ಮಾಲೆಗಾಂವ್ ಸ್ಫೋಟ ಪ್ರಕರಣ: 4 ಆರೋಪಿಗಳಿಗೆ ಜಾಮೀನು

Update: 2019-06-14 08:39 GMT

ಮುಂಬೈ, ಜೂ.14:  ಹದಿಮೂರು ವರ್ಷಗಳ ಹಿಂದೆ, 2006ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ಕು ಮಂದಿ ಆರೋಪಿಗಳಾದ ಮನೋಹರ್ ನರ್ವಾರಿಯಾ, ರಾಜೇಂದ್ರ ಚೌಧುರಿ, ಧನ್ ಸಿಂಗ್ ಹಾಗೂ ಲೋಕೇಶ್ ಶರ್ಮ ಅವರಿಗೆ  ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಐ ಎ ಮೊಹಂತಿ ಹಾಗೂ ಎಎಂ ಬದರ್ ಅವರನ್ನೊಳಗೊಂಡ ವಿಭಾಗೀಯ ಪೀಠ  ಜಾಮೀನು ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳು  ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಹಾಗೂ ಸಾಕ್ಷ್ಯ ತಿರುಚುವ ಯಾ ಸಾಕ್ಷಿಗಳ ಜತೆ ಸಂಪರ್ಕ ಸಾಧಿಸುವ ಯತ್ನ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ನಾಲ್ಕು ಮಂದಿಯೂ 2013ರಿಂದ ಜೈಲಿನಲ್ಲಿದ್ದು ಅದೇ ವರ್ಷ ವಿಶೇಷ ನ್ಯಾಯಾಲಯ ಅವರ ಜಾಮೀನು ಅಪೀಲನ್ನು ತಿರಸ್ಕರಿಸಿದ ನಂತರ 2016ರಲ್ಲಿ ಹೈಕೋರ್ಟಿನ ಮೊರೆ ಹೋಗಿದ್ದರು.

ಸೆಪ್ಟೆಂಬರ್ 8, 2006ರಂದು ನಾಶಿಕ್ ಸಮೀಪದ ಮಾಲೆಗಾಂವ್ ನ ಹಮೀದಿಯಾ ಮಸೀದಿಯ ದಫನ ಭೂಮಿ ಸಮೀಪ ನಡೆದ ಸರಣಿ ಸ್ಫೋಟಗಳಲ್ಲಿ 37 ಜನರು ಸಾವಿಗೀಡಾಗಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ಪ್ರಕರಣವನ್ನು ಆರಂಭದಲ್ಲಿ ತನಿಖೆ ನಡೆಸಿದ್ದ ಮಹಾರಾಷ್ಟ್ರ ಎಟಿಎಸ್ ಒಂಬತ್ತು ಮಂದಿ ಅಲ್ಪಸಂಖ್ಯಾತ ಸಮುದಾಯದ ಮಂದಿಯನ್ನು ಆರೋಪಿಗಳೆಂದು ಬಂಧಿಸಿತ್ತು. ಆದರೆ ಪ್ರಕರಣದ ತನಿಖೆಯನ್ನು ಎನ್‍ಐಎ ಕೈಗೆತ್ತಿಕೊಂಡ ನಂತರ ಈ ಹಿಂದೆ ಬಂಧಿತರಾಗಿದ್ದ ಒಂಬತ್ತು ಮಂದಿಯ ವಿರುದ್ಧದ ಆರೋಪ ಕೈಬಿಟ್ಟು ಸಿಂಗ್, ಶರ್ಮ, ನರ್ವಾರಿಯ ಹಾಗೂ ಚೌಧುರಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತಮ್ಮ ಜಾಮೀನಿಗೆ ಅಪೀಲು ಸಲ್ಲಿಸಿರುವ ಹೊರತಾಗಿ ಈ ನಾಲ್ಕು ಮಂದಿಯೂ ಇತರ ಒಂಬತ್ತು ಮಂದಿಯನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News