ಕಿಮ್‌ರಿಂದ ‘ಆತ್ಮೀಯ ಮತ್ತು ಸುಂದರ’ ಪತ್ರ ಬಂದಿದೆ: ಟ್ರಂಪ್

Update: 2019-06-12 17:33 GMT

ವಾಶಿಂಗ್ಟನ್, ಜೂ. 12: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ರಿಂದ ನನಗೆ ‘ಅತ್ಯಂತ ಆತ್ಮೀಯ ಮತ್ತು ಸುಂದರ’ ಪತ್ರವೊಂದು ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

‘‘ಅತ್ಯಂತ ಧನಾತ್ಮಕ ಸಂಗತಿಯೊಂದು ನಡೆಯಲಿದೆ ಎಂದು ನನಗನಿಸುತ್ತದೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದರು. ಆದರೆ, ವಿವರಗಳನ್ನು ನೀಡಲು ನಿರಾಕರಿಸಿದರು.

ಕಿಮ್ ಜಾಂಗ್ ಉನ್ ಮತ್ತು ಟ್ರಂಪ್ ನಡುವೆ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಫೆಬ್ರವರಿಯಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ಯಾವುದೇ ಒಪ್ಪಂದ ಅಥವಾ ಘೋಷಣೆಯಿಲ್ಲದೆ ಅರ್ಧದಲ್ಲೇ ಸ್ಥಗಿತಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸುವಂತೆ ಮಾಡುವ ಉದ್ದೇಶದೊಂದಿಗೆ, ಅದರೊಂದಿಗಿನ ಸ್ಥಗಿತಗೊಂಡಿರುವ ಮಾತುಕತೆಯನ್ನು ಪುನರಾರಂಭಿಸಲು ವಾಶಿಂಗ್ಟನ್ ಪ್ರಯತ್ನಿಸುತ್ತಿದೆ.

ಕಿಮ್ ಜಾಂಗ್ ಉನ್‌ರ ಮಲಸಹೋದರ ಕಿಮ್ ಜಾಂಗ್ ನಾಮ್ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮಾಹಿತಿದಾರನಾಗಿದ್ದರು ಎಂಬುದಾಗಿ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದ ಒಂದು ದಿನದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

 ‘‘ಕಿಮ್ ಜಾಂಗ್ ಉನ್‌ರಿಂದ ನನಗೊಂದು ಸುಂದರ ಪತ್ರ ಬಂದಿದೆ. ಪತ್ರವನ್ನು ನಾನು ಮೆಚ್ಚಿದ್ದೇನೆ. ಅವರ ಮಲಸಹೋದರ ಮತ್ತು ಸಿಐಎಗೆ ಸಂಬಂಧಿಸಿದ ವರದಿಯೊಂದನ್ನು ನೋಡಿದ್ದೇನೆ. ನನ್ನ ಆಡಳಿತದಲ್ಲಿ ಹಾಗೆ ಆಗುವುದಿಲ್ಲ ಎಂದು ನಾನು ಕಿಮ್ ಜಾಂಗ್ ಉನ್‌ಗೆ ಹೇಳಬಯಸುತ್ತೇನೆ... ಅತ್ಯಂತ ಆತ್ಮೀಯ ಹಾಗೂ ಸುಂದರ ಪತ್ರ’’ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News