ವಿಶ್ವ ಆರ್ಚರಿ ಚಾಂಪಿಯನ್ ಶಿಪ್: ಭಾರತ ಫೈನಲ್ ಗೆ ಲಗ್ಗೆ

Update: 2019-06-14 11:56 GMT

ಡೆನ್ ಬಾಶ್(ನೆದರ್ಲೆಂಡ್), ಜೂ.13: ಈಗಾಗಲೇ ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡಿರುವ ಭಾರತದ ಪುರುಷರ ರಿಕರ್ವ್ ತಂಡ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದೆ.

ಗುರುವಾರ ಬಲಿಷ್ಠ ನೆದರ್ಲೆಂಡ್ ತಂಡವನ್ನು ಮಣಿಸುವುದರೊಂದಿಗೆ 2005ರ ಬಳಿಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತು.

ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೀನಾದ ಸವಾಲನ್ನು ಎದುರಿಸಲಿರುವ ಭಾರತೀಯ ತಂಡ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದೆ. ಚೀನಾ ಗುರುವಾರ ನಡೆದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕೊರಿಯವನ್ನು 6-2 ಅಂತರದಿಂದ ಸೋಲಿಸಿದೆ.

ತರುಣ್‌ದೀಪ್ ರಾಯ್, ಅತನು ದಾಸ್ ಹಾಗೂ ಪ್ರವೀಣ್ ಜಾಧವ್ ಅವರನ್ನೊಳಗೊಂಡ ಭಾರತದ ರಿಕರ್ವ್ ತಂಡ ಕ್ವಾರ್ಟರ್ ಫೈನಲ್‌ಗೆ ತಲುಪುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಇಂದು ನೆದರ್ಲೆಂಡ್ ವಿರುದ್ಧ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ ಶೂಟ್-ಆಫ್‌ನಲ್ಲಿ 29-28 ಅಂತರದಿಂದ ಜಯ ಸಾಧಿಸಿತು.

ಭಾರತದ ಪುರುಷರ ರಿಕರ್ವ್ ತಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿ ಫೈನಲ್‌ಗೆ ತಲುಪಿದೆ. 2005ರಲ್ಲಿ ಮ್ಯಾಡ್ರಿಡ್‌ನಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿತ್ತು. ಆಗ ರಾಯ್, ಜಯಂತ್ ಹಾಗೂ ಗೌತಮ್ ಸಿಂಗ್ ಅವರಿದ್ದ ತಂಡ ಫೈನಲ್‌ನಲ್ಲಿ ಕೊರಿಯಾಕ್ಕೆ 232-244 ರಿಂದ ಸೋತು ಪ್ರಶಸ್ತಿ ವಂಚಿತವಾಗಿತ್ತು.

ಮಹಿಳೆಯರ ಕಾಂಪೌಂಡ್ ತಂಡ ಶನಿವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಟರ್ಕಿಯನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News