ಭಾರತದ ಪ್ರತಿ ಹಳ್ಳಿಯಲ್ಲಿಯೂ ದಕ್ಷಿಣ ಆಫ್ರಿಕಾ ಇದೆ

Update: 2019-06-14 08:55 GMT

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತದ ಪ್ರವಾಸದಲ್ಲಿ ಇದ್ದಾಗ ದಿನಾಂಕ 25ನೆಯ ಡಿಸೆಂಬರ್ 1952ರಂದು ನಿಪ್ಪಾಣಿ (ಜಿಲ್ಲೆ-ಬೆಳಗಾವಿ)ಗೆ ದಕ್ಷಿಣ ಭೇಟಿ ನೀಡಿದ್ದರು.
ಅಲ್ಲಿನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೀಗೆ ಹೇಳಿದರು.
ಭಗಿನಿಯರೆ ಮತ್ತು ಬಂಧುಗಳೇ,

ದಕ್ಷಿಣ ಮಹಾರಾಷ್ಟ್ರದ ಪ್ರವಾಸಕ್ಕೆ ಬರಬೇಕೆಂದು ಬಹಳಷ್ಟು ದಿನಗಳಿಂದಲೂ ಅನ್ನಿಸುತ್ತಿತ್ತು. ಆದರೆ ಅದು ಕಾರಣಾಂತರಗಳಿಂದ ಮತ್ತೆ ಮತ್ತೆ ಮುಂದೆ ಹೋಗುತ್ತಾ ಇಂದು ಅದಕ್ಕೆ ಯೋಗವು ಕೂಡಿ ಬಂದಿದೆ. ನಾನು ನಿಮ್ಮ ಭಾಗದಲ್ಲಿ ಬರಲಿ ಅಥವಾ ಬರದೆ ಇರಲಿ ಅದರ ಬಗೆಗೆ ನೀವು ಖೇದವನ್ನಾಗಲಿ ಅಥವಾ ತಪ್ಪು ತಿಳಿದುಕೊಳ್ಳುವುದಾಗಲಿ ಮಾಡಬಾರದು. ನಾನು ಎಲ್ಲಿಯೇ ಇದ್ದರೂ ನೀವು ನಿಮ್ಮ ಸುತ್ತಮುತ್ತಲಲ್ಲೇ ನಿಮ್ಮ ಪ್ರಶ್ನೆಗಳನ್ನು ನಿಮ್ಮ ಕಳಕಳಿಯಿಂದ ವಿಚಾರ ಮಾಡಬೇಕಾಗುತ್ತದೆ. ಕಾರಣ ನಿಮ್ಮ ಪ್ರಶ್ನೆಗಳನ್ನು ಸ್ವತಃ ನೀವೇ ಎಚ್ಚರಿಕೆಯಿಂದ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
1885ರಲ್ಲಿ ಕಾಂಗ್ರೆಸ್‌ನ ಸ್ಥಾಪನೆಯಾಯಿತು. ಆದರೆ ನಾವು ಕಾಂಗ್ರೆಸಿನ ಚಳವಳಿಯಿಂದ ನಾಲ್ಕು ಹೆಜ್ಜೆ ದೂರದಲ್ಲಿಯೇ ಇದ್ದೆವು. ಕಾರಣ ಈ ಚಳವಳಿಯು ನಮ್ಮ ಮೇಲೆ ಸಾಮಾಜಿಕ ಗುಲಾಮಗಿರಿಯನ್ನು ಹೇರಿದ್ದಂತಹ ಬ್ರಾಹ್ಮಣ ವರ್ಗದವರದಾಗಿತ್ತು. ಕಾಂಗ್ರೆಸಿನ ಈ ಸಂಘಟನೆಯು ಬ್ರಾಹ್ಮಣರ ಸಂಘಟನೆಯೇ ಆಗಿತ್ತು ಎಂಬುದು ನಮಗೆ ಆಗಲೇ ತಿಳಿದು ಹೋಗಿತ್ತು. ಅಲ್ಲದೆ ಪೇಶ್ವಾಯಿಯಲ್ಲಿನ ಬ್ರಾಹ್ಮಣರ ನೀತಿಯು ಹೇಗಿತ್ತು ಎಂಬುದು ನಮಗೆ ಜ್ಞಾತವಾಗಿದೆ. ಪಗಡಿಗಳನ್ನು ನೋಡಿ ಆಯ್ಕೆ ಮಾಡುವ ಈ ಸಮಾಜ ಸುಧಾರಕರಲ್ಲಿ ನಾವು ಹೊಕ್ಕರೆ ನಮಗೆ ಅವರು ಹೊರಗಡೆಯಲ್ಲೇ ಇರಿಸಿಬಿಡುತ್ತಿದ್ದರು. ದಿವಾನಖಾನೆಯ ಒಳಗೆ ಹೋಗಲು ಅವಕಾಶವೇ ಇರುತ್ತಿರಲಿಲ್ಲ. ಕಾಂಗ್ರೆಸಿಗೆ ಸ್ವರಾಜ್ಯ ಬೇಕಾಗಿತ್ತು ಅದು ಬ್ರಿಟಿಷ್ ಆಡಳಿತದಲ್ಲಿ ಕಳೆದುಕೊಂಡಿದ್ದಂತಹ ತಮ್ಮ ಸತ್ವವನ್ನು ಬೇರೂರಿಸುವುದಕ್ಕಾಗಿ. ಆದರೆ ಮರಾಠರೂ ಕೂಡಾ ಆ ಹೊತ್ತಿನಲ್ಲಿ ಚಳವಳಿಯಲ್ಲಿ ಇರಲಿಲ್ಲ. ಕಾಂಗ್ರೆಸ್ ಬ್ರಾಹ್ಮಣರದ್ದಾಗಿತ್ತು, ಹಾಗಾಗಿ ಆ ಕಾಲದ ಮರಾಠಾ ನೇತಾರರೆಲ್ಲ ಗಾಬರಿಗೊಂಡಿದ್ದರು. ನಮ್ಮ ಗತಿ ಏನಾಗುತ್ತದೆ ಎಂಬ ಭೀತಿಯು ಅವರನ್ನು ಕಾಡುತ್ತಿತ್ತು. ಆಗ ಅವರು ಒಂದು ಸಮಾವೇಶವನ್ನು ಕರೆದು ತಮ್ಮ ಮರಾಠಾ ವರ್ಗಕ್ಕೆ ಸ್ಥಾನಗಳನ್ನು ಮೀಸಲು ಇಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಅದರಂತೆ ಅವರಿಗೆ 7 ಸ್ಥಾನಗಳನ್ನು ಮೀಸಲಾಗಿ ಇರಿಸಲಾಯಿತು. ಅವರು ಎಲ್ಲಾ ಬ್ರಾಹ್ಮಣೇತರನ್ನು ಕೂಡಿಸಿ ಒಂದು ಸಂಘಟನೆ ಮಾಡಿದರು. ಮುಂದೆ ಈ ಎಲ್ಲಾ ಬ್ರಾಹ್ಮಣೇತರರು ನಮ್ಮನ್ನು ಬಿಟ್ಟು ಕಾಂಗ್ರೆಸಿನಲ್ಲಿ ಸೇರಿಕೊಂಡರು. ಕಾರಣ ಗಾಂಧೀಜಿಯವರು ಈ ಸಮಸ್ಯೆಯನ್ನು ಇಲ್ಲವಾಗಿಸುತ್ತಾರೆ ಎಂಬ ಆಮಿಷವನ್ನು ಮರಾಠಾ ನೇತಾರರಿಗೆ ನೀಡಿದ್ದರು. ಆ ಆಮಿಷಕ್ಕೆ ಬಲಿಯಾಗಿ ಅವರು ಕಾಂಗ್ರೆಸಿಗೆ ಸೇರಿಕೊಂಡರು.

ಹಾಗೆಯೇ ನಮ್ಮಲ್ಲಿನ ಚಮ್ಮಾರ ಬಂಧುಗಳು ತಾವು ಲಾಭ ಮಾಡಿಕೊಳ್ಳುವುದಕ್ಕಾಗಿ ಕಾಂಗ್ರೆಸಿನಲ್ಲಿ ಹೊಕ್ಕರು. ಸ್ವರಾಜ್ಯದಲ್ಲಿ ನಮಗೆ ಒಟ್ಟಾರೆ 27 ಸ್ಥಾನಗಳು ಮುಂಬೈ ರಾಜ್ಯದಲ್ಲಿ ಮೀಸಲಾಗಿವೆ. ಅದರಲ್ಲಿ 25 ಜನ ಕಾಂಗ್ರೆಸಿನ ಚಮ್ಮಾರರು ಆರಿಸಿ ಬಂದರು. ದುರ್ದೈವವೆಂದರೆ ಅವರು ಈವರೆಗೆ ಲೋಕಸಭೆಯಲ್ಲಾಗಲಿ ಅಥವಾ ವಿಧಾನಸಭೆಯಲ್ಲಾಗಲಿ ಅಸ್ಪಶ್ಯರ ವಿಷಯವಾಗಿ ಒಂದು ಪ್ರಶ್ನೆಯನ್ನೂ ಕೇಳಿರುವುದಿಲ್ಲ.

ಒಂದು ಸಿಂಹಿಣಿಗೆ ಎರಡು ಮರಿಗಳಾದವು. ಸಿಂಹಿಣಿಯು ಅವುಗಳನ್ನು ಬಿಟ್ಟು ಕಾಡಿನಲ್ಲಿ ತಿರುಗಾಡಲೆಂದು ಹೋಯಿತು. ಅದಕ್ಕೆ ಹತ್ತಿರದಲ್ಲಿ ಎರಡು ನರಿಯ ಮರಿಗಳು ಕಂಡವು. ಆಗ ಅದು ಆ ಮರಿಗಳನ್ನು ಎತ್ತಿಕೊಂಡು ಬಂದು ತನ್ನ ಮರಿಗಳೊಂದಿಗೆ ಸೇರಿಸಿಕೊಂಡಿತು. ಹಾಗೆಯೇ ಅವುಗಳಿಗೂ ತನ್ನ ಮರಿಗಳಿಗೆ ಕೊಡುವಂತೆ ತನ್ನ ಹಾಲನ್ನೇ ನೀಡುತ್ತಿತ್ತು. ಆ ಎಲ್ಲಾ ಮರಿಗಳು ದೊಡ್ಡದಾದ ಮೇಲೆ ಒಮ್ಮೆ ಒಂದು ಕಡೆಯಲ್ಲಿ ನಿಂತಿದ್ದವು. ಆ ಕಡೆಯಿಂದ ಒಂದು ಆನೆಯು ಕತ್ತು ಅಲ್ಲಾಡಿಸಿಕೊಂಡು ನಡೆದು ಬರುತ್ತಿತ್ತು. ಅದು ಹತ್ತಿರಕ್ಕೆ ಬರುತ್ತಲೇ ನರಿಯ ಮರಿಗಳು ಹೆದರಿ ಓಡಿಹೋದವು. ಆಗ ಸಿಂಹಿಣಿಯ ಮರಿಗಳಿಗೆ ಸಂಶಯ ಉಂಟಾಯಿತು. ಅವು ಈ ಪ್ರಶ್ನೆಯನ್ನು ಸಿಂಹಿಣಿಯಲ್ಲಿ ಕೇಳಿದವು. ಸಂಶಯದಿಂದ ತೊಂದರೆಯಾಗಬಾರದು ಎಂದು ಅದು ಆ ನರಿಯ ಮರಿಗಳನ್ನು ತೆಗೆದುಕೊಂಡು ಹೋಗಿ ಮತ್ತೆ ಕಾಡಿನಲ್ಲಿ ಬಿಟ್ಟು ಬಂದಿತು.

ಈ ವಿಚಾರವನ್ನು ಹೇಳುತ್ತಿರುವ ಕಾರಣವೇನೆಂದರೆ, ನಾವು ಕಳೆದ ಚುನಾವಣೆಯಲ್ಲಿ ಪರಾಭವಗೊಳ್ಳಲಿಲ್ಲ. ನಮ್ಮ ಜನರು ಸ್ವತಃ ನಡೆದುಕೊಂಡು ಬಂದು ಮತದಾನ ಮಾಡಿದರು. ನಾನು ಈ ಸವಾಲು ಹಾಕುತ್ತೇನೆ, ಯಾರೋ ಹೀಗೆ ಹೇಳುತ್ತಾರೆ ನಮ್ಮವರು ನಮ್ಮವರಿಗೆ ಮತ ಹಾಕಲಿಲ್ಲ. ಅವರು ಇದನ್ನು ನಿಜವೆಂದು ತೋರಿಸಿಕೊಟ್ಟರೆ ಮತ್ತು ಅದು ನಿಜವೆಂದು ತಿಳಿದರೆ ನಾನು ರಾಜಕಾರಣವನ್ನು ಬಿಟ್ಟು ಹೊರಗೆ ಹೊರಟು ಹೋಗುತ್ತೇನೆ.

ಈಗ ನಾವು ಒಬ್ಬರೇ ಆಗಿದ್ದೇವೆ. ನಾವು ಅಲ್ಪಸಂಖ್ಯಾತ ಜನರಾಗಿರುವೆವು. ನಾವು ನಮ್ಮ ಶಕ್ಯಾನುಸಾರ ಪರಾಕ್ರಮ ತೋರಿಸುತ್ತಲೇ ಬಂದಿದ್ದೇವೆ. ಈಗ ನಾವು ಬೇರೆಯವರ ಜೊತೆಯಲ್ಲಿ ಕೈ ಜೋಡಿಸಿದರೆ ನಮಗೆ ರಾಜ್ಯ ಸಿಗುತ್ತದೆ. ಆದರೆ ನಿರಾಶರಾಗುವುದು ಬೇಡ. ಇಂದಿನ ಕಾಂಗ್ರೆಸ್ ಸರಕಾರವು ಬ್ರಾಹ್ಮಣ ಮತ್ತು ಮರಾಠರು ಒಂದು ಮುಖ ಎರಡು ಗೋಣುಗಳು ಎಂಬಂತೆ ನಡೆಯುತ್ತಿವೆ. ಆದರೆ ಕಡಲೆ (ಚಣಾ)ಯನ್ನು ಯಾರು ತಿನ್ನುತ್ತಾರೆ ಎಂಬುದನ್ನು ನೋಡಬೇಕು. ಮರಾಠರ ಕುದುರೆ ಹೊಸದಾದುದು. ಬೇರೆ ಸಮಯದಲ್ಲಾಗಿದ್ದರೆ ಮರಾಠರು ಎಲ್ಲಾ ಕಡಲೆೆಗಳನ್ನು ತಾವೇ ತಿಂದೇ ಬಿಡುತ್ತಿದ್ದರು. ಮುಂದೆ ಬ್ರಾಹ್ಮಣರಿಗೆ ಏನೂ ಉಳಿಯುವುದಿಲ್ಲ; ಆಗ ಅವರು ತಿರುಗಿ ನಮ್ಮ ಹತ್ತಿರಕ್ಕೇ ಬರುತ್ತಾರೆ. ಮರಾಠರಿಗೆ ನಲ್ಲಿ ಸಿಕ್ಕಿತು. ನಮ್ಮ ‘ಗುಮ್ಮಟ’ವಂತೂ ಇದ್ದೇ ಇದೆ. ಆದರೆ ಇದೇನು ಅವರು ನಮ್ಮವರೆಂಬ ಭಾವನೆಯಲ್ಲ. ಇದರಿಂದಾಗಿ ಪೇಶ್ವಾಯಿಗಳು ಬರಬಹುದು. ನಮ್ಮ ಸರಕಾರವು ನಮಗೆ ನೀಡಿರುವ ಸವಲತ್ತುಗಳನ್ನು ತೆಗೆದು ಹಾಕಬಹುದು. ಪಂಡಿತ ನೆಹರೂ ಅವರು ನಾಗಪುರದ ‘ಹರಿಜನ’ ಪರಿಷತ್ತಿನಲ್ಲಿ ಭಾಷಣ ಮಾಡುತ್ತಾ, ಅಸ್ಪಶ್ಯರಿಗೆ ಈಗ ಸವಲತ್ತುಗಳ ಅವಶ್ಯಕತೆ ಇಲ್ಲ. ಅವರ ಸುಧಾರಣೆಯು ಆಗಿಬಿಟ್ಟಿದೆ ಎಂಬುದಾಗಿ ಹೇಳಿದರು.

ನನಗೆ ಅನ್ನಿಸುತ್ತಿರುವುದು ಏನೆಂದರೆ, ಯಾರಿಗೆ ನಮ್ಮ ದೇಶದಲ್ಲಿ ಇರುವ ಸಾಮಾನ್ಯ ಜನರ ಪರಿಸ್ಥಿತಿ ಎಂಥದ್ದು ಎಂಬ ತಿಳಿವಳಿಕೆಯೇ ಇಲ್ಲವೋ ಅಂಥವರನ್ನು ಈ ದೇಶಕ್ಕೆ ಪ್ರಧಾನಮಂತ್ರಿಯನ್ನಾಗಿ ಆರಿಸಿರುವುದು ಈ ದೇಶದ ದುರ್ದೈವವಾಗಿದೆ. ಏನೇ ಆಗಲಿ ಈಗ ನಮಗೆ ಸಿಕ್ಕಿರುವ ಸವಲತ್ತುಗಳನ್ನು ತೆಗೆದು ಹಾಕುವುದಕ್ಕೆ ಸುಲಭವಾಗಿ ಬರುವುದಿಲ್ಲ.

ನಮ್ಮ ಈ ಪ್ರಧಾನಮಂತ್ರಿಗಳಿಗೆ ದಕ್ಷಿಣ ಆಫ್ರಿಕಾದ ಪ್ರಶ್ನೆಗಳು ಕಣ್ಣಿಗೆ ಕಾಣಿಸುತ್ತವೆೆ. ಭಾರತದ ಪ್ರತಿಯೊಂದು ಹಳ್ಳಿಯಲ್ಲಿಯೂ ದಕ್ಷಿಣ ಆಫ್ರಿಕಾ ಇದೆ. ಇನ್ನು ದಕ್ಷಿಣ ಆಫ್ರಿಕಾದ ಪ್ರಶ್ನೆಯು ವರ್ಣ ಭೇದದ ಮೇಲೆ ಇರುವಂತಹದ್ದು. ಅವರಿಗಾಗಿ ಅಲ್ಲಿನ ಬ್ರಿಟಿಷ್ ಜನರು ಕಠೋರವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ನಮ್ಮ ಪ್ರಶ್ನೆಗಳಿಗೆ ಮಾತ್ರ ಬುಡಮೇಲು ಮಾಡುವುದಕ್ಕೆ ಸಿದ್ಧರಾಗುತ್ತಾರೆ. ಹಾಗಾಗಿ ನಮ್ಮ ಈ ಪ್ರಧಾನಮಂತ್ರಿಗಳನ್ನು ಬುದ್ಧಿವಂತರು ಎನ್ನಬೇಕೋ ಅಥವಾ ಇನ್ನೇನೋ ಎನ್ನಬೇಕೋ ಎಂಬ ಪ್ರಶ್ನೆ ನಮ್ಮೆದುರು ಇದೆ. ಪೇಶ್ವೆಯವರ ಸರದಾರ ಬಾಪೂ ಗೋಖಲೆ ಎಂಬಾತ ಮುಸಲ್ಮಾನರ ಮೇಲೆ ದಾಳಿ ಮಾಡಿದನು. ಅವನೊಂದಿಗೆ ಸಿದನಾಕ ಎಂಬ ಮಹಾರ ಸರದಾರ ಒಬ್ಬನಿದ್ದ. ಅವನ ಬಿಡಾರವು ಪೇಶ್ವೆಯವರ ಹತ್ತಿರದಲ್ಲಿಯೇ ಇರಬೇಕಾಗಿತ್ತು. ಹಾಗಾಗಿ ಬಿಡಾರವನ್ನು ಹಾಕುತ್ತಿರುವಾಗ ಪೇಶ್ವೆಯವರ ಜನ ಇದಕ್ಕೆ ಅಡ್ಡಿಯುಂಟು ಮಾಡಿದರು. ಆ ವಿಷಯವು ಅವನಿಗೆ ತಿಳಿಯಿತು. ಆಗ ದರಬಾರು ನಡೆಯುತ್ತಿತ್ತು. ಸಿದನಾಕ ಮಹಾರನು ತನ್ನ ತಲವಾರನ್ನು ಕೆಳಗಡೆ ಇಟ್ಟು ಅಲ್ಲಿಂದ ಹೊರಟನು. ಆಗ ಹಿಂಬರಿರಾವ್ ಎಂಬಾತನು ತಟಕ್ಕನೆ ಮೇಲಕ್ಕೆದ್ದು ಹೇಳಿದ, ಇದು ಮದುವೆಯ ಪಂಕ್ತಿಯಲ್ಲ; ವೀರರ ಪಂಕ್ತಿಯಾಗಿದೆ. ಇಲ್ಲಿ ಯಾವುದೇ ರೀತಿಯ ಭೇದಭಾವಗಳು ಇರಬಾರದು. ಹಾಗಾಗಿ ನಮಗೆ ರಾಜಕಾರಣದಲ್ಲಿ ಸರಿಯಾದ ಪಾಲು ಸಿಗಬೇಕು. ನಾನೇನಾದರೂ ಈಗ ಕಾಂಗ್ರೆಸಿನಲ್ಲಿಯೇ ಇದ್ದಿದ್ದರೆ, ನೆಹರೂ ಪ್ರಧಾನಮಂತ್ರಿ ಆಗುತ್ತಿದ್ದರೆ? ಖಂಡಿತಾ ಇಲ್ಲ. ನಾನೇ ಆಗುತ್ತಿದ್ದೆನು.

ನಮ್ಮ ಫೆಡರೇಶನ್‌ನಲ್ಲಿ ಬಹಳಷ್ಟು ಮಂದಿ ಕಳ್ಳರು ಸೇರಿಕೊಂಡಿದ್ದಾರೆ. ಅವರಿಗೆ ಫೆಡರೇಶನನ್ನು ಬಿಡಬೇಕೆಂದಿದ್ದರೆ ಅವರು ಈಗಲೇ ಅಲ್ಲಿಂದ ಹೊರಟು ಹೋಗಬಹುದು. ಅವರಿಗೆ ಅಲ್ಲಿ ಜಾಗವಿಲ್ಲ. ಎರಡು ಕಲ್ಲುಗಳ ಮೇಲೆ ಕಾಲುಗಳನ್ನು ಇಡಬಾರದು, ಫೆಡರೇಶನ್‌ನ ಮರವು ಬೇಗನೆ ಫಲ ನೀಡುವಂತಹದ್ದಲ್ಲ. ಅದು ಫಲ ಬಿಡುವುದು ಬಹಳ ತಡವಾಗಿ; ಆದರೆ ಅದು ಚಿರಕಾಲದವರೆಗೂ ಉಳಿದುಕೊಳ್ಳುವಂಥದ್ದು. ಯಾವ ಮರವು ಬಹಳ ಬೇಗನೇ ಫಲ ಕೊಡುತ್ತದೆಯೋ ಅದು ಬಹಳ ಬೇಗನೆ ನಾಶವಾಗುತ್ತದೆ. ಇಂತಹ ಮರವು ನಮಗೆ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಯಾರಿಗೆ ಬೇಗನೆ ಫಲ ಬೇಕಾಗಿರುವುದೋ ಅವರು ಅತ್ತ ಕಡೆಗೆ ಹೋಗಬಹುದು.

ನಮ್ಮ ಜನರು ಇಂದಿನವರೆಗೂ ಅತ್ಯಂತ ದಯನೀಯ ಪರಿಸ್ಥಿತಿಯನ್ನು ಸಹಿಸಿಕೊಂಡು ಬಂದಿದ್ದಾರೆ. ಅವರಿಗಾಗಿ ನಾನು ಏನಾದರೂ ಮಾಡಬೇಕಾಗಿದೆ. ಅವರನ್ನು ಹಾಗೆಯೇ ಬಿಟ್ಟುಬಿಡಲು ಆಗುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ಆರಾಮು ಕುರ್ಚಿಯ ರಾಜಕಾರಣ ಮಾಡುವುದು ಬೇಕಾಗಿಲ್ಲ. ಮುಂದೆ ಕಬ್ಬಿಣದ ಕಡಲೆಯನ್ನು ತಿನ್ನಬೇಕಾಗಿ ಬರುತ್ತದೆ. ಹಾಗಾಗಿ ಯಾರಿಗೆ ಇದನ್ನು ಪಚನ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವೋ ಅಂಥವರು ಇಲ್ಲಿಂದ ಬೇಗನೆ ಹೋಗಿಬಿಡಬೇಕು. ನನಗೆ ಫೆಡರೇಶನ್‌ನಲ್ಲಿ ಸ್ವಲ್ಪವೇ ಜನರಿದ್ದರೂ ನಡೆಯುತ್ತದೆ. ಯಾವ ಸಮಯದಲ್ಲಿ ನಾನು ಚಳವಳಿಯನ್ನು ಆರಂಭಿಸಿದ್ದೆನೋ ಆಗ ಅಲ್ಲಿ ಅಧ್ಯಕ್ಷ ಮತ್ತು ಒಂದು ಟೇಬಲ್ ಮಾತ್ರವೇ ಇತ್ತು. ಅದರಿಂದಾಗಿ ನಾನು ಹತಾಶೆಗೊಳ್ಳಲಿಲ್ಲ. ಒಂದೊಮ್ಮೆ ಈ ಚುನಾವಣೆಯಲ್ಲಿ ನಾವು ಪರಾಭವಗೊಂಡರೂ ನಾವು ನಿರಾಶರಾಗುವ ಕಾರಣವಿಲ್ಲ. ನಮ್ಮ ಚಳವಳಿಯನ್ನು ಜೀವಂತವಾಗಿ ಇರಿಸೋಣ. ಸಮಯ ನಮ್ಮದು ಎಂಬುದಾಗಿದೆ ಎಂದು ಕೂಗಿ ಹೇಳುತ್ತಿದ್ದೇನೆ; ನೀವು ಆ ಕೂಗಿಗೆ ಓಗೊಡಿರಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News