ಆದಿತ್ಯನಾಥ್ ಸರಕಾರ ಬಾಕಿ ವೇತನ ಪಾವತಿಸಿಲ್ಲ: ಡಾ.ಕಫೀಲ್ ಖಾನ್ ಆರೋಪ

Update: 2019-06-16 17:11 GMT

ಗೋರಖ್‌ಪುರ, ಜೂ.16: ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ತನ್ನ ಬಾಕಿ ವೇತನವನ್ನೂ ಪಾವತಿಸುತ್ತಿಲ್ಲ ಅಥವಾ ನನ್ನ ಅಮಾನತನ್ನೂ ರದ್ದುಪಡಿಸುತ್ತಿಲ್ಲ ಎಂದು ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನ ಅಮಾನತುಗೊಂಡ ವೈದ್ಯ ಡಾ. ಕಫೀಲ್ ಖಾನ್ ಆರೋಪಿಸಿದ್ದಾರೆ.

 2017ರ ಆಗಸ್ಟ್‌ನಲ್ಲಿ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 60 ನವಜಾತ ಶಿಶುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಡಾ.ಕಫೀಲ್ ಖಾನ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ವೇತನ ಬಾಕಿಯುಳಿಸಿರುವ ಕುರಿತು ಟ್ವೀಟ್ ಮಾಡಿರುವ ಖಾನ್, ತನ್ನ ಪರವಾಗಿ ಹೇಳಿಕೆ ನೀಡುವಂತೆ ಸದ್ಯ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ)ಗೆ ಮನವಿ ಮಾಡಿದ್ದಾರೆ. ನಾನೂ ಸಂಘದ ಭಾಗವಾಗಿದ್ದೇನೆ. ನನಗೂ ಕುಟುಂಬವಿದೆ ಎಂದು ಖಾನ್ ತನ್ನ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತನ್ನ ಅಮಾನತು ಭತ್ಯೆಯನ್ನು ಪಾವತಿಸುವಂತೆ ಕೋರಿ ರಾಜ್ಯ ಆರೋಗ್ಯ ಸಚಿವ ಆಶುತೋಶ್ ಟಂಡನ್ ಅವರಿಗೆ ಬರೆದ ಪತ್ರದ ಪ್ರತಿಯನ್ನೂ ಅವರು ತಮ್ಮ ಟ್ವೀಟ್‌ಗೆ ಜೋಡಿಸಿದ್ದಾರೆ.

2019ರ ಮೇ 10ರಂದು ಕಫೀಲ್ ಖಾನ್ ಅವರ ಅಮಾನತು ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದ ಸರ್ವೋಚ್ಚ ನ್ಯಾಯಾಲಯ ಆದರೆ ಅವರಿಗೆ ಅಮಾನತು ಭತ್ಯೆಯನ್ನು ನೀಡುವಂತೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News