ರಕ್ತದಾನ-ಜೀವದಾನ

Update: 2019-06-13 18:44 GMT

ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನದಲ್ಲಿ ತೊಡಗಿಕೊಳ್ಳಬೇಕೆಂಬ ಆಶಯ.

ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು. ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು ಒದಗುತ್ತಲೇ ಇರುತ್ತವೆ. ಜೊತೆಯಲ್ಲಿ ಅರ್ಬುಧ, ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ರಿಂದ 40 ದಿನಗಳ ವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ಆ ಬಳಿಕ ಅದು ಉಪಯೋಗಕ್ಕೆ ಬರುವುದಿಲ್ಲ. ಅದ್ದರಿಂದ ಜನತೆ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ.
ದಿನದ ಮಹತ್ವ
 ರಕ್ತದ ಗುಂಪನ್ನು ಕಂಡು ಹಿಡಿದು ರಕ್ತವನ್ನು ಎಬಿಒ ಗುಂಪು ಗಳಾಗಿ ವರ್ಗೀಕರಣ ಮಾಡುವ ಸಂಶೋಧನೆ ನಡೆಸಿ ರಕ್ತ ಪೂರಣ ಚಿಕಿತ್ಸಾ ಕ್ರಮಕ್ಕೆ ಅಡಿಪಾಯ ಹಾಕಿದ ಖ್ಯಾತ ವಿಜ್ಞಾನಿ ಡಾ. ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಸ್ಮರಣಾರ್ಥವಾಗಿ ಅವರ ಜನ್ಮ ದಿನವಾದ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2004ರಿಂದ ಈ ಆಚರಣೆ ಆರಂಭಿಸಲಾಗಿದೆ. ಒಂದು ದೇಶದ ವಾರ್ಷಿಕ ರಕ್ತದ ಅವಶ್ಯಕತೆಯು ಆ ದೇಶದ ಒಟ್ಟು ಜನ ಸಂಖ್ಯೆಯು ಶೇ. 1ರಷ್ಟು ಇರುತ್ತದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಈ ನಿಟ್ಟಿನಲ್ಲಿ ಭಾರತದ ಜನ ಸಂಖ್ಯೆಯ ಶೇ. 1 ಅಂದರೆ 130 ಕೋಟಿಯಲ್ಲಿ ಸರಾಸರಿ ವಾರ್ಷಿಕವಾಗಿ 103 ಕೋಟಿ ರಕ್ತದ ಯುನಿಟ್‌ಗಳ ಅವಶ್ಯಕತೆ ಇರುತ್ತದೆ. ಆದರೆ ಖೇದಕರ ವಿಚಾರವೆಂದರೆ ನಮ್ಮ ಭಾರತ ದೇಶದಲ್ಲಿ ಮಾಸಿಕವಾಗಿ 70 ರಿಂದ 80 ಲಕ್ಷ ಯುನಿಟ್‌ಗಳಷ್ಟು ರಕ್ತ ಮಾತ್ರ ಶೇಖರಣೆಯಾಗುತ್ತಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣದಿಂದ ರಕ್ತದ ಅನಿವಾರ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ.
ಯಾರು ರಕ್ತದಾನ ಮಾಡಬಹುದು?
♦ ಹೆಣ್ಣು ಗಂಡೆಂಬ ಭೇದ ಭಾವವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
♦ ಗಂಡಸರು 3 ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 6 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು.
♦ ರಕ್ತದಾನಿಯ ತೂಕ ಕನಿಷ್ಠ 45 ಕೆ.ಜಿ ಗಿಂತ ಜಾಸ್ತಿ ಇರಬೇಕು.
♦ ರಕ್ತದಾನಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.


ಯಾರು ರಕ್ತದಾನ ಮಾಡಬಾರದು?
♦ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುವವರು ರಕ್ತದಾನ ಮಾಡಬಾರದು.
♦ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.
♦ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು.
♦ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ, ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು.
♦ ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರದ 3 ತಿಂಗಳು ರಕ್ತದಾನ ಮಾಡಬಾರದು.
♦ ಹಿಂದಿನ 3 ತಿಂಗಳಲ್ಲಿ ತಾವೇ ಯಾವುದೇ ರಕ್ತ ಅಥವಾ ರಕ್ತದ ಅಂಶ ಪಡೆದಿದ್ದರೆ ಅಂತಹವರು ರಕ್ತದಾನ ಮಾಡಬಾರದು.
♦ ಕಾಮಾಲೆ, ಎಚ್‌ಐವಿ ಮತ್ತು ಯಾವುದೇ ಲೈಂಗಿಕ ರೋಗವಿರುವವರು ರಕ್ತದಾನ ಮಾಡಬಾರದು.
♦ ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 6 ತಿಂಗಳವರೆಗೆ ಮಾತ್ರ ಚಿಕ್ಕ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡಬಾರದು.
♦ ಅರ್ಬುದ ರೋಗ, ಹೃದಯ ಸಂಬಂಧಿ ಕಾಯಿಲೆ, ಅಸಹಜ ರಕ್ತಸ್ರಾವ, ಮಧುಮೇಹ, ಮೂತ್ರಪಿಂಡದ ಕಾಯಿಲೆ ಮತ್ತು ಯಕೃತ್, ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಇರುವವರು, ಹೆಪಟೈಟಿಸ್ ಬಿ ಮತ್ತು ಸಿ ಕಾಯಿಲೆಯಿರುವವರು ರಕ್ತದಾನ ಮಾಡಬಾರದು.
ರಕ್ತವನ್ನು ಯಾವುದೇ ವ್ಯಕ್ತಿಗೆ ನೀಡುವ ಮೊದಲು ರಕ್ತದ ಮೇಲಿನ ಎಲ್ಲಾ ರೋಗಗಳಿಂದ ಮುಕ್ತವಾಗಿದೆ ಎಂದು ತಿಳಿಯಲು ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗುತ್ತದೆ. ಈ ಕಾರಣಕ್ಕಾಗಿಯೇ ಬದಲಿ ರಕ್ತ ನೀಡಿದರೂ ಒಂದು ಬಾಟಲ್ (350) ರಕ್ತಕ್ಕೆ ಕನಿಷ್ಠ 300 ರಿಂದ 400 ರೂಪಾಯಿ ವೆಚ್ಚ ತಗಲುತ್ತದೆ.
ನೆನಪಿರಲಿ....
ರಕ್ತದಾನ ಮಹಾದಾನ, ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ರಕ್ತದಾನ ಮಾಡಿ ಜೀವದಾನ ನೀಡಿ.

ನಿಮಗಿದು ತಿಳಿದಿರಲಿ.....
♦ರಕ್ತಕ್ಕೆ ಪರ್ಯಾಯವಾದ (ಬದಲಿಯಾದ) ವಸ್ತುವಿಲ್ಲ.
 ♦ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.
 ♦ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು.
♦ ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿಯಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.
♦ ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ.
 ♦ರಕ್ತದಾನ ಮಾಡುವಾಗ, ಒಂದು ಚುಚ್ಚುಮದ್ದು ತೆಗೆದುಕೊಂಡಷ್ಟೇ ನೋವಿರುತ್ತದೆ.
 ♦ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಕೇವಲ 20 ನಿಮಿಷ ಮಾತ್ರ ಸಾಕು.
 ♦ರಕ್ತದಾನ ಮಾಡುವಾಗ ಒಮ್ಮೆಗೆ 350ಮಿ.ಲೀ. ರಕ್ತ ಮಾತ್ರ ತೆಗೆಯಲಾಗುವುದು. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ.
♦ರಕ್ತದಾನ ಮಹಾದಾನ, ಇದಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ.

ರಕ್ತದಾನದಿಂದ ದಾನಿಗೆ ಆಗುವ ಪ್ರಯೋಜನಗಳು
♦ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ.
♦ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
♦ ದೇಹದಲ್ಲಿ ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ಕಡಿಮೆ ಮಾಡಲು ಸಹಾಯವಾಗುತ್ತದೆ.
♦ ಹೃದಯಾಘಾತವನ್ನು ಶೇ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ.
♦ ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ.
♦ಎಲ್ಲಕ್ಕಿಂತ ಮಿಗಿಲಾಗಿ ಒಂದು ಜೀವ ಉಳಿಸಿದಂತಾಗುತ್ತದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News

ಜಗದಗಲ
ಜಗ ದಗಲ