ಶಿಖರ್ ಧವನ್ ಚೇತರಿಸಿಕೊಂಡರೂ ಫೀಲ್ಡಿಂಗ್ ಕಷ್ಟ: ಶ್ರೀಧರ್

Update: 2019-06-15 14:20 GMT

 ಹೊಸದಿಲ್ಲಿ, ಜೂ.14: ಎಡಗೈ ಹೆಬ್ಬರಳಿಗೆ ಆಗಿರುವ ಗಾಯದ ಕಾರಣ ವಿಶ್ವಕಪ್ ಕ್ರಿಕೆಟ್‌ನ ಮುಂದಿನ ಕನಿಷ್ಟ 4 ಪಂದ್ಯಗಳಲ್ಲಿ ತಂಡದಿಂದ ಹೊರಗುಳಿಯಲಿರುವ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ಚೇತರಿಸಿಕೊಂಡು ಕಣಕ್ಕಿಳಿದರೂ ಈ ಹಿಂದಿನಂತೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸಲು ಕಷ್ಟವಾಗಬಹುದು ಎಂದು ಭಾರತೀಯ ತಂಡದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಹೇಳಿದ್ದಾರೆ. ಶಿಖರ್ ಧವನ್ ಸ್ವಾಭಾವಿಕವಾಗಿ ಬಲಚ(ಬಲಗೈ ಪ್ರಧಾನವಾಗಿರುವವರು). ಆದರೆ ಆಡುವಾಗ ಎಡಗೈಯಲ್ಲಿ ಆಡುತ್ತಾರೆ. ಆದ್ದರಿಂದ ಎಡಗೈ ಹೆಬ್ಬೆರಳಿನ ಮೂಳೆ ಮುರಿತದಿಂದ ಚೇತರಿಸಿಕೊಂಡ ಮೇಲೆ ಅವರು ಈ ಹಿಂದಿನಂತೆಯೇ ಬ್ಯಾಟಿಂಗ್ ಮಾಡಲು ಸಾಧ್ಯ. ಆದರೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸುವುದು ಮಾತ್ರ ಅವರಿಗೆ ಸವಾಲಾಗಬಹುದು. ಅಲ್ಲದೆ ಚೆಂಡನ್ನು ಎಸೆಯುವಾಗಲೂ ಸಮಸ್ಯೆಯಾಗದು ಎಂದು ಶ್ರೀಧರ್ ಹೇಳಿದ್ದಾರೆ. ಸುಮಾರು 10-12 ದಿನದ ವಿಶ್ರಾಂತಿಯ ಬಳಿಕ ಅವರ ಬ್ಯಾಟಿಂಗನ್ನು ಪರಿಶೀಲಿಸಲಾಗುವುದು. ಎಡಗೈ ಅವರ ಪ್ರಭಾವೀ ಕೈಯಲ್ಲದ ಕಾರಣ ಬ್ಯಾಟಿಂಗ್ ಅವರಿಗೆ ಸಮಸ್ಯೆಯಾಗದು. ಫೀಲ್ಡಿಂಗ್ ಟೆಸ್ಟ್ ಹಗುರವಾದ ಚೆಂಡಿನಿಂದ ಆರಂಭಿಸಿ ಕ್ರಮೇಣ ಕ್ರಿಕೆಟ್ ಚೆಂಡನ್ನು ಬಳಸಲಾಗುವುದು. ಏನಿದ್ದರೂ ಸ್ಲಿಪ್ ಫೀಲ್ಡಿಂಗ್ ಅವರಿಗೆ ಸವಾಲಿನ ಕೆಲಸ ಎಂದು ಶ್ರೀಧರ್ ಹೇಳಿದ್ದಾರೆ. ಭಾರತೀಯ ತಂಡದ ಫೀಲ್ಡಿಂಗ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಫೀಲ್ಡರ್‌ಗಳು ಚೆಂಡನ್ನು ಎಸೆಯುವುದು, ಅಥವಾ ನೇರ ಎಸೆತದಿಂದ ರನೌಟ್ ಮಾಡುವುದರಲ್ಲಿ ನಮ್ಮ ತಂಡದ ಸಾಧನೆ ಇತರ ತಂಡದಷ್ಟು ಉತ್ತಮವಾಗಿಲ್ಲ. ಶೇ.25ರಷ್ಟು ಎಸೆತಗಳು ನಿಖರವಾಗಿದ್ದರೂ ಫೀಲ್ಡಿಂಗ್ ಕೋಚ್‌ಗೆ ತೃಪ್ತಿಯಾಗುತ್ತದೆ. ರನೌಟ್ ಮಾಡುವ ನಾಲ್ಕು ಅವಕಾಶಗಳಲ್ಲಿ ಒಂದರಲ್ಲಿ ಯಶ ಸಾಧಿಸಿದರೂ ಅದು ಉತ್ತಮ ಸಾಧನೆಯಾಗುತ್ತದೆ. ಆದರೆ ಕಳೆದ ಪಂದ್ಯದಲ್ಲಿ 10ಕ್ಕೂ ಹೆಚ್ಚು ಅವಕಾಶ ಸಿಕ್ಕಿದ್ದು ನಾವು ಒಂದರಲ್ಲಿ ಮಾತ್ರ ಯಶ ಸಾಧಿಸಿದ್ದೇವೆ. ಈ ಬಗ್ಗೆ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ ಎಂದವರು ಹೇಳಿದರು.

ಭಾರತ ತಂಡ ಜೂನ್ 16ರಂದು ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನದ ಎದುರು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News