50 ಮುಸ್ಲಿಂ ಕುಟುಂಬಗಳಿರುವ ಈ ಗ್ರಾಮದಲ್ಲಿ ಮನೆಯೊಳಗೇ ದಫನ!

Update: 2019-06-15 04:16 GMT

ಲಕ್ನೋ, ಜೂ.15: ಆಗ್ರಾ ಎಂಬ ಹೆಸರೇ ಅಮರ ಪ್ರೀತಿಗೆ ಸಮರ್ಪಿತವಾದ ತಾಜ್‌ಮಹಲ್ ಜತೆ ತಳಕು ಹಾಕಿಕೊಂಡಿದೆ. ವಿಚಿತ್ರವೆಂದರೆ, ಇಲ್ಲಿನ ಜನ ತಮ್ಮ ಪ್ರೀತಿಪಾತ್ರರು ಮೃತಪಟ್ಟಾಗ ಮೃತದೇಹ ಹೂಳಲು ಕೂಡಾ ಜಾಗವಿಲ್ಲದೇ ತಮ್ಮ ಮನೆಯೊಳಗೇ ದಫನ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಆಗ್ರಾದಿಂದ 30 ಕಿಲೋಮೀಟರ್ ದೂರದಲ್ಲಿ ಆಗ್ರಾ- ಜೈಪುರ ಹೆದ್ದಾರಿ ಪಕ್ಕದಲ್ಲಿರುವ ಚಾಹ್ ಪೊಖಾರ್ ಎಂಬ ಪುಟ್ಟ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಈ ಸ್ಮಶಾನಗಳ ಗ್ರಾಮದಲ್ಲಿರುವ ಮುಸ್ಲಿಂ ಕುಟುಂಬಗಳಲ್ಲಿ ಯಾರೇ ಮೃತಪಟ್ಟರೂ, ಅವರ ಮನೆಯೊಳಗೆಯೇ ದಫನ ಮಾಡುತ್ತಾರೆ. ಇದು ಸಂಪ್ರದಾಯವಲ್ಲ; ಅನಿವಾರ್ಯತೆ ಎಂದು ಗ್ರಾಮಸ್ಥರು ಹೇಳುತ್ತಾರೆ.

300ಕ್ಕೂ ಹೆಚ್ಚು ಮಂದಿ ವಾಸಿಸುವ ಈ ಗ್ರಾಮದಲ್ಲಿ 50 ಮುಸ್ಲಿಂ ಕುಟುಂಬಗಳಿವೆ. ಆದರೆ ದಫನಕ್ಕೆ ನಿಗದಿಪಡಿಸಿದ ಸ್ಥಳ ಇಲ್ಲ. ಬಹುತೇಕ ಮಂದಿ ಭೂರಹಿತರಾಗಿದ್ದು, ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು. ಭೂಮಿ ಇರುವವರು ತಮ್ಮ ಜಮೀನಿನಲ್ಲಿ ದಫನ ಮಾಡುತ್ತಾರೆ. "ನಾನು ಪತ್ನಿ ಹಾಗೂ ಮಗಳು ಮೃತಪಟ್ಟಾಗ ಮನೆಯಲ್ಲೇ ದಫನ ಮಾಡಬೇಕಾಯಿತು" ಎಂದು ಗ್ರಾಮದ ನೂರ್ ಮುಹಮ್ಮದ್ ಎಂಬವರು ಹೇಳುತ್ತಾರೆ.

ಸ್ಥಳೀಯರ ಪ್ರಕಾರ, ಹಲವು ಮನೆಗಳ ಅಡುಗೆಕೋಣೆ ಅಥವಾ ಬೆಡ್‌ರೂಂ ಪಕ್ಕದಲ್ಲೇ ದಫನ ಮಾಡಲಾಗಿದೆ. ಮಹಿಳೆಯರು ಸಮಾಧಿ ಪಕ್ಕದಲ್ಲೇ ಅಡುಗೆ ಮಾಡಬೇಕಾದ ಸ್ಥಿತಿ. ಇನ್ನು ಕೆಲವು ಕಡೆಗಳಲ್ಲಿ ಹೆಬ್ಬಾಗಿಲ ಪಕ್ಕದಲ್ಲೇ ಸಮಾಧಿ. "ಕುಟುಂಬ ದೊಡ್ಡದಾಗಿದ್ದಷ್ಟೂ ಮನೆಯೊಳಗೆ ಸಮಾಧಿಗಳು ಹೆಚ್ಚು" ಎಂದು ಮತ್ತೊಬ್ಬ ಗ್ರಾಮಸ್ಥ ಫಿರೋಝ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News