ಐಸಿಸ್ ನಂಟು ಹೊಂದಿದವರೆಂದು ಬಂಧನ: 4 ವರ್ಷ ಜೈಲು ಶಿಕ್ಷೆ ಬಳಿಕ ಯುವಕರ ದೋಷಮುಕ್ತಿ

Update: 2019-06-12 15:15 GMT

► ಜೈಲಿನಲ್ಲಿ ನಿರಂತರ ಚಿತ್ರಹಿಂಸೆ: ಆರೋಪ

ಮುಂಬೈ, ಜೂ.12: “ಪೂರ್ವ ಮಹಾರಾಷ್ಟ್ರದ ಪುಸದ್ ನಗರದ ನಿವಾಸಿ ಅಬ್ದುಲ್ ಮಲಿಕ್ ಎಂಬಾತ ಗೋಮಾಂಸ ನಿಷೇಧದಿಂದ ಕ್ರೋಧಿತನಾಗಿ ಮೂವರು ಪೊಲೀಸರಿಗೆ ಚೂರಿಯಿಂದ ಇರಿದಿದ್ದಾನೆ” ಎಂಬ ಸುದ್ದಿ 2015ರಲ್ಲಿ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿತ್ತು. ಈ ಆರೋಪದಲ್ಲಿ 23 ವರ್ಷದ ಮಲಿಕ್ ಹಾಗೂ ಇದೇ ಪ್ರದೇಶದ ಇತರ ಇಬ್ಬರು ವ್ಯಕ್ತಿಗಳು 28 ವರ್ಷದ ಶೋಯಬ್ ಖಾನ್ ಹಾಗೂ ಯಾವತ್ಮಲ್‌ನ 30 ವರ್ಷದ ಮೌಲಾನಾ ಮುಜೀಬುರ್ರಹ್ಮಾನ್ ರನ್ನು ಬಂಧಿಸಲಾಗಿತ್ತು.

ಈ ಪ್ರಕರಣವನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿತ್ತು. ಈ ಮೂವರು ಯುವಕರು ಐಸಿಸ್‌ನ ಪ್ರೇರಣೆಗೆ ಒಳಗಾದವರು ಎಂದು ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು. ನಗರದಲ್ಲಿ ಬೇರು ಗಟ್ಟಿಗೊಳಿಸಲು ಯತ್ನಿಸಿದ ಉಗ್ರರ ಜಾಲವನ್ನು ಮೂಲದಲ್ಲೇ ಚಿವುಟಿ ಹಾಕಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

 ಸುಮಾರು ನಾಲ್ಕು ವರ್ಷಗಳ ಬಳಿಕ, ಮೂರೂ ಯುವಕರನ್ನು ದೋಷಮುಕ್ತಗೊಳಿಸಲಾಗಿದೆ. ಖಾನ್ ಮತ್ತು ಮುಜೀಬುರ್ರಹ್ಮಾನ್ ಭಾರತದಲ್ಲಿ ನಿಷೇಧಿತ ಸಿಮ್(ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್)ನೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ಮತ್ತು ಜಿಹಾದ್ ಕೃತ್ಯಕ್ಕೆ ಯೋಜನೆ ರೂಪಿಸಿದ ಆರೋಪದಲ್ಲಿ ಅವರ ವಿರುದ್ಧ ವಿವಾದಾತ್ಮಕ ‘ಅಕ್ರಮ ಚಟುವಟಿಕೆ ತಡೆ ಕಾಯ್ದೆ’ಯನ್ವಯ ಪ್ರಕರಣ ದಾಖಲಾಗಿತ್ತು. ಆದರೆ ಇವರು ಭಯೋತ್ಪಾದಕ ಸಂಚು ನಡೆಸಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ ಅಕೋಲದ ವಿಶೇಷ ನ್ಯಾಯಾಲಯ ಮೇ 21ರಂದು ಇಬ್ಬರನ್ನೂ ಖುಲಾಸೆಗೊಳಿಸಿದೆ.

 ಮಲಿಕ್‌ರನ್ನೂ ‘ಅಕ್ರಮ ಚಟುವಟಿಕೆ ತಡೆ ಕಾಯ್ದೆ’ ಪ್ರಕರಣದಿಂದ ದೋಷಮುಕ್ತಗೊಳಿಸಲಾಗಿದ್ದರೂ, ಪೊಲೀಸರನ್ನು ಚೂರಿಯಿಂದ ಇರಿದು ಗಾಯಗೊಳಿಸಿದ ಅಪರಾಧಕ್ಕೆ 3 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದರೆ ವಿಚಾರಣೆಯ ಸಂದರ್ಭ ಮಲಿಕ್ 3 ವರ್ಷ 8 ತಿಂಗಳು ಜೈಲಿನಲ್ಲಿದ್ದ ಕಾರಣ ಈ ಅವಧಿಯನ್ನು ಶಿಕ್ಷೆಯ ಅವಧಿ ಎಂದು ಪರಿಗಣಿಸಿ ಅವರನ್ನೂ ಬಿಡುಗಡೆಗೊಳಿಸಲಾಗಿದೆ.

 2015ರಲ್ಲಿ ಬಂಧಿತ ಮೂವರು ಯುವಕರ ಬಗ್ಗೆ ವರದಿ ಮಾಡಿದ್ದ ಅದೇ ಸುದ್ದಿ ಪತ್ರಿಕೆಗಳಲ್ಲಿ ಈಗ ವಿಭಿನ್ನ ವರದಿ ಪ್ರಕಟವಾಗಿದೆ. ಮರಾಠಿ ಪತ್ರಿಕೆಯೊಂದು- ಎಟಿಎಸ್(ಭಯೋತ್ಪಾದನೆ ನಿಗ್ರಹ ದಳ)ನ ತಪ್ಪು ತಿಳುವಳಿಕೆ ಯುವಕರ ಅಮೂಲ್ಯ ಮೂರೂವರೆ ವರ್ಷಗಳ ಹಾಳುಗೆಡವಿತು. ಅಮಾಯಕ ಶೋಯಬ್‌ಗೆ ಮಹಾರಾಷ್ಟ್ರ ಸರಕಾರ ಪರಿಹಾರ ಒದಗಿಸುವುದೇ ಎಂಬ ವರದಿ ಪ್ರಕಟಿಸಿತು. 2015ರಲ್ಲಿ ಆರೋಪಿ ಯುವಕರ ಕುಟುಂಬದ ಬಗ್ಗೆ ವರದಿ ಮಾಡಿದ್ದ scroll.in, ಯುವಕರ ಕುಟುಂಬ ಒಬ್ಬಂಟಿಯಾಗಿದೆ ಎಂದು ತಿಳಿಸಿತ್ತು.

ತನ್ನ ಮಗನಿಗೆ ಮಾಂಸ ಕೂಡಾ ಇಷ್ಟವಿಲ್ಲ. ಹಾಗಿರುವಾಗ ಗೋಮಾಂಸ ಆತನಿಗೆ ಹೇಗೆ ಅಚ್ಚುಮೆಚ್ಚಾಗುತ್ತದೆ ಎಂದು ಮಲಿಕ್ ತಾಯಿ ಪ್ರಶ್ನಿಸಿದ್ದರು. ಮುಸ್ಲಿಮ್ ಎಂಬ ಏಕೈಕ ಕಾರಣಕ್ಕೆ ತನ್ನ ಮಗನನ್ನು ಗುರಿಯಾಗಿಸಲಾಗಿದೆ ಎಂದು ಶೋಯಬ್‌ನ ತಂದೆ ರಹ್ಮಾನ್ ಖಾನ್ ವರದಿಗಾರರಿಗೆ ಪ್ರತಿಕ್ರಿಯಿಸಿದ್ದರು.

ತಾವು ದೋಷಮುಕ್ತಗೊಂಡಿದ್ದರೂ ಜನರು ಇಂದಿಗೂ ತಮ್ಮನ್ನು ಕ್ರಿಮಿನಲ್‌ಗಳಂತೆ ನೋಡುತ್ತಿದ್ದಾರೆ ಎಂದು ಮೂವರು ಯುವಕರೂ ಅಳಲು ತೋಡಿಕೊಂಡಿದ್ದಾರೆ. ತನ್ನ ಸಹೋದರ ಮೃತಪಟ್ಟಾಗ ಆತನ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ ಎಂದು ಖಾನ್ ಹೇಳಿದ್ದಾರೆ. ತಾನು ‘ಭಯೋತ್ಪಾದಕನ ತಂದೆ’ ಎಂಬ ಕಾರಣದಿಂದ ತನ್ನನ್ನು ದೂರ ಇರಿಸಲಾಗಿದ್ದು ಈಗ ತನ್ನ ನಿರ್ಮಾಣ ವ್ಯವಹಾರ ಮುಚ್ಚಿದ್ದೇನೆ ಎಂದು ಮುಜೀಬುರ್ರಹ್ಮಾನ್ ರ ತಂದೆ ಶೇಖ್ ಮೆಹಬೂಬ್ ಹೇಳಿದ್ದಾರೆ.

ತನಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಅವರು ಹೇಳಿದಂತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರೆ ಸಾಕಷ್ಟು ಹಣ ನೀಡಿ ಬಂಧಮುಕ್ತಗೊಳಿಸುವುದಾಗಿ ಆಮಿಷ ಒಡ್ಡಲಾಗಿದೆ ಎಂದು ಮಲಿಕ್ ಹೇಳಿದ್ದಾರೆ. ತನಗೆ ನಿರಂತರವಾಗಿ ಬೆಲ್ಟ್‌ನಿಂದ ಹೊಡೆಯುತ್ತಿದ್ದರು. ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದಾಗ ಅಲ್ಲಿನ ಜನಸಂಖ್ಯೆಯಲ್ಲಿ ಸುಮಾರು 5% ಹಿಂದುಗಳಿದ್ದರು. ಈಗ ಈ ಪ್ರಮಾಣ 1%ಕ್ಕೆ ಕುಸಿದಿದೆ. ಹೀಗಾಗಲೂ ಕಾರಣವೇನು. ಹಿಂದುಗಳು ಎಲ್ಲಿ ಹೋದರು ಎಂದು ಪ್ರಶ್ನಿಸಿ ನನ್ನನ್ನು ಥಳಿಸುತ್ತಿದ್ದರು. ಬಾಂಗ್ಲಾದೇಶದಲ್ಲಿ ಹಿಂದುಗಳ ಪ್ರಮಾಣ ಕಡಿಮೆಯಾಗಲು ಏನು ಕಾರಣ ಎಂದು ನನಗೆ ಹೇಗೆ ಗೊತ್ತು ಎಂದು ಮಲಿಕ್ ಪ್ರಶ್ನಿಸುತ್ತಾರೆ. ತನ್ನ ಮಗನನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿ ಸುಮಾರು ನಾಲ್ಕು ವರ್ಷ ಜೈಲಿನಲ್ಲಿ ಬಂಧಿಯಾಗಿರಿಸಿದ್ದಕ್ಕೆ ಪರಿಹಾರ ಕೋರಿ ಮಹಾರಾಷ್ಟ್ರ ಸರಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಶೇಖ್ ಮೆಹಬೂಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News