ಹಾಂಕಾಂಗ್: ಗಡಿಪಾರು ಮಸೂದೆ ವಿರೋಧಿಸಿ ಸಂಸತ್ ಎದುರು ಬೃಹತ್ ಧರಣಿ

Update: 2019-06-12 17:43 GMT

ಹಾಂಕಾಂಗ್, ಜೂ. 12: ವಿಚಾರಣೆಗಾಗಿ ಜನರನ್ನು ಹಾಂಕಾಂಗ್‌ನಿಂದ ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ಪ್ರತಿಭಟಿಸಿ ಬುಧವಾರ ಹಾಂಕಾಂಗ್ ಸಂಸತ್ತಿನ ಎದುರು ಧರಣಿ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದರು.

ಶಾಂತಿಯುತವಾಗಿ ಆರಂಭಗೊಂಡ ಧರಣಿಯು ಬಳಿಕ ಹಿಂಸೆಗೆ ತಿರುಗಿತು.

ಬುಧವಾರ ಸಂಸತ್ತಿನಲ್ಲಿ ಈ ವಿವಾದಾಸ್ಪದ ಮಸೂದೆಯ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಮಸೂದೆಯನ್ನು ವಿರೋಧಿಸುವುದಕ್ಕಾಗಿ ಸಾವಿರಾರು ಮಂದಿ ಸಂಸತ್ತಿನ ಹೊರಗಡೆ ಸೇರಿದರು. ಬಳಿಕ ಉದ್ವಿಗ್ನತೆ ಕಾಣಿಸಿಕೊಂಡು ಕೆಲವು ಧರಣಿನಿರತರು ಪೊಲೀಸರನ್ನು ಛತ್ರಿಯಿಂದ ಅಟ್ಟಿಸಿಕೊಂಡು ಹೋದರು.

‘‘ನಾವು ಬಲ ಪ್ರಯೋಗಿಸಬೇಕಾಗುತ್ತದೆ’’ ಎಂಬುದಾಗಿ ಪೊಲೀಸರು ಎಚ್ಚರಿಕೆ ನೀಡಿದರು.

 ಧರಣಿ ನಿರತರು ಹಿಂಸೆಯನ್ನು ನಿಲ್ಲಿಸಬೇಕು ಎಂಬುದಾಗಿ ಪೊಲೀಸ್ ಮುಖ್ಯಸ್ಥ ಸ್ಟೀಫನ್ ಲೊ ಎಚ್ಚರಿಸಿದರು ಹಾಗೂ ‘ಗಲಭೆ ಪರಿಸ್ಥಿತಿ’ಯಿಂದ ದೂರವಿರಿ ಎಂಬುದಾಗಿ ಅವರು ನಿವಾಸಿಗಳಿಗೆ ಸೂಚಿಸಿದರು.

ಪೊಲೀಸರು ರಬ್ಬರ್ ಗುಂಡುಗಳನ್ನು ಹಾರಿಸಿರುವುದನ್ನು ಅವರು ಖಚಿತಪಡಿಸಿದರು.

ಹೆಚ್ಚಿನ ಧರಣಿನಿರತರು ಕಪ್ಪು ಬಟ್ಟೆಗಳನ್ನು ಧರಿಸಿದ ಯುವಜನರಾಗಿದ್ದರು. ಸುದೀರ್ಘ ಕಾಲದವರೆಗೆ ಅಲ್ಲಿ ನೆಲೆಸಲು ಸಿದ್ಧರಾಗಿ ಬಂದಿದ್ದ ಅವರು ತಮ್ಮ ಸುತ್ತ ತಡೆಬೇಲಿಗಳನ್ನು ನಿರ್ಮಿಸಿದರು.

 ಹಾಂಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್‌ರ ಕಚೇರಿಗಳಿರುವ ಲುಂಗ್ ವೊ ರಸ್ತೆ ಮತ್ತು ಸುತ್ತಮುತ್ತಲೂ ಧರಣಿನಿರತರು ಜಮಾಯಿಸಿದರು.

2014ರಲ್ಲಿ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಹಲವು ದಿನಗಳ ಕಾಲ ‘ಛತ್ರಿ ಚಳವಳಿ’ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News