‘ಮೋದಿ ಹೇ ತೊ ಮುಮ್‌ಕೀನ್ ಹೇ’: ಮೋದಿಯ ಚುನಾವಣಾ ಘೋಷಣೆಯನ್ನು ಉದ್ಧರಿಸಿದ ಪಾಂಪಿಯೊ

Update: 2019-06-13 16:04 GMT

ವಾಶಿಂಗ್ಟನ್, ಜೂ. 13: ‘ಮೋದಿ ಹೇ ತೊ ಮುಮ್‌ಕೀನ್ ಹೇ’ (ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ) ಎಂಬ ಪ್ರಧಾನಿ ನರೇಂದ್ರ ಮೋದಿಯ ಚುನಾವಣಾ ಘೋಷಣೆಯನ್ನು ಉಲ್ಲೇಖಿಸಿರುವ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ, ಭಾರತ-ಅಮೆರಿಕ ಸೇನಾ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಒಯ್ಯುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಮುಕ್ತ ಭಾರತ-ಪೆಸಿಫಿಕ್ ವಲಯ ಸೇರಿದಂತೆ ಹಲವು ವಿಷಯಗಳಲ್ಲಿ ಮುನ್ನಡೆಯಲು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಗಳಿಗೆ ವಿಪುಲ ಅವಕಾಶಗಳಿವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ವಿದೇಶ ಸಚಿವ ಎಸ್. ಜೈಶಂಕರ್‌ರನ್ನು ಭೇಟಿಯಾಗಲು ಈ ತಿಂಗಳ ಕೊನೆಯಲ್ಲಿ ಭಾರತ ಪ್ರವಾಸ ಕೈಗೊಳ್ಳುವುದಕ್ಕೆ ಪೂರ್ವಭಾವಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ಅಮೆರಿಕವು ಭಾರತದೊಂದಿಗೆ ಪ್ರಬಲ ಬಂಧವನ್ನು ಹೊಂದಿದೆ ಎಂದು ಹೇಳಿದ ಪಾಂಪಿಯೊ, ಇನ್ನೂ ಹೆಚ್ಚಿನ ಬಂಧವನ್ನು ಬೆಸೆಯುವ ಸಮಯ ಬಂದಿದೆ ಎಂದರು.

‘‘ ‘ಮೋದಿ ಹೇ ತೊ ಮುಮ್‌ಕೀನ್ ಹೇ’ ಎಂಬ ಅವರ ಇತ್ತೀಚಿನ ಚುನಾವಣಾ ಘೋಷಣೆಯನ್ನು ಕೇಳಿದ್ದೇನೆ. ನಮ್ಮ ಜನರ ನಡುವೆ ಏನು ಸಾಧ್ಯವಿದೆ ಎನ್ನುವುದನ್ನು ಅನ್ವೇಷಿಸಲು ನಾನು ಉತ್ಸುಕನಾಗಿದ್ದೇನೆ’’ ಎಂದು ಬುಧವಾರ ಇಲ್ಲಿ ನಡೆದ ಅಮೆರಿಕ-ಭಾರತ ಬಿಝ್ನೆಸ್ ಕೌನ್ಸಿಲ್‌ನ ‘ಇಂಡಿಯ ಐಡಿಯಾಸ್ ಸಮ್ಮೇಳನ’ದಲ್ಲಿ ಮಾತನಾಡುತ್ತಾ ಹೇಳಿದರು.

ಪಾಂಪಿಯೊ ಜೂನ್ 24ರಿಂದ 30ರವರೆಗೆ ಭಾರತ, ಶ್ರೀಲಂಕಾ, ಜಪಾನ್ ಮತ್ತು ದಕ್ಷಿಣ ಕೊರಿಯಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News