ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಗೆ ಹಾಜರಾತಿಯಿಂದ ವಿನಾಯಿತಿ ನೀಡಿದ ನ್ಯಾಯಾಲಯ

Update: 2019-06-15 18:14 GMT

ಮುಂಬೈ, ಜೂ. 15: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಮಾಲೇಗಾಂವ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯದ ಮುಂದೆ ಶನಿವಾರ ಹಾಜರಾತಿಯಿಂದ ವಿನಾಯಿತಿ ನೀಡಲಾಯಿತು.

 ಮುಂಬೈ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಲ್ಲಿ ವಿನಾಯಿತಿ ನೀಡಬೇಕು ಎಂದು ಪ್ರಜ್ಞಾ ಸಿಂಗ್ ಠಾಕೂರ್ ಪರ ವಕೀಲ ನ್ಯಾಯಲಯದ ಮುಂದೆ ಮನವಿ ಮಾಡಿದರು. ಈ ಸಂದರ್ಭ ವಿಶೇಷ ನ್ಯಾಯಾಧೀಶ ವಿ.ಎಸ್. ಪದಾಲ್ಕರ್ ಗೈರು ಹಾಜರಾಗಿದ್ದರು. ಅವರ ಬದಲಿಗೆ ಇದ್ದ ನ್ಯಾಯಮೂರ್ತಿಗಳು ಅನುಮತಿ ನೀಡಿದರು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್ ತಿಳಿಸಿದ್ದಾರೆ.

ಹಾಜರಾಗುವುದರಿಂದ ವಿನಾಯಿತಿ ಮನವಿಗೆ ಉಸ್ತುವಾರಿ ನ್ಯಾಯಾಲಯ ಅನುಮತಿ ನೀಡಿತು ಹಾಗೂ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಮಧ್ಯಪ್ರದೇಶದ ಭೋಪಾಲ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸಿದ ಬಳಿಕ ಠಾಕೂರ್ ಅವರು ಮೊದಲ ಬಾರಿಗೆ ಕಳೆದ ವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಆದಾಗ್ಯೂ, ಅನಾರೋಗ್ಯದ ಹಿನ್ನೆಲೆಯಲ್ಲಿ ಈ ವಾರ ಸೋಮವಾರದಿಂದ ಶುಕ್ರವಾರದ ವರೆಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News