ಅಸಾಂಜ್ ಗಡಿಪಾರು ಕೋರಿ ಬ್ರಿಟನ್‌ಗೆ ಅಮೆರಿಕದ ಅಧಿಕೃತ ಮನವಿ

Update: 2019-06-12 17:37 GMT

ವಾಶಿಂಗ್ಟನ್, ಜೂ. 12: ಅಮೆರಿಕ ಸರಕಾರದ ಕಂಪ್ಯೂಟರ್‌ಗಳಿಗೆ ಕನ್ನ ಹಾಕಲು ಪಿತೂರಿ ರೂಪಿಸಿದ ಹಾಗೂ ಬೇಹುಗಾರಿಕೆ ಕಾನೂನನ್ನು ಉಲ್ಲಂಘಿಸಿದ ಆರೋಪಗಳನ್ನು ಎದುರಿಸಲು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತೆ ಅಮೆರಿಕದ ಕಾನೂನು ಇಲಾಖೆಯು ಬ್ರಿಟನ್‌ಗೆ ಔಪಚಾರಿಕ ಮನವಿ ಸಲ್ಲಿಸಿದೆ.

‘‘ಅಮೆರಿಕದ ಹಂಗಾಮಿ ಗಡಿಪಾರು ಮನವಿಯನ್ನು ಆಧರಿಸಿ ಅಸಾಂಜ್‌ರನ್ನು ಬಂಧಿಸಲಾಗಿದೆ. ಕಂಪ್ಯೂಟರ್ ದುರ್ಬಳಕೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯ ಅನಧಿಕೃತ ಬಹಿರಂಗ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ’’ ಎಂದು ಬ್ರಿಟನ್ ಗೃಹ ಕಚೇರಿ ವಕ್ತಾರರೊಬ್ಬರು ಹೇಳಿದರು.

‘‘ಈಗ ನಾವು ಪೂರ್ಣ ಗಡಿಪಾರು ಮನವಿಯನ್ನು ಸ್ವೀಕರಿಸಿದ್ದೇವೆ’’ ಎಂದು ಅವರು ‘ರಾಯ್ಟರ್ಸ್’ಗೆ ತಿಳಿಸಿದರು.

 ಅಮೆರಿಕದ ಪ್ರಾಸಿಕ್ಯೂಟರ್‌ಗಳು ಔಪಚಾರಿಕ ಗಡಿಪಾರು ಮನವಿಯನ್ನು ಬ್ರಿಟನ್‌ಗೆ ಕಳೆದ ವಾರ, ಕಾನೂನು ಗಡುವು ಮುಗಿಯುವ ಸ್ವಲ್ಪವೇ ಮುನ್ನ ಸಲ್ಲಿಸಿದ್ದಾರೆ ಎಂಬುದಾಗಿ ಅಮೆರಿಕ ಮತ್ತು ಬ್ರಿಟಿಶ್ ಭದ್ರತಾ ಮೂಲಗಳು ತಿಳಿಸಿವೆ.

2012ರಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಅಸಾಂಜ್‌ರನ್ನು ಲಂಡನ್ ಪೊಲೀಸರು ಎಪ್ರಿಲ್ 11ರಂದು ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವೊಂದು ಅವರಿಗೆ 50 ವಾರಗಳ ಜೈಲುವಾಸದ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News