ಕೊಲ್ಲಿ ಸಮುದ್ರದಲ್ಲಿ ಮತ್ತೆ 2 ತೈಲ ಟ್ಯಾಂಕರ್‌ಗಳ ಮೇಲೆ ‘ದಾಳಿ’: ಇರಾನ್ ನೌಕಾಪಡೆಯಿಂದ 44 ಸಿಬ್ಬಂದಿ ರಕ್ಷಣೆ

Update: 2019-06-13 16:11 GMT

ದುಬೈ (ಯುಎಇ), ಜೂ. 13: ಒಮಾನ್ ಕೊಲ್ಲಿಯಲ್ಲಿ ಗುರುವಾರ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆಯಿತೆನ್ನಲಾದ ದಾಳಿಯ ಬಳಿಕ ಅವುಗಳಲ್ಲಿ ಬೆಂಕಿ ಹತ್ತಿಕೊಂಡಿದ್ದು, ಇರಾನ್ ಕರಾವಳಿಯಲ್ಲಿ ಅವುಗಳ ಸಿಬ್ಬಂದಿಯನ್ನು ತೆರವುಗೊಳಿಸಲಾಯಿತು.

ಈ ಘಟನೆಯ ಬೆನ್ನಿಗೇ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

ಆಯಕಟ್ಟಿನ ಈ ಸಮುದ್ರ ಮಾರ್ಗದಲ್ಲಿ ಈ ಮಾದರಿಯ ಘಟನೆ ನಡೆಯುತ್ತಿರುವುದು ವಾರಗಳ ಅವಧಿಯಲ್ಲಿ ಇದು ಎರಡನೇ ಬಾರಿಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಈ ಘಟನೆ ನಡೆದಿದೆ. ಮೇ ತಿಂಗಳಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದಿರುವ ದಾಳಿಗೆ ಇರಾನ್ ಜವಾಬ್ದಾರಿ ಎಂಬುದಾಗಿ ಅಮೆರಿಕ ಈಗಾಗಲೇ ಬೆಟ್ಟು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ತನ್ನ ಕರಾವಳಿಯಲ್ಲಿ ‘ಅಪಘಾತ’ಗಳು ನಡೆದ ಬಳಿಕ ಎರಡು ಹಡಗುಗಳಿಂದ 44 ಸಿಬ್ಬಂದಿಯನ್ನು ತನ್ನ ನೌಕಾಪಡೆ ರಕ್ಷಿಸಿದೆ ಎಂದು ಇರಾನ್ ಹೇಳಿದೆ.

ಅದೇ ವೇಳೆ, ಎರಡೂ ಹಡಗುಗಳಿಂದ ‘ದಾಳಿ’ಯ ಬಗ್ಗೆ ತನ್ನ ಯುದ್ಧ ನೌಕೆಗಳಿಗೆ ತುರ್ತು ಕರೆಗಳು ಬಂದಿವೆ ಎಂಬುದಾಗಿ ಅಮೆರಿಕದ ಐದನೇ ಫ್ಲೀಟ್ ಹೇಳಿದೆ.

ನಾರ್ವೆ ಒಡೆತನದ ಟ್ಯಾಂಕರ್ ಹಡಗು ಮತ್ತು ಸಿಂಗಾಪುರ ಒಡೆತನದ ಸರಕು ಹಡಗುಗಳ ಮೇಲೆ ‘ದಾಳಿ’ ನಡೆದ ಬಳಿಕ, ನಾರ್ವೆಯ ಹಡಗಿನಲ್ಲಿ ಮೂರು ಸ್ಫೋಟಗಳು ಸಂಭವಿಸಿದವು ಎಂದು ನಾರ್ವೆಯ ಸಾಗರ ಪ್ರಾಧಿಕಾರ ತಿಳಿಸಿದೆ.

‘‘ನಾರ್ವೆ ಹಡಗಿಗೆ ಬೆಂಕಿ ಹತ್ತಿದಾಗ, 23 ಸಿಬ್ಬಂದಿ ಸಮುದ್ರಕ್ಕೆ ಹಾರಿದರು. ಅವರನ್ನು ಅಲ್ಲಿಂದ ಹಾದು ಹೋಗುತ್ತಿದ್ದ ಹಡಗೊಂದು ರಕ್ಷಿಸಿ ಇರಾನ್ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿತು’’ ಎಂದು ಇರಾನ್‌ನ ಸುದ್ದಿ ಸಂಸ್ಥೆ ಇರ್ನ ವರದಿ ಮಾಡಿದೆ.

ಮೊದಲ ಘಟನೆ ನಡೆದು ಒಂದು ಗಂಟೆ ಬಳಿಕ, ಎರಡನೇ ಹಡಗಿನಲ್ಲೂ ಬೆಂಕಿ ಕಾಣಿಸಿಕೊಂಡಿತು. ಅದರ 21 ಮಂದಿ ಸಿಬ್ಬಂದಿ ಸಮುದ್ರಕ್ಕೆ ಹಾರಿದರು ಹಾಗೂ ಅವರನ್ನೂ ರಕ್ಷಿಸಲಾಯಿತು ಎಂದು ಅದು ತಿಳಿಸಿದೆ.

ಸಂಶಯಾಸ್ಪದ: ಇರಾನ್

ಒಮಾನ್ ಕೊಲ್ಲಿಯಲ್ಲಿ ಗುರುವಾರ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆಯಿತೆನ್ನಲಾದ ದಾಳಿ ‘ಸಂಶಯಾಸ್ಪದ’ ಎಂಬುದಾಗಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದ್ದಾರೆ ಹಾಗೂ ಉದ್ವಿಗ್ನತೆ ನಿವಾರಿಸಲು ಪ್ರಾದೇಶಿಕ ಮಾತುಕತೆಗಳು ನಡೆಯಬೇಕೆಂದು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News