ಮದ್ಯದ ದೊರೆ ಪೋಂಟಿ ಛಡ್ಡಾ ಪುತ್ರ ಬಂಧನ
Update: 2019-06-13 20:17 IST
ಹೊಸದಿಲ್ಲಿ, ಜೂ. 13: ಆರು ವರ್ಷಗಳ ಹಿಂದೆ ಹತ್ಯೆಯಾಗಿರುವ ಮದ್ಯ ದೊರೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಪೋಂಟಿ ಛಡ್ಡಾ ಅವರ ಪುತ್ರನನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.
ಕಡಿಮೆ ಬೆಲೆಯಲ್ಲಿ ಫ್ಲಾಟ್ ನೀಡುವುದಾಗಿ ಹುಸಿ ಭರವಸೆ ನೀಡಿ ಜನರಿಗೆ ವಂಚಿಸಿದ ಆರೋಪದಲ್ಲಿ ಮನ್‌ಪ್ರೀತ್ ಸಿಂಗ್ ಛಡ್ಡಾ ಆಲಿಯಾಸ್ ಮೋಂತಿ ಛಡ್ಡಾ ಅವರನ್ನು ಬಂಧಿಸಲಾಗಿದೆ. ಥಾಲ್ಯಾಂಡ್‌ಗೆ ಪರಾರಿಯಾಗಲು ಯತ್ನಿಸಿದ ಮೋಂತಿ ಛಡ್ಡಾನನ್ನು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ದಳ (ಇಒಡಬ್ಲು) ವಿಮಾನ ನಿಲ್ದಾಣದಲ್ಲಿ ಬಂಧಿಸಿತು ಎಂದು ಇಒಡಬ್ಲುನ ಹೆಚ್ಚುವರಿ ಆಯುಕ್ತ ಸುವಶಿಶ್ ಚೌಧರಿ ಹೇಳಿದ್ದಾರೆ.
ಛಡ್ಡಾನನ್ನು ಬಂಧಿಸುವ ಮೊದಲು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು ಹಾಗೂ ಛಡ್ಡಾ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸಿದ್ದರು.