ದಶಕಗಳಷ್ಟು ಹಳೆಯ ಆದಾಯ ತೆರಿಗೆ ಕಾಯ್ದೆಯ ಪರಿಷ್ಕರಣೆಗೆ ಸರಕಾರ ಸಜ್ಜು

Update: 2019-06-16 17:05 GMT

ಹೊಸದಿಲ್ಲಿ,ಜೂ.16: ವ್ಯಕ್ತಿಗತ ತೆರಿಗೆದಾತರಿಗೆ ತೆರಿಗೆ ಹೊರೆಯನ್ನು ತಗ್ಗಿಸಲು ಮತ್ತು ಸುಲಭ ಅನುಸರಣೆಗಾಗಿ ಪ್ರಮುಖ ಆದಾಯ ತೆರಿಗೆ ಸುಧಾರಣೆಗಳನ್ನು ತರಲು ಸರಕಾರವು ಸದ್ದಿಲ್ಲದೆ ಕೆಲಸ ಮಾಡುತ್ತಿರುವಂತಿದೆ.

ಹಾಲಿಯಿರುವ ದಶಕಗಳಷ್ಟು ಹಳೆಯದಾಗಿರುವ ಆದಾಯ ತೆರಿಗೆ ಕಾಯ್ದೆಯನ್ನು ಪರಿಷ್ಕರಿಸುವ ಕಾರ್ಯ ಪೂರ್ಣಗೊಂಡಿದೆ,ಆದರೆ 2019-20ರ ಕೇಂದ್ರ ಮುಂಗಡಪತ್ರ ಮಂಡನೆಗೆ ಮುನ್ನ ಜನರ ನಿರೀಕ್ಷೆಗಳನ್ನು ಹತೋಟಿಯಲ್ಲಿಡಲು ಅದನ್ನು ತಡೆಹಿಡಿಯಲಾಗಿದೆ ಎನ್ನಲಾಗುತ್ತಿದೆ.

ನೂತನ ನೇರ ತೆರಿಗೆ ಕಾನೂನು ಹೆಚ್ಚುಕಡಿಮೆ ಪೂರ್ಣಗೊಂಡಿದೆ. ನಾವು ಹಣಕಾಸು ಮಸೂದೆಯ ಮೇಲೆ ಗಮನವನ್ನು ಕೇಂದ್ರೀಕರಿಸಿರುವುದರಿಂದ ಮುಂಗಡಪತ್ರ ಮಂಡನೆಯ ಬಳಿಕ ಅದು ಹೊರಬೀಳಬೇಕು ಎಂದು ಅಧಿಕಾರಿಯೋರ್ವರು ತಿಳಿಸಿದರು. ಕರಡು ಕಾಯ್ದೆಯು ಈಗಲೇ ಬಹಿರಂಗಗೊಂಡಿದ್ದರೆ ಅದು ಅನಗತ್ಯ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿತ್ತು ಎಂದ ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ನೂತನ ಕಾಯ್ದೆಯು ವೇತನದಾರರಿಗೆ ತೆರಿಗೆ ಹೊರೆಯನ್ನು ತಗ್ಗಿಸುವ ಜೊತೆಗೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯನ್ನೂ ಸರಳಗೊಳಿಸಲಿದೆ ಎಂಬ ಸುಳಿವನ್ನು ಅವರು ನೀಡಿದರು. ಇದರಿಂದಾಗಿ ತೆರಿಗೆದಾತರ ಸಂಖ್ಯೆ ಹೆಚ್ಚಲಿದೆ ಎಂದರು.

ನೂತನ ಕಾಯ್ದೆಯ ಕರಡನ್ನು ಸಿದ್ಧಪಡಿಸಲು ರಚಿಸಲಾಗಿರುವ ಕಾರ್ಯಪಡೆಯು ಮೇ 26ರಂದು ತನ್ನ ವರದಿಯನ್ನು ಸಲ್ಲಿಸಲು ಎರಡು ತಿಂಗಳ ಸಮಯ ವಿಸ್ತರಣೆಯನ್ನು ಪಡೆದುಕೊಂಡಿದೆ. 50 ವರ್ಷಗಳಿಗೂ ಹಳೆಯದಾದ ಕಾಯ್ದೆ ಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ 2017,ನವೆಂಬರ್‌ನಲ್ಲಿ ಈ ಕಾರ್ಯಪಡೆಯನ್ನು ರಚಿಸಲಾಗಿತ್ತು.

ಇದು ಆದಾಯ ತೆರಿಗೆ ಕಾಯ್ದೆಯನ್ನು ಮರುರಚಿಸುವ ಮೂರನೇ ಪ್ರಯತ್ನವಾಗಿದೆ. ನೂತನ ಕಾನೂನು ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಒಳಗೊಂಡರೆ ಅದು ಪರಿಪೂರ್ಣ ಕಾನೂನಾಗುತ್ತದೆ ಮತ್ತು ಇದು ಬಹಳಷ್ಟು ತೆರಿಗೆ ತಗಾದೆಗಳನ್ನು ಕಡಿಮೆ ಮಾಡುತ್ತದೆ ಎಂದು ತೆರಿಗೆ ತಜ್ಞ ರಿಯಾಝ್ ಥಿಂಗ್ನಾ ಹೇಳಿದರು.

ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರವೂ ತೆರಿಗೆ ಕಾಯ್ದೆಯನ್ನು ಪರಿಷ್ಕರಿಸಲು ಪ್ರಯತ್ನಿಸಿತ್ತು,ಆದರೆ ಅದು ಪ್ರಯತ್ನವಾಗಿಯೇ ಉಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News