ವಿವಾಹದ ದಿನ ಹುತಾತ್ಮ ಯೋಧನ ಸಹೋದರಿಯನ್ನು ಅಂಗೈಯಲ್ಲಿ ನಡೆದಾಡಿಸಿದ ಗರುಡ ಕಮಾಂಡೊಗಳು

Update: 2019-06-16 18:13 GMT

ಹೊಸದಿಲ್ಲಿ, ಜೂ.16: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜೊತೆ ಹೋರಾಡುವ ವೇಳೆ ಹುತಾತ್ಮರಾದ ಗರುಡ ಕಮಾಂಡೊ ಜ್ಯೋತಿಪ್ರಕಾಶ್ ನಿರಾಲ ಅವರ ಸಹೋದರಿಯ ವಿವಾಹಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಭಾರತೀಯ ವಾಯುಪಡೆಯ ಗರುಡ ಕಮಾಂಡೊ ಪಡೆಯ ಯೋಧರು ಎಲ್ಲರಿಂದಲೂ ಶ್ಲಾಘನೆಗೆ ಒಳಗಾಗಿದ್ದಾರೆ.

 ವಿವಿಧ ಸಂದರ್ಭಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಿರಾಲ ಒಟ್ಟಾರೆ ಐದು ಉಗ್ರರನ್ನು ಹತ್ಯೆ ಮಾಡಿದ್ದರು. ಅವರ ಬಲಿದಾನವನ್ನು ಗೌರವಿಸಿ ನಿರಾಲ ಅವರಿಗೆ 2018ರ ಗಣರಾಜ್ಯೋತ್ಸವ ದಿನದಂದು ಮರಣೋತ್ತರ ಅಶೋಕ ಚಕ್ರ ನೀಡಲಾಗಿತ್ತು. ಹೆತ್ತವರ ಏಕೈಕ ಪುತ್ರನಾಗಿದ್ದ ನಿರಾಲ ಅವರಿಗೆ ನಾಲ್ವರು ಸಹೋದರಿಯರಿದ್ದಾರೆ. ನಿರಾಲ ಸಾವಿನಿಂದ ಮನೆಯ ಆಧಾರಸ್ತಂಭವೇ ಕುಸಿದು ಮಗಳ ಮದುವೆಗೆ ಹೆತ್ತವರು ಹಣ ಜೋಡಿಸಲು ಪರದಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಗರುಡ ಕಮಾಂಡೊಗಳು ಪ್ರತಿಯೊಬ್ಬರು ತಲಾ 500ರೂ. ನೀಡುವ ಮೂಲಕ ಒಟ್ಟು ಐದು ಲಕ್ಷ ರೂ.ಸಂಗ್ರಹಿಸಿ ನಿರಾಲ ಕುಟುಂಬಕ್ಕೆ ನೀಡಿದ್ದಾರೆ.

 ಅಷ್ಟು ಮಾತ್ರವಲ್ಲ ಕೆಲವು ಯೋಧರು ನಿರಾಲ ಅವರಿಗೆ ಗೌರವ ಸೂಚಿಸಿ ಅವರ ಸಹೋದರಿಯನ್ನು ತಮ್ಮ ಅಂಗೈಯಲ್ಲಿ ನಡೆಯುವಂತೆ ಮಾಡಿದ್ದಾರೆ. ಇದರ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News