ಟ್ಯಾಂಕರ್ ಸಿಬ್ಬಂದಿ ‘ಹಾರುವ ವಸ್ತು’ ನೋಡಿದ್ದಾರೆ: ಜಪಾನ್ ಹಡಗು ಕಂಪೆನಿ ಮುಖ್ಯಸ್ಥ

Update: 2019-06-14 17:00 GMT

ಟೋಕಿಯೊ, ಜೂ. 14: ಒಮಾನ್ ಕೊಲ್ಲಿಯಲ್ಲಿ ಗುರುವಾರ ‘ದಾಳಿ’ಗೆ ಒಳಗಾದ ಜಪಾನ್ ಒಡೆತನದ ತೈಲ ಟ್ಯಾಂಕರ್‌ನ ಸಿಬ್ಬಂದಿ ‘ಹಾರುವ ವಸ್ತು’ವೊಂದನ್ನು ನೋಡಿದ್ದಾರೆ ಹಾಗೂ ಬಳಿಕ ಹಡಗಿನಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ಹಡಗು ಕಂಪೆನಿ ಮುಖ್ಯಸ್ಥ ಶುಕ್ರವಾರ ಹೇಳಿದ್ದಾರೆ.

‘‘ಹಡಗಿಗೆ ಹಾರುವ ವಸ್ತುವೊಂದು ಬಡಿದಿದೆ ಎಂಬುದಾಗಿ ಸಿಬ್ಬಂದದಿ ಹೇಳುತ್ತಿದ್ದಾರೆ. ಅದನ್ನು ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದಾರೆ’’ ಎಂದು ಕೊಕುಕ ಸಾಂಗ್ಯೊ ಶಿಪ್ಪಿಂಗ್ ಕಂಪೆನಿಯ ಮುಖ್ಯಸ್ಥ ಯುಟಕ ಕಟಡ ಸುದ್ದಿಗಾರರಿಗೆ ತಿಳಿಸಿದರು.

‘‘ಯಾವುದೋ ವಸ್ತು ಹಾರಿಕೊಂಡು ಬಂತು, ಬಳಿಕ ಸ್ಫೋಟ ಸಂಭವಿಸಿತು ಹಾಗೂ ಅದು ಹಡಗಿನಲ್ಲಿ ರಂಧ್ರ ನಿರ್ಮಿಸಿತು ಎಂಬುದಾಗಿ ಹೇಳುವ ವರದಿಯೊಂದನ್ನು ನಾವು ಸ್ವೀಕರಿಸಿದ್ದೇವೆ’’ ಎಂದರು.

ಮೆಥನಾಲ್ ಹೊತ್ತಿದ್ದ ‘ಕೊಕುಕ ಕರೇಜಿಯಸ್’ ಹಡಗಿನಲ್ಲಿ ಎರಡು ಸ್ಫೋಟಗಳು ನಡೆದಂತೆ ಭಾಸವಾಗಿದೆ ಎಂಬುದಾಗಿ ಕಟಡ ಗುರುವಾರ ಸುದ್ದಿಗಾರರಿಗೆ ಹೇಳಿದ್ದರು.

‘‘ಮೊದಲ ದಾಳಿಯ ಬಳಿಕ, ನಮ್ಮ ನಾವಿಕ ಸಿಬ್ಬಂದಿ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಡ್ಡಾದಿಡ್ಡಿ ಚಲಾಯಿಸಿದರು. ಆದರೆ, ಮೂರು ಗಂಟೆಗಳ ಬಳಿಕ ಹಡಗಿನ ಮೇಲೆ ಮತ್ತೆ ದಾಳಿ ನಡೆಸಲಾಯಿತು’’ ಎಂದಿದ್ದರು.

ಅಮೆರಿಕದ ಆರೋಪ ನಿರಾಧಾರ: ಇರಾನ್

ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ತಾನು ದಾಳಿ ನಡೆಸಿದ್ದೇನೆ ಎಂಬ ಅಮೆರಿಕದ ಆರೋಪಗಳನ್ನು ಇರಾನ್ ಶುಕ್ರವಾರ ‘ನಿರಾಧಾರ’ ಎಂಬುದಾಗಿ ತಿರಸ್ಕರಿಸಿದೆ.

ಈ ವಲಯದಲ್ಲಿರುವ ತನ್ನ ಸೈನಿಕರು ಮತ್ತು ಮಿತ್ರ ದೇಶಗಳನ್ನು ಅಮೆರಿಕ ರಕ್ಷಿಸುವುದು ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಎಚ್ಚರಿಕೆ ನೀಡಿದೆ ಹಾಗೂ ಹಡಗುಗಳ ಮೇಲೆ ನಡೆಯಿತೆನ್ನಲಾದ ದಾಳಿಗಳ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಸೇರಿದೆ.

‘‘ಒಂದೇ ಒಂದು ಚೂರು ನೈಜ ಅಥವಾ ಸಾಂದರ್ಭಿಕ ಸಾಕ್ಷವಿಲ್ಲದೆಯೇ ಇರಾನ್ ವಿರುದ್ಧ ಅಮೆರಿಕ ತಕ್ಷಣ ಆರೋಪ ಹೊರಿಸಿದೆ’’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಜಪಾನ್ ಪ್ರಧಾನಿ ಶಿಂರೊ ಅಬೆ ಇರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ರಾಜತಾಂತ್ರಿಕ ಬುಡಮೇಲು ಚಟುವಟಿಕೆ’ ನಡೆಸಲು ಹಾಗೂ ಅನಾಹುತಕಾರಿ ಆರ್ಥಿಕ ದಿಗ್ಬಂಧನಗಳ ಮೂಲಕ ಇರಾನ್ ವಿರುದ್ಧ ತಾನು ನಡೆಸಿರುವ ಆರ್ಥಿಕ ಭಯೋತ್ಪಾದನೆಯನ್ನು ಮುಚ್ಚಿಹಾಕಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News