ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಮಾಜಿ ಪ್ರಧಾನಿಗಳಿಲ್ಲ !

Update: 2019-06-15 15:12 GMT

ಹೊಸದಿಲ್ಲಿ, ಜೂ.15: ಸಂಸತ್ತಿನ ಪ್ರಥಮ ಬಜೆಟ್ ಅಧಿವೇಶನ ಜೂನ್ 17ರಂದು ನಿಗದಿಯಾಗಿದ್ದು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಮಾಜಿ ಪ್ರಧಾನಿಗಳ್ಯಾರೂ ಉಪಸ್ಥಿತರಿರುವುದಿಲ್ಲ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಶುಕ್ರವಾರ ಅಂತ್ಯಗೊಂಡಿದ್ದರೆ, ಎಚ್‌ಡಿ ದೇವೇಗೌಡ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸೋಲುಂಡಿದ್ದಾರೆ.

1991ರಲ್ಲಿ ಅಸ್ಸಾಂನಿಂದ ರಾಜ್ಯಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಉಪಸ್ಥಿತರಿರುವುದಿಲ್ಲ. ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಸಿಂಗ್ ರಾಜ್ಯಸಭೆಗೆ ಆಯ್ಕೆಯಾಗಲು ಅಡ್ಡಿಯಾಗಿದೆ. 43 ಪ್ರಥಮ ಪ್ರಾಶಸ್ತ್ಯದ ಮತದ ಅಗತ್ಯವಿರುವ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 25 ಶಾಸಕರನ್ನು ಹೊಂದಿದೆ. ಇತರ ರಾಜ್ಯಗಳಿಂದಲೂ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವಿಲ್ಲ. ಅಸ್ಸಾಂನಿಂದ ಬಿಜೆಪಿಯ ಕಾಮಾಖ್ಯ ಪ್ರಸಾದ್ ತಾಸ ಮತ್ತು ಎಜಿಪಿಯ ಬೀರೇಂದರ್ ಪ್ರಸಾದ್ ಬೈಷ್ಯ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಡಿಶಾದಲ್ಲಿ 4, ತಮಿಳುನಾಡಿನಲ್ಲಿ 1, ಬಿಹಾರದಲ್ಲಿ 2 ಮತ್ತು ಗುಜರಾತ್‌ನಲ್ಲಿ ಒಂದು (ರಾಜ್ಯಸಭೆ) ಸ್ಥಾನ ಸೇರಿದಂತೆ ಒಟ್ಟು 9 ಸ್ಥಾನ ಖಾಲಿಯಿದೆ. ಗುಜರಾತ್ ಹೊರತುಪಡಿಸಿ ಉಳಿದ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಅಗತ್ಯವಿರುವ ಸದಸ್ಯಬಲವನ್ನು ಹೊಂದಿಲ್ಲ. ಗುಜರಾತ್‌ನಲ್ಲಿ ಕನಿಷ್ಟ ಒಂದು ಸ್ಥಾನ ಪಡೆಯಲು ಕಾಂಗ್ರೆಸ್ ಪ್ರಯತ್ನಿಸಲಿದೆ.

ಮನಮೋಹನ್ ಸಿಂಗ್‌ರನ್ನು ಕರ್ನಾಟಕ, ಛತ್ತೀಸ್‌ಗಢ, ರಾಜಸ್ತಾನ ಅಥವಾ ಪಂಜಾಬ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಬಹುದು. ಆದರೆ ಈ ರಾಜ್ಯಗಳಲ್ಲಿ ಈಗ ಸ್ಥಾನ ಖಾಲಿಯಿಲ್ಲ. ಇನ್ನೋರ್ವ ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಎಚ್‌ಡಿ ದೇವೇಗೌಡ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೆದುರು ಸೋಲುಂಡಿರುವ ಕಾರಣ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ.

ಹಾಸನ ಸಂಸದೀಯ ಕ್ಷೇತ್ರದಲ್ಲಿ 1991ರಲ್ಲಿ ಪ್ರಥಮ ಬಾರಿಗೆ ಗೆದ್ದಿದ್ದ ದೇವೇಗೌಡರು 2004ರಿಂದ 2019ರವರೆಗೆ ಕೇತ್ರದಲ್ಲಿ ಸತತ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಿನಿಂದ ಕಣಕ್ಕೆ ಇಳಿದಿದ್ದರು. ಹಾಸನದಲ್ಲಿ ಪ್ರಜ್ವಲ್ ಗೆದ್ದರೆ ತುಮಕೂರಿನಲ್ಲಿ ದೇವೇಗೌಡರು ಸೋಲುಂಡಿದ್ದರು. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ದೇವೇಗೌಡರ ಅನುಪಸ್ಥಿತಿಯೂ ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News