ಮುಸ್ಲಿಮರು ಶುಭ ಹಾರೈಸಬಾರದು' ಎಂದು ವ್ಯಕ್ತಿಯೊಬ್ಬರು ಹೇಳುವ ವೀಡಿಯೊ ತುಣುಕೊಂದು ಎಲ್ಲೆಡೆ ವೈರಲ್ ಆಗಿದ್ದು, ಇದು ಜನರಲ್ಲಿ ಸೌಹಾರ್ದತೆ ಬೆಳೆಸುವ ಬದಲು ಶಾಂತಿ ಕದಡುವಂತದ್ದಾಗಿದೆ. ಈ ವಿಷಯವನ್ನು ಗಮನಿಸಿದ 'ವಾರ್ತಾಭಾರತಿ' ಪ್ರಧಾನ ಸಂಪಾದಕರಾದ ಎ.ಎಸ್. ಪುತ್ತಿಗೆ ಅವರು ಬರೆದ 'ಧರ್ಮದ ಜನಧ್ವೇಷಿ ದುರ್ವ್ಯಾಖ್ಯಾನ ತಡೆಯೋಣ' ಎನ್ನುವ ಲೇಖನ ಇಸ್ಲಾಮಿನಲ್ಲಿರುವ ಸೌಹಾರ್ದತೆಯ ಬಗೆಗಿನ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಅರ್ಥ ಮಾಡಿಸುವಂತಹ ಉತ್ತಮ ಪ್ರಯತ್ನವಾಗಿದೆ.

ಇದು ನಿಜಕ್ಕೂ ಬಹಳವೇ ಶ್ಲಾಘನೀಯ ಕಾರ್ಯವಾಗಿದೆ. ತಮಗೆ ತುಂಬಾ ಧನ್ಯವಾದಗಳು ಸರ್.

ನನಗೆ ತಿಳಿದಿರುವ ಮಟ್ಟಿಗೆ ಯಾವುದೇ ಮುಸಲ್ಮಾನ ಧರ್ಮಗುರು ಇಂತಹ ಹೇಳಿಕೆಗಳನ್ನು ಎಂದೂ ತಮ್ಮ ಸಮುದಾಯಕ್ಕೆ ಹೇಳಿಲ್ಲ. ಅಂತೆಯೇ ಹೇಳುವುದೂ ಇಲ್ಲ ಎಂಬ ದೃಢ ನಂಬಿಕೆಯೂ ನನಗಿದೆ. ಜಾತಿ ಭೇದ-ಭಾವಗಳನ್ನು ಅಳಿಸಿ ಪರಸ್ಪರ ಎಲ್ಲಾರೂ ಸಹೋದರತೆಯಲ್ಲಿ ಇರಬೇಕು. ನಾಡಿನ ಎಲ್ಲಾ ಹಬ್ಬಗಳನ್ನೂ ಗೌರವಿಸಬೇಕು.

ಸೃಷ್ಟಿಕರ್ತನ ಮೊದಲ ಮಾನವ ಸೃಷ್ಠಿಯಾದ ಆದಂ- ಹವ್ವಾ (ಅ) ಅವರನ್ನು ತಂದೆ ತಾಯಿ ಎಂದು ಕರೆಯುವ ಮುಸಲ್ಮಾನರು ತದನಂತರದ ಸೃಷ್ಠಿಗಳನ್ನು ಸಹೋದರ ಸಹೋದರಿಯರೆಂದು ಒಪ್ಪದಿರಲು ಹೇಗೆ ಸಾಧ್ಯ ? ಸಕಲ ಮಾನವರು ಪರಸ್ಪರ ಸಹೋದರ ಸಹೋದರಿಯರು. ಆದರೆ ವಿಧ್ಯೆ, ಜ್ಞಾನ, ತಿಳುವಳಿಕೆಯ ಕೊರತೆಯ, ಅನಾಗರಿಕತೆಯೋ ಪೈಶಾಚಿಕತೆಯೋ ತಾಂಡವಾಡುವಲ್ಲಿ ಮಾತ್ರ ಒಡಹುಟ್ಟಿದವರೊಡನೆಯೂ ಪ್ರೀತಿ, ಕರುಣೆಯಿಲ್ಲದೇ ಶತ್ರುಗಳಂತೆ ಕಾಣಲಾಗುತ್ತದೆ. ಇದಕ್ಕೆ ಯಾವುದೇ ಜಾತಿ ಪಂಗಡವೆಂಬುವುದಿಲ್ಲ.

ಇನ್ನು ಯಾವುದೋ ಒಬ್ಬ ವ್ಯಕ್ತಿಯ ಅನಾಗರಿಕತೆಯ ನಡೆನುಡಿಯಿಂದ ಇಡೀ ಇಸ್ಲಾಂ ಧರ್ಮವನ್ನೆ ತಪ್ಪುಕೋನಮಾಪಕದಿಂದ ಅಳೆಯುವುದು ಬಹಳ ದೊಡ್ಡ ತಪ್ಪು. 'ಹಿರಿಯರನ್ನು ಗೌರವಿಸಿ ಕಿರಿಯರನ್ನು ಪ್ರೀತಿಸಿ, ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲಾ' ಇವು ಇಸ್ಲಾಂ ಕಲಿಸುವ ನುಡಿಮುತ್ತುಗಳಾಗಿವೆ.

ಇದರಲ್ಲಿ ಎಲ್ಲೂ ಯಾವುದೇ ಧರ್ಮದ ಹೆಸರನ್ನು ನಮೂದಿಸಿ ಹೇಳಿಲ್ಲ . ಯಾವ ಧರ್ಮದ ವ್ಯಕ್ತಿಯೇ ಇರಲಿ ನೀವು ಅವರನ್ನು ಗೌರವಿಸಬೇಕೆಂದೂ ನೆರೆಯವರು ಯಾವ ಧರ್ಮದವರೇ ಇರಲಿ ಹಸಿದಿದ್ದರೆ ನೀವು ತಿನ್ನುವ ಆಹಾರವನ್ನು ಹಂಚಿ ತಿನ್ನಬೇಕೆಂದೂ ತಿಳಿಸಿಕೊಟ್ಟಿದೆ.

ಓರ್ವ ದಾಡಿ ಬಿಟ್ಟು ಟೋಪಿ ಧರಿಸಿ ಏನೋ ಹೇಳಿದನೆಂದರೆ ಅದು ಇಸ್ಲಾಂ ಧರ್ಮದ ಸಾರವೇ ಆಗಬೇಕೆಂದಿಲ್ಲ. ಅವರ ಅರೆತಿಳುವಳಿಕೆಯ ಸ್ವಂತ ಅಭಿಪ್ರಾಯವೂ ಆಗಿರಬಹುದು. ಅಂತವರ ಹೇಳಿಕೆಯಿಂದ ಇಸ್ಲಾಮನ್ನಾಗಲೀ, ಇಸ್ಲಾಮಿನ ಯಾವುದೇ ಧರ್ಮಗುರುಗಳನ್ನಾಗಲಿ ಯಾರೂ ತಪ್ಪು ತಿಳಿಯಬಾರದೆಂದೂ ನಾನೂ ಈ ಲೇಖನದ ಮೂಲಕ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

- ಹಫ್ಸಾ ಬಾನು, ಬೆಂಗಳೂರು

Writer - ಹಫ್ಸಾ ಬಾನು, ಬೆಂಗಳೂರು

contributor

Editor - ಹಫ್ಸಾ ಬಾನು, ಬೆಂಗಳೂರು

contributor

Similar News