ಈ ರಾಜ್ಯದಲ್ಲಿ ಶೇಕಡ 100ರಷ್ಟು ಮಳೆ ಕೊರತೆ!

Update: 2019-06-14 03:44 GMT

ಹೊಸದಿಲ್ಲಿ, ಜೂ.14: ಮೂರು ದಶಕದಲ್ಲೇ ಸುದೀರ್ಘ ಅವಧಿಯ ಬಿಸಿಗಾಳಿ ಸುಳಿಯಲ್ಲಿ ಸಿಲುಕಿರುವ ರಾಜಧಾನಿಯಲ್ಲಿ ಜೂನ್ ಮೊದಲ 13 ದಿನಗಳಲ್ಲಿ  ಕೂಡಾ ಇದುವರೆಗೆ ಮಳೆಯಾಗಿಲ್ಲ. ಇದರಿಂದಾಗಿ ಈ ರಾಜ್ಯ ಶೇಕಡ 100ರಷ್ಟು ಮಳೆ ಕೊರತೆ ಎದುರಿಸುತ್ತಿರುವ ದೇಶದ ಏಕೈಕ ರಾಜ್ಯವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಒಟ್ಟಾರೆಯಾಗಿ ದೇಶ ಜೂನ್ ತಿಂಗಳಲ್ಲಿ ಇದುವರೆಗೆ ಶೇಕಡ 42ರಷ್ಟು ಮಳೆ ಕೊರತೆ ಎದುರಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪಗಳಲ್ಲಿ ಮಾತ್ರ ವಾಡಿಕೆ ಸರಾಸರಿಗಿಂತ ಹೆಚ್ಚು ಮಳೆಯಾಗಿದೆ.

"ವಾಡಿಕೆಯಂತೆ ಜೂನ್ 1-13ರ ಅವಧಿಯಲ್ಲಿ ದಿಲ್ಲಿಯಲ್ಲಿ ಸರಾಸರಿ 14.1 ಮಿಲಿಮೀಟರ್ ಮಳೆಯಾಗುತ್ತದೆ. ಆದರೆ ಈ ಬಾರಿ ಸ್ವಲ್ಪವೂ ಮಳೆ ಬಿದ್ದಿಲ್ಲ. ಇದರೊಂದಿಗೆ ದಿಲ್ಲಿ ಜೂನ್ ಒಂದರಿಂದ ಸ್ವಲ್ಪವೂ ಮಳೆಯಾಗದ ಏಕೈಕ ರಾಜ್ಯ ಎನಿಸಿಕೊಂಡಿದೆ. ರಾಜಧಾನಿಯಲ್ಲಿ ಕೊನೆಯ ಮಳೆ ಬಿದ್ದಿರುವುದು ಮೇ 15ರಂದು" ಎಂದು ಹವಾಮಾನ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಇದು ತೀರಾ ವಿಚಿತ್ರ. 2011ರಿಂದೀಚೆಗೆ ಪ್ರತಿ ವರ್ಷ ದಿಲ್ಲಿಯಲ್ಲಿ ಜೂನ್ ಮೊದಲ ವಾರದಲ್ಲಿ ಮಳೆಯಾಗುತ್ತದೆ. 2017ರ ಮೊದಲ ಎರಡು ವಾರಗಳಲ್ಲಿ ನಾಲ್ಕು ದಿನ ರಾಜಧಾನಿಯಲ್ಲಿ ಮಳೆಯಾಗಿತ್ತು. ಇದು 10 ವರ್ಷಗಳಲ್ಲೇ ಗರಿಷ್ಠ ಮಳೆಯಾಗಿತ್ತು" ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಮಳೆಯ ಕೊರತೆಯಿಂದಾಗಿ ಪಾಲಂ ಹಾಗೂ ಸಫ್ದರ್‌ಜಂಗ್ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 48 ಡಿಗ್ರಿ ಹಾಗೂ 45.6 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸೋಮವಾರ ದಾಖಲಾಗಿದೆ. ಗುರುವಾರ ಈ ಎರಡು ಕೇಂದ್ರಗಳಲ್ಲಿ ಪಾದರಸ ಮಟ್ಟ ಕ್ರಮವಾಗಿ 42.9 ಡಿಗ್ರಿ ಹಾಗೂ 41.2 ಡಿಗ್ರಿ ಇತ್ತು. ಮಳೆ ಕೊರತೆಯೇ ಉಷ್ಣಾಂಶ ಅಧಿಕವಾಗಲು ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News