ಪಾಕ್ ಮೂಲದ ಅಭಿಮಾನಿಗೆ 2011ರಿಂದಲೂ ಮ್ಯಾಚ್ ಟಿಕೆಟ್ ಒದಗಿಸುತ್ತಿರುವ ಧೋನಿ

Update: 2019-06-15 07:19 GMT

ಹೊಸದಿಲ್ಲಿ, ಜೂ.14: ಪಾಕಿಸ್ತಾನ ಮೂಲದ ಮುಹಮ್ಮದ್ ಬಶೀರ್ ಅಲಿಯಾಸ್ ಚಾಚಾ ಚಿಕಾಗೊ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಡುವಿನ ಸಂಬಂಧ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿದೆ.

2011ರಿಂದಲೂ ಧೋನಿ ಚಾಚಾ ಚಿಕಾಗೋಗೆ ಭಾರತ-ಪಾಕ್ ಪಂದ್ಯ ವೀಕ್ಷಿಸಲು ಟಿಕೆಟ್ ಒದಗಿಸುತ್ತಿದ್ದಾರೆ. ಧೋನಿಯ ಈ ನಡೆ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದೆ. ಮುಹಮ್ಮದ್ ಬಶೀರ್ ಹೇಳುವಂತೆ, 2011ರಲ್ಲಿ ನಡೆದ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯ ವೀಕ್ಷಿಸಲು ಮೊಹಾಲಿಗೆ ಆಗಮಿಸಿದಾಗ ಪಂದ್ಯದ ಟಿಕೆಟ್ ಮುಗಿದಿದೆ ಎಂದು ಅವರಿಗೆ ತಿಳಿಸಲಾಗಿತ್ತು. ಇದರಿಂದ ಬೇಸರಗೊಂಡ ಬಶೀರ್, ನಾನು ಈ ಪಂದ್ಯವನ್ನು ವೀಕ್ಷಿಸಬೇಕು ಎಂದು ಬರೆದಿದ್ದ ಭಿತ್ತಿಪತ್ರವನ್ನು ಹಿಡಿದು ಮೈದಾನದ ಹೊರಗೆ ಕುಳಿತಿದ್ದರು. ಸ್ವಲ್ಪ ಹೊತ್ತಿನ ನಂತರ ಒಬ್ಬ ಹುಡುಗ ಅಲ್ಲಿಗೆ ಬಂದು ಒಂದು ಲಕೋಟೆಯನ್ನು ಬಶೀರ್ ಕೈಗಿತ್ತು ಇದನ್ನು ಧೋನಿಯವರು ನೀಡಿದ್ದಾರೆ ಎಂದು ತಿಳಿಸಿ ಹೋದ. ಆ ಲಕೋಟೆಯನ್ನು ತೆರೆದಾಗ ಅದರೊಳಗೆ ಪಂದ್ಯದ ಒಂದು ಟಿಕೆಟ್ ಇತ್ತು. ಅಲ್ಲಿಂದ ಆರಂಭವಾದ ಧೋನಿ-ಬಶೀರ್ ಅನುಬಂಧ ಈಗಲೂ ಮುಂದುವರಿದಿದೆ.

ರವಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯ ವೀಕ್ಷಿಸಲು ಬಶೀರ್ ಚಿಕಾಗೊದಿಂದ ಆಗಮಿಸಿದ್ದಾರೆ. ಈ ಪಂದ್ಯದ ಟಿಕೆಟ್ ಪಡೆಯಲು ಜನರು 50,000ರೂ.ನಿಂದ 70,000ರೂ.ವರೆಗೆ ಪಾವತಿಸಲು ಸಿದ್ಧರಿದ್ದಾರೆ. ಆದರೆ ಬಶೀರ್ ಮಾತ್ರ ಟಿಕೆಟನ್ನು ಉಚಿತವಾಗಿ ಧೋನಿ ವತಿಯಿಂದ ಪಡೆಯಲಿದ್ದಾರೆ. ಹಾಗಾಗಿಯೇ ಅವರು ಮುಂಗಡ ಟಿಕೆಟ್ ನಿಗದಿಪಡಿಸದೆಯೇ ವಿಶ್ವಕಪ್ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ. ಸದ್ಯ ರವಿವಾರದ ಪಂದ್ಯದಲ್ಲಿ ಬಶೀರ್ ಟೀಂ ಇಂಡಿಯಾಗೆ ಬೆಂಬಲ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News