ಮುಸ್ಲಿಂ ಯುವತಿಯರಿಗೆ ಉಚಿತ ಯುಪಿಎಸ್ಸಿ ತರಬೇತಿ : ನಖ್ವಿ

Update: 2019-06-13 15:40 GMT

ಹೊಸದಿಲ್ಲಿ, ಜೂ.13: ಮುಸ್ಲಿಂ ಯುವತಿಯರಿಗೆ ಯುಪಿಎಸ್‌ಸಿ, ಬ್ಯಾಂಕಿಂಗ್ ಸೇವೆ ಹಾಗೂ ರಾಜ್ಯ ಸೇವಾ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಸೆಂಟ್ರಲ್ ವಕ್ಫ್ ಸಮಿತಿಯ 80ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕುರಿತು ಕೆಲವು ತರಬೇತಿ ಸಂಸ್ಥೆಗಳೊಂದಿಗೆ ಚರ್ಚಿಸಿದ್ದು ತರಬೇತಿ ಪ್ರಕ್ರಿಯೆಗೆ ಈ ವರ್ಷವೇ ಚಾಲನೆ ದೊರಕಲಿದೆ ಎಂದರು.

   ಅಲ್ಲದೆ ಅರ್ಧದಲ್ಲೇ ಶಾಲೆ ಬಿಟ್ಟ ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರಿಗೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಸಂಪರ್ಕ ಸೇತು(ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮದ ಮೂಲಕ ಅವರನ್ನು ಶಿಕ್ಷಣ ಮತ್ತು ಉದ್ಯೋಗಾವಕಾಶದೊಂದಿಗೆ ಸಂಪರ್ಕಿಸಲಾಗುವುದು ಎಂದರು. ದೇಶದಾದ್ಯಂತದ ಮದ್ರಸಾ ಶಿಕ್ಷಕರಿಗೆ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್‌ನಲ್ಲಿ ತರಬೇತಿ ನೀಡಿ ಮದ್ರಸದ ವಿದ್ಯಾರ್ಥಿಗಳಿಗೆ ಈ ವಿಷಯಗಳನ್ನು ಕಲಿಸಲು ಯೋಜನೆ ರೂಪಿಸಲಾಗಿದೆ. ದೇಶದಾದ್ಯಂತದ ವಕ್ಫ್ ಆಸ್ತಿಗಳನ್ನು ಜಿಯೊಟ್ಯಾಗ್ ಮಾಡಿ ಡಿಜಿಟಲೀಕರಣಗೊಳಿಸಲಾಗುವುದು. ಇಲ್ಲಿ ಶಿಕ್ಷಣ ಸಂಸ್ಥೆ , ಸಮುದಾಯ ಕೇಂದ್ರ, ಹಾಸ್ಟೆಲ್ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಸರಕಾರ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ಶೇ.100ರಷ್ಟು ಆರ್ಥಿಕ ನೆರವು ಒದಗಿಸಲಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News